ಜೆರುಸಲೇಮ್(ಫೆ.29): ಮೊಬೈಲನ್ನು ಪ್ಯಾಂಟಿನ ಜೇಬಿನಲ್ಲಿಟ್ಕೊಳ್ಳೋದು ನಿಮ್ಮ ಪುರುಷತ್ವಕ್ಕೇ ಅಪಾಯ! ಇಸ್ರೇಲಿ ತಜ್ಞರ ಅಧ್ಯಯನದ ವರದಿ ಹೀಗೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ದಿನದಲ್ಲಿ ಕನಿಷ್ಠ ೨ ತಾಸು ಮೊಬೈಲನ್ನು ಜೇಬಿನಲ್ಲಿಟ್ಟುಕೊಂಡರೆ ವೀರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತದಂತೆ.

ಮೊಬೈಲಿನಿಂದ ಹೊರಹೊಮ್ಮುವ ಎಲೆಕ್ಟ್ರೋಮ್ಯಾಗ್ನಟಿಕ್ ತರಂಗಗಳು ಮತ್ತು ಉಷ್ಣಶಕ್ತಿಯು ವೀರ್ಯಾಣುಗಳ ಸಂಖ್ಯೆಯನ್ನು ಕ್ಷೀಣಿಸುವ ಕೆಲಸ ಮಾಡುತ್ತವೆ ಎಂದಿದ್ದಾರೆ ತಜ್ಞರು. ಅಲ್ಲದೆ, ಚಾರ್ಜಿಂಗ್‌ಗೆ ಹಾಕಿರುವ ಮೊಬೈಲಿನಲ್ಲಿ ಮಾತನಾಡುವುದರಿಂದಲೂ ವೀರ್ಯತ್ವಕ್ಕೆ ಅಪಾಯ ಎಂದಿದ್ದಾರೆ. ಮಲಗುವಾಗ ಮೊಬೈಲನ್ನು ಹಾಸಿಗೆ ಬಳಿ ಇಟ್ಟುಕೊಂಡು ನಿದ್ರಿಸುವವರಲ್ಲೂ ವೀರ್ಯಾಣು ಉತ್ಪಾದನೆ ಕುಗ್ಗುತ್ತದಂತೆ.

ಒಟ್ಟಾರೆ ೧೦೯ ಪುರುಷರ ಮೇಲೆ ಅಧ್ಯಯನ ನಡೆಸಿರುವ ವೈದ್ಯರ ತಂಡ ಈ ಸಂಶೋಧನಾ ವರದಿಯನ್ನು ‘ರಿಪ್ರೊಡಕ್ಟಿವ್ ಬಯೋಮೆಡಿಸಿನ್’ ಪತ್ರಿಕೆಯಲ್ಲಿ ಪ್ರಕಟಿಸಿದೆ. ಇದೇ ತಂಡ ಪ್ಯಾಂಟು ಧರಿಸುವ ಮಹಿಳೆಯರ ಮೇಲೂ ಸಂಶೋಧನೆ ನಡೆಸಲಿದೆ.