ಸೌರಮಂಡಲ ದಾಟಲು ಸಜ್ಜಾದ ನಾಸಾದ ವಾಯೇಜರ್-2! ಸೌರಮಂಡಲದ ಗಡಿಪ್ರದೇಶ ಹಿಲಿಯೋಸ್ಪಿಯರ್ ಬಳಿ ವಾಯೇಜರ್-2! ಈಗಾಗಲೇ ಸೌರಮಂಡಲ ದಾಟಿ ಮುನ್ನುಗ್ಗುತ್ತಿರುವ ವಾಯೇಜರ್-1!ಬ್ರಹ್ಮಾಂಡದ ನಿರ್ವಾತ ಪ್ರದೇಶದತ್ತ ನುಗ್ಗುತ್ತಿದೆ ವಾಯೇಜರ್-2 ನೌಕೆ

ವಾಷಿಂಗ್ಟನ್(ಅ.6): ಅದು 1977, ವಿಶ್ವದ ಅಗ್ರಗಣ್ಯ ಖಗೋಳ ಸಂಸ್ಥೆ ನಾಸಾ ಸೌರಮಂಡಲದ ಹೊರಗಿನ ಗ್ರಹ(ಗುರು, ಶನಿ, ಯುರೇನಸ್, ನೆಪ್ಚೂನ್)ಗಳ ಕುರಿತು ಅಧ್ಯಯನ ನಡೆಸಲು ವಾಯೇಜರ್-2 ಎಂಬ ನೌಕೆಯನ್ನು ಹಾರಿ ಬಿಟ್ಟಿತ್ತು. ಸೌರಮಂಡಲದ ಕುರಿತಾದ ಮಾನವನ ಜ್ಞಾನ ವೃದ್ಧಿಗೆ ನಾಸಾ ಮುನ್ನುಡಿ ಬರೆದಿತ್ತು.

ಈಗ ವಾಯೇಜರ್-2 ನೌಕೆ ನಭಕ್ಕೆ ಚಿಮ್ಮಿ ಬರೋಬ್ಬರಿ 41 ವರ್ಷಗಳು ಸಂದಿವೆ. ಇದಕ್ಕೂ ಮೊದಲು ಉಡಾಯಿಸಲ್ಪಟ್ಟಿದ್ದ ವಾಯೇಜರ್-1 ನೌಕೆ ಈಗಾಗಲೇ ನಮ್ಮ ದೌರಮಂಡಲ ದಾಟಿ ಬ್ರಹ್ಮಾಂಡದ ನಿರ್ವಾತ ವಲಯ ಪ್ರವೇಶಿಸಿ ಮುನ್ನುಗ್ಗುತ್ತಿದೆ. ನಾಸಾ ಲೆಕ್ಕಾಚಾರದ ಪ್ರಕಾರ ಎಲ್ಲವೂ ಸರಿಯಿದ್ದರೆ ವಾಯೇಜರ್-1 ನೌಕೆ ಇನ್ನು 70 ಸಾವಿರ ವರ್ಷಗಳ ಬಳಿಕ ಸಮೀಪದ ಮತ್ತೊಂದು ಸೌರ ಮಂಡಲ ಪ್ರವೇಶಿಸಲಿದೆ.

Scroll to load tweet…

ಈ ಮಧ್ಯೆ ವಾಯೇಜರ್-2 ನೌಕೆ ಎಲ್ಲಿದೆ, ಹೇಗಿದೆ ಎಂಬುದರ ಕುರಿತು ನಾಸಾ ಇದೀಗ ಮಾಹಿತಿ ಹೊರಗೆಡವಿದೆ. ನಾಸಾದ ಪ್ರಕಾರ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲದ ಅಂಚಿಗೆ ಬಂದು ತಲುಪಿದ್ದು, ಸೌರಮಂಡಲದ ಗಡಿಯ ಕೊನೆಯ ಪದರಾದ ಹಿಲಿಯೋಸ್ಪಿಯರ್ ಬಳಿ ಸುಳಿದಾಡುತ್ತಿದೆ.

ಅಂದರೆ ವಾಯೇಜರ್-1 ನೌಕೆಯಂತೆ ವಾಯೇಜರ್-2 ನೌಕೆ ಕೂಡ ನಮ್ಮ ಸೌರಮಂಡಲಕ್ಕೆ ಟಾಟಾ ಹೇಳಲು ಸಿದ್ಧತೆ ನಡೆಸಿದೆ. ಈ ಮೂಲಕ ಬ್ರಹ್ಮಾಂಡದ ನಿರ್ವಾತ ಪ್ರದೇಶವನ್ನು ನೌಕೆ ತಲುಪಲಿದೆ.

ಸದ್ಯ ವಾಯೇಜರ್-2 ನೌಕೆ ಭೂಮಿಯಿಂದ ಬರೋಬ್ಬರಿ 17.7 ಬಿಲಿಯನ್ ಕಿ.ಮೀ. ದೂರದಲ್ಲಿದ್ದು, ಈಗಲೂ ಸುಸ್ಥಿತಿಯಲ್ಲಿದೆ ಮತ್ತು ಭೂಮಿಗೆ ನಿಯಮಿತವಾಗಿ ಸಿಗ್ನಲ್ ಕಳುಹಿಸುತ್ತಿದೆ ಎಂದು ನಾಸಾ ತಿಳಿಸಿದೆ.

ವಾಯೇಜರ್ ನೌಕೆ 1979 ರಲ್ಲಿ ಗುರು ಗ್ರಹ, 1981 ರಲ್ಲಿ ಶನಿ ಗ್ರಹ, 1988 ರಲ್ಲಿ ಯುರೇನಸ್ ಮತ್ತು 1989 ರಲ್ಲಿ ನೆಪ್ಚೂನ್ ಗ್ರಹಗಳಿಗೆ ಭೇಟಿ ನೀಡಿ ಆ ಗ್ರಹಗಳ ಕುರಿತು ಧ್ಯಯನ ನಡೆಸಿದೆ.