ನಾವು ಏನೇ ಸರ್ಚ್ ಮಾಡಬೇಕಾದರೂ ಗೂಗಲಿಸುತ್ತೇವೆ. ಒಂದೇ ವಿಷಯ ನೂರಾರು ವೆಬ್‌ಸೈಟ್‌ಗಳಲ್ಲಿ ವಿಭಿನ್ನವಾಗಿ ಸುಲಭವಾಗಿ ಸಿಗುತ್ತದೆ. ನಮಗೆ ಬೇಕಾದ ಭಾಷೆಯಲ್ಲಿ, ನಮಗೆ ಇಷ್ಟಬಂದಂತೆ ನೀಡುವ ಜಾಲತಾಣಗಳಿಗೇನೂ ಕೊರತೆಯಿಲ್ಲ. ಆದರೆ, ವರ್ಲ್ಡ್ ವೈಡ್ ವೆಬ್‌ನಲ್ಲಿ ಭಾರತೀಯ ಭಾಷೆಗಳ ಪಾಲೆಷ್ಟು? ಸಹಜವಾಗಿಯೇ ಇಂಗ್ಲಿಷ್ ಪಾರಮ್ಯದ ಜಾಲತಾಣಗಳಲ್ಲಿ ಕನ್ನಡದ ಪಾಲೆಷ್ಟು?

ಮಾಹಿತಿ ತಂತ್ರಜ್ಞಾನ ಸ್ಫೋಟದ ಬಳಿಕ ವೆಬ್ ಸೈಟ್‌ಗಳು ಜೀವನದ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ಸಾಮಾನ್ಯ ವ್ಯಕ್ತಿಯಿಂದ ಹಿಡಿದು, ಶಿಕ್ಷಣ, ವಾಣಿಜ್ಯ, ಮಾಧ್ಯಮ, ಆಡಳಿತ ಮುಂತಾದ ಎಲ್ಲಾ ರಂಗಗಳನ್ನು ವೆಬ್‌ಸೈಟ್‌ ಇಲ್ಲದೇ ಕಲ್ಪಿಸಿಕೊಳ್ಳುವ ಸ್ಥಿತಿಯಲ್ಲಿಯೂ ನಾವಿಲ್ಲ.

ಆದರೆ, ಪ್ರಾದೇಶಿಕ ಭಾಷಾ ದೃಷ್ಟಿಯಿಂದ ನೋಡುವುದಾದರೆ ವೆಬ್‌ಲೋಕ ಹೇಗಿದೆ ಎಂಬ ಜಿಜ್ಞಾಸೆ ಭಾಷಾಪ್ರಿಯರಿಗೆ ಇರುವುದು ಸಹಜ. W3Techs ಎಂಬ ಸಂಸ್ಥೆಯು ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ಅಚ್ಚರಿದಾಯಕ ವಿಷಯಗಳು ಬಹಿರಂಗವಾಗಿವೆ.

ಜಗತ್ತಿನ ಎಲ್ಲಾ ವೆಬ್‌ಸೈಟ್‌ಗಳ ಪೈಕಿ ಇಂಗ್ಲಿಷ್ ಭಾಷೆ ಸಹಜವಾಗಿಯೇ ಸಿಂಹಪಾಲು ಹೊಂದಿದೆ. ಒಟ್ಟಾರೆ ಶೇ.52.4 ವೆಬ್‌ಸೈಟ್‌ಗಳು ಆಂಗ್ಲ ಭಾಷೆಯಲ್ಲಿವೆ. ನಂತರದ ಸ್ಥಾನಗಳನ್ನು ಜರ್ಮನಿ [ಶೇ.6.3], ರಷ್ಯನ್ [ಶೇ.6.2] ಸ್ಪ್ಯಾನಿಷ್ [ಶೇ.5.1] ....ಹೀಗೆ ಜಗತ್ತಿನ ವಿವಿಧ ಭಾಷೆಗಳು ತಮ್ಮ ಪಾಲು ಹೊಂದಿವೆ. 

ವಿಶ್ವದ ಭಾಷೆಗಳ ಕಥೆ ಇದಾದರೆ, ಭಾರತೀಯ ಭಾಷೆಗಳ ಪಾಲೆಷ್ಟು ಎಂಬ ಕುತೂಹಲ ಸಹಜ. ಸಹಜವಾಗಿ ಹಿಂದಿ ಭಾಷಗರು ಹೆಚ್ಚಿರುವ ನಮ್ಮ ದೇಶದಲ್ಲಿ ಹಿಂದಿ ಜಾಲತಾಣಗಳ ಪಾಲು ಹೆಚ್ಚು. ವಿಶ್ವದ ವೆಬ್‌ಸೈಟ್‌ಗಳಲ್ಲಿ ಶೇ.0.1ರಷ್ಟು ಪಾಲಿದೆ ಅಷ್ಟೆ. ಇನ್ನು ಕನ್ನಡದ್ದು? ಶೇ.0.1ಗಿಂತಲೂ ಕಡಿಮೆ ಎನ್ನುವುದನ್ನು ಹೇಳಬೇಕಾಗಿಲ್ಲ ಅಲ್ಲವೇ?