ಇರಾನ್‌ನಲ್ಲಿ ಹೊಡೆದುರುಳಿಸಲಾದ ಯುದ್ಧವಿಮಾನದ ಪೈಲಟ್‌ನನ್ನು 'ಗೋಸ್ಟ್ ಮರ್ಮರ್' ಎಂಬ ತಂತ್ರಜ್ಞಾನ ಬಳಸಿ ಅಮೆರಿಕ ಸೇನೆ ರಕ್ಷಿಸಿದೆ. ಈ ಉಪಕರಣವು ಎಐ ಮತ್ತು ಕ್ವಾಂಟಂ ಮ್ಯಾಗ್ನೆಟೊಮೆಟ್ರಿ ತಂತ್ರಜ್ಞಾನ ಬಳಸಿ, ದೂರದಿಂದಲೇ ಮಾನವನ ಹೃದಯ ಬಡಿತದ ಸಂಕೇತಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
ವಾಷಿಂಗ್ಟನ್ (ಏ.11): ಇರಾನ್ ಹೊಡೆದುರುಳಿಸಿದ್ದ ಎಫ್15 ಯುದ್ಧವಿಮಾನದ ಫೈಟರ್ ಪೈಲಟ್‌ನನ್ನು ರೋಚಕ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿ ರಕ್ಷಿಸಲು ಅಮೆರಿಕದ ಸೇನೆಗೆ ನೆರವಾಗಿದ್ದು ‘ಗೋಸ್ಟ್ ಮರ್ಮರ್’ ಎಂಬ ಅತ್ಯಾಧುನಿಕ ಟೂಲ್! ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗಾಗಿ ಅಭಿವೃದ್ಧಿಪಡಿಸಿದ ಈ ಟೂಲ್ ಅನ್ನು ಅಮೆರಿಕ ಸೇನೆ ರಕ್ಷಣಾ ಕಾರ್ಯಾಚರಣೆಗೆ ಬಳಸಿದ್ದು ಇದೇ ಮೊದಲು ಎನ್ನಲಾಗಿದೆ.
‘ಗೋಸ್ಟ್ ಮರ್ಮರ್’ ಎನ್ನುವುದು ಮಾನವನ ಹೃದಯ ಬಡಿತದ ಸೂಕ್ಷ್ಮ ವಿದ್ಯುತ್ಕಾಂತೀಯ ಸಂಕೇತಗಳನ್ನು ದೂರದಿಂದಲೇ ಪತ್ತೆಹಚ್ಚುವ ಟೂಲ್. ಇದು ದಕ್ಷಿಣ ಇರಾನ್‌ನ ಗುಡ್ಡಹತ್ತಿ ಜೀವಉಳಿಸಿಕೊಂಡಿದ್ದ ಅಧಿಕಾರಿ (ಡೂಡ್ 44 ಬ್ರಾವೋ) ಯ ಇರುವಿಕೆಯನ್ನು ಏ.5ರಂದು 40 ಮೈಲಿ ದೂರದಲ್ಲಿ ನಿಖರವಾಗಿ ಪತ್ತೆ ಹಚ್ಚಿದೆ ಎಂದು ಹೇಳಲಾಗುತ್ತಿದೆ.
ಏನಿದು ಗೋಸ್ಟ್ ಮರ್ಮರ್?:
ಇದೊಂದು ಎಐ ಮತ್ತು ಕ್ವಾಂಟಂ ಮ್ಯಾಗ್ನೆಟೊಮೆಟ್ರಿ(ಕ್ವಾಂಟಂ ವ್ಯವಸ್ಥೆಗಳನ್ನು ಬಳಸಿಕೊಂಡು ಮ್ಯಾಗ್ನೆಟಿಕ್ ಕ್ಷೇತ್ರಗಳನ್ನು ನಿಖರತೆಯೊಂದಿಗೆ ಪತ್ತೆಹಚ್ಚುವುದು) ಯನ್ನು ಜೋಡಿಸಿ ನಿರ್ಮಿಸಿದ ವಿಶಿಷ್ಟ ವ್ಯವಸ್ಥೆ/ಟೂಲ್ ಆಗಿದೆ. ಇದು ವಾತಾವರಣದಲ್ಲಿ ಸೃಷ್ಟಿಯಾಗುವ ಶಬ್ದಗಳ ನಡುವೆ ಮಾನವನ ಹೃದಯ ಬಡಿತ ಸೃಷ್ಟಿಸುವ ಸಂಕೇತವನ್ನು ಪ್ರತ್ಯೇಕಿಸಿ ಗುರುತಿಸಿ ಕೆಲಸ ಮಾಡುತ್ತದೆ. ಒಂದು ರೀತಿಯಲ್ಲಿ ಸ್ಟೇಡಿಯಂವೊಂದರಲ್ಲಿ ನಿರ್ದಿಷ್ಟ ಧ್ವನಿಯನ್ನು ಹೃದಯ ಬಡಿತದ ಆಧಾರದ ಮೇಲೆ ಪತ್ತೆಹಚ್ಚುವ ಸಾಹಸ ಇದು.
ಸಾಮಾನ್ಯವಾಗಿ ಮಾನವನ ಹೃದಯ ಬಡಿತ ಎಷ್ಟು ಸೂಕ್ಷ್ಮ ಎಂದರೆ ಅದನ್ನು ಸೆನ್ಸರ್‌ಗಳನ್ನು ಹೃದಯದ ಬಲಭಾಗದತ್ತ ಒತ್ತಿದಾಗ ಮಾತ್ರ ನಿಖರವಾಗಿ ಪತ್ತೆ ಹಚ್ಚಬಹುದು. ಆದರೆ, ಕ್ವಾಂಟಂ ಮ್ಯಾಗ್ನೆಟೊಮೆಟ್ರಿ ಬಳಸಿದ ‘ಗೋಸ್ಟ್ ಮರ್ಮರ್’ ವ್ಯವಸ್ಥೆಯು ಈ ಸಂಕೇತಗಳನ್ನು ದೂರದಿಂದಲೂ ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅಮೆರಿಕದ ಲಾಕ್‌ಹೀಡ್ ಮಾರ್ಟಿನ್‌ನ ಸ್ಕಂಕ್ ವರ್ಕ್ಸ್ ಈ ಟೂಲ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ರಕ್ಷಣಾ ಕಾರ್ಯಾಚರಣೆಯೊಂದರಲ್ಲಿ ಬಳಕೆಯಾಗುತ್ತಿರುವುದು ಇದೇ ಮೊದಲು.
ಗೋಸ್ಟ್ ಮರ್ಮರ್ ಅಂದರೇನು?
ಮರ್ಮರ್ ಅನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೃದಯ ಬಡಿತ ಎಂದು ಹೇಳಿದರೆ, ಗೋಸ್ಟ್- ಪ್ರಾಯೋಗಿಕ ಪರಿಸ್ಥಿತಿಯಲ್ಲಿ ನಾಪತ್ತೆಯಾದವನಿಗಾಗಿ ಬಳಸಲಾಗುತ್ತದೆ. ಹೀಗಾಗಿ ‘ಗೋಸ್ಟ್ ಮರ್ಮರ್’ ಎಂದು ಈ ವ್ಯವಸ್ಥೆಗೆ ಹೆಸರಿಡಲಾಗಿದೆ ಎಂದು ಹೇಳಲಾಗುತ್ತದೆ.


