ಹೇಳದೇ ಕೇಳದೇ ಗ್ರೂಪ್‌ಗೆ ಸೇರಿಸಿದರೆ ವಾಟ್ಸಾಪ್‌ಗೆ ಶಿಕ್ಷೆ?| ವಾಟ್ಸಾಪ್ ಅಧಿಕಾರಿಗಳಿಗೆ ದಂಡ, ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ| ಲೋಕಸಭೆ ಚುನಾವಣೆ ಬಳಿಕ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ
ನವದೆಹಲಿ[ಮಾ.24]: ವಾಟ್ಸ್‌ಆ್ಯಪ್‌ನಂತಹ ಜನಪ್ರಿಯ ಸೋಷಿಯಲ್ ಮೀಡಿಯಾ ಆ್ಯಪ್‌ಗಳಿಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಸಿದ್ಧತೆಯಲ್ಲಿ ತೊಡಗಿದೆ. ಯಾವುದೇ ವ್ಯಕ್ತಿಯನ್ನು ಒಂದು ಗ್ರೂಪ್‌ಗೆ ಸೇರಿಸುವ ಮುನ್ನ ಆತ/ಆಕೆಯ ಸಮ್ಮತಿ ಪಡೆದುಕೊಳ್ಳದಿದ್ದರೆ ಹಾಗೂ ಪ್ರಚೋದನಕಾರಿ ಮಾಹಿತಿಯ ಮೂಲದ ಕುರಿತು ವಿವರ ಒದಗಿಸದೇ ಇದ್ದರೆ ಸೋಷಿಯಲ್ ಮೀಡಿಯಾ ಕಂಪನಿಯ ಅಧಿಕಾರಿಗಳಿಗೆ ದಂಡ ವಿಧಿಸುವ ಹಾಗೂ ಜೈಲಿಗೂ ಕಳುಹಿಸುವ ಮಧ್ಯಂತರ ಮಾರ್ಗಸೂಚಿ ಸಜ್ಜಾಗುತ್ತಿದೆ.
ಲೋಕಸಭೆ ಚುನಾವಣೆ ಬಳಿಕ ಇವು ಜಾರಿಗೆ ಬರಲಿದ್ದು, ವಾಟ್ಸ್‌ಆ್ಯಪ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾ ಆ್ಯಪ್‌ಗಳೂ ಪಾಲಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೊಂಬಿ, ಹಿಂಸಾಚಾರಕ್ಕೆ ಕಾರಣವಾಗುತ್ತಿರುವ ಸುಳ್ಳು ಸುದ್ದಿಗಳು ಸೋಷಿಯಲ್ ಮೀಡಿಯಾಗಳ ಮೂಲಕ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ಈಗಾಗಲೇ ಸಮಾಲೋಚನೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ, ಅಂತಿಮ ನಿಯಮ ರೂಪಿಸುವ ಕಸರತ್ತಿನಲ್ಲಿ ಮಗ್ನವಾಗಿದೆ.
ಯಾವುದಾದರೂ ಪ್ರಚೋದನಾಕಾರಿ ಸಂದೇಶ ಪಸರಣವಾಗುತ್ತಿದ್ದರೆ ಅಥವಾ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಸೋಷಿಯಲ್ ಮೀಡಿಯಾ ಆ್ಯಪ್‌ಗಳು ಅದರ ಮೂಲದ ವಿವರವನ್ನು ತನಿಖಾ ಸಂಸ್ಥೆಗಳಿಗೆ ನೀಡಬೇಕು. ಆದರೆ, ಕೊಡಲು ನಮಗೆ ಇಷ್ಟವಿದೆ. ತಾಂತ್ರಿಕ ಕಾರಣದಿಂದ ಸಾಧ್ಯವಿಲ್ಲ ಎಂದು ಹೇಳುತ್ತಿವೆ. ಮಾರ್ಗಸೂಚಿಗಳು ಜಾರಿಗೆ ಬಂದರೆ ಕಾನೂನಿನ ರೀತ್ಯ ನಡೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಮ್ಮತಿ ಪಡೆಯದೇ ಯಾರನ್ನೇ ಆಗಲಿ ಗ್ರೂಪ್‌ಗೆ ಸೇರ್ಪಡೆಗೊಳಿಸುವ ಅವಕಾಶ ರದ್ದುಗೊಳಿಸುವಂತೆ ಆರು ತಿಂಗಳಿನಿಂದ ವಾಟ್ಸ್‌ಆ್ಯಪ್ ಸಂಸ್ಥೆಗೆ ಸರ್ಕಾರ ಕೋರಿಕೆ ಇಡುತ್ತಲೇ ಬಂದಿದೆ. ನಿಮ್ಮ ಬಳಿ ಯಾರದ್ದೋ ಮೊಬೈಲ್ ಸಂಖ್ಯೆ ಇದೆ ಎಂಬ ಕಾರಣಕ್ಕೆ, ಅವರ ಒಪ್ಪಿಗೆ ಪಡೆಯದೇ ಗ್ರೂಪ್‌ಗೆ ಸೇರಿಸಬಾರದು. ಆ ಬಗ್ಗೆ ಮಧ್ಯಂತರ ಮಾರ್ಗಸೂಚಿಯಲ್ಲಿ ಗಮನಹರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Mar 24, 2019, 11:11 AM IST