ಬೆಂಗಳೂರು [ಜು.28]:  ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ವೋಡಾಫೋನ್‌ ನೆಟ್‌ವರ್ಕ್ ಸೇವೆಯಲ್ಲಿ ದಿಢೀರ್‌ ವ್ಯತ್ಯಯವಾಗಿ ಗ್ರಾಹಕರು ಪರದಾಡಿದರು.

ಶುಕ್ರವಾರವೇ ನೆಟ್‌ವರ್ಕ್ ಸೇವೆಯಲ್ಲಿ ಕೊಂಚ ಸಮಸ್ಯೆ ಕಾಣಿಸಿಕೊಂಡಿದ್ದು, ಶನಿವಾರ ಈ ಸಮಸ್ಯೆ ಹೆಚ್ಚಾಗಿತ್ತು. ಇಂಟರ್‌ನೆಟ್‌ ಸೇವೆ ಏಕಾಏಕಿ ಸ್ಥಗಿತಗೊಂಡಿದ್ದರಿಂದ ಮೊಬೈಲ್‌ ಬಳಕೆದಾರರು ಪರಿಪಾಟಲು ಪಟ್ಟರು. ವೋಡಾಫೋನ್‌ ನೆಟ್‌ವರ್ಕ್ ಬಳಸುವ ಗ್ರಾಹಕರು ಕರೆ ಮಾಡಲಾಗದೇ ಪರಿತಪಿಸಿದರು.

ಕೆಲ ಮಂದಿ ನೆಟ್‌ವರ್ಕ್ ಸೇವೆಯ ವ್ಯತ್ಯಯದ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಇಂಟರ್‌ನೆಟ್‌ ಸೇವೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವುದಾಗಿ ಹಲವರು ಟ್ವೀಟ್‌ ಮಾಡಿದ್ದರು. ಆದರೆ, ಈ ಬಗ್ಗೆ ವೋಡಾಫೋನ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದಕ್ಕೆ ಆಕ್ರೋಶ ವ್ಯಕ್ತಡಿಸಿದರು. ವಿಪರ್ಯಾಸವೆಂದರೆ, ವೋಡಾಫೋನ್‌ನ ಗ್ರಾಹಕ ಸೇವಾ ಕೇಂದ್ರಕ್ಕೂ ಕರೆಗಳು ಕನೆಕ್ಟ್ ಆಗಲಿಲ್ಲ. ಇತ್ತೀಚೆಗೆ ವೋಡಾಫೋನ್‌ ನೆಟ್‌ ವರ್ಕ್ ಸೇವೆಯಲ್ಲಿ ಆಗಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.

ನೆಟ್‌ವರ್ಕ್ ಸೇವೆ ವ್ಯತ್ಯಯಕ್ಕೆ ಕಾರಣಗಳು ತಿಳಿದು ಬಂದಿಲ್ಲ. ವೋಡೋಫೋನ್‌ ಸೇವಾ ಕಂಪನಿ ಸಹ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡದಿರುವುದರಿಂದ ಗ್ರಾಹಕರು ಗೊಂದಲಕ್ಕೆ ಸಿಲುಕಿದ್ದಾರೆ.