ರೇಟಿಂಗ್- ಡಿಜಿಟಲ್ ದುನಿಯಾದ ಒಂದು ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂದರೆ ತಪ್ಪಾಗಲಾರದು. ಯಾವುದೇ ಪ್ರಾಡಕ್ಟ್ ಅಥವಾ ಸೇವೆ ಇರಲಿ, ರೇಟಿಂಗ್ ವ್ಯವಸ್ಥೆ ಬಳಕೆದಾರರಿಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಆನ್‌ಲೈನ್‌ನಲ್ಲಿ ಸಿಗೋ ಸಣ್ಣ ಬ್ರಷ್‌ನಿಂದ ಹಿಡಿದು, ಬಟ್ಟೆ, ಫರ್ನಿಚರ್, ಮೊಬೈಲ್, ದೊಡ್ಡ ದೊಡ್ಡ ಟೀವಿಗಳು... ಹೀಗೆ ಪ್ರತಿಯೊಂದಕ್ಕೂ ಬಳಕೆದಾರರು ರೇಟಿಂಗ್ ನೀಡಬಹುದು. ಆ ರೇಟಿಂಗ್ ಮೂಲಕ ಇತರರು ಕಂಪನಿ/ ಉತ್ಪನ್ನದ ಬಗ್ಗೆ ಒಂದು ಅಭಿಪ್ರಾಯ ತಾಳುತ್ತಾರೆ. ಉತ್ತಮ ರೇಟಿಂಗ್ ಇದ್ದರೆ ಗ್ರಾಹಕರು ಹೆಚ್ಚಾಗುತ್ತಾರೆ, ಇಲ್ಲ ಕಂಪನಿಗೆ ಕೆಟ್ಟದಿನಗಳು ಬಂದಿವೆ ಎಂದರ್ಥ.

ಅಷ್ಟೇ ಅಲ್ಲ, ಉಬರ್- ಓಲಾಗಳಂತಹ ಸಾರಿಗೆ ಸೇವೆಗಳಲ್ಲೂ ಗ್ರಾಹಕರು ಚಾಲಕ/ಸೇವೆ ಬಗ್ಗೆ ರೇಟಿಂಗ್ ನೀಡುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಒಂದರ್ಥದಲ್ಲಿ ರೇಟಿಂಗ್ ಕಂಪನಿಗಳ ಪರ/ವಿರುದ್ಧ ಬಳಕೆದಾರರಿಗೆ ದಕ್ಕಿರುವ ಪ್ರಬಲ ಅಸ್ತ್ರ.

ಇದನ್ನೂ ಓದಿ | ನಿಮಗಿಷ್ಟವಾಗುತ್ತೋ ಇಲ್ವೋ... WhatsAppನಲ್ಲಿ ಹೊಸ ಫೀಚರ್ ಬರೋದು ಪಕ್ಕಾ!

ಆದರೆ, ಉಬರ್ ಈಗ ರೇಟಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಹೊರಟಿದೆ. ಈವರೆಗೆ ಚಾಲಕನ ಬಗ್ಗೆ ರೇಟಿಂಗ್ ನೀಡುತ್ತಿದ್ದ ವ್ಯವಸ್ಥೆ ಇದೆ. ಇನ್ಮುಂದೆ ಪ್ರಯಾಣಿಕರ ಬಗ್ಗೆ ಚಾಲಕ ರೇಟಿಂಗ್ ನೀಡುವಂತಹ ವ್ಯವಸ್ಥೆಯನ್ನು ಆರಂಭಿಸಿರುವುದಾಗಿ ಕಂಪನಿಯು ಹೇಳಿದೆ.

ಕಳೆದ ಬುಧವಾರದಿಂದ ಈ ವ್ಯವಸ್ಥೆ ಜಾರಿಗೆ ಬಂದಿದ್ದು,  ಅತೀ ಕಳಪೆ ರೇಟಿಂಗ್ ಪಡೆಯುವ ಗ್ರಾಹಕರನ್ನು ಕ್ಯಾಬ್‌ನಿಂದ ದೂರವಿಡುವ ಅವಕಾಶ ಕಂಪನಿಗಿದೆ. ಚಾಲಕನೊಂದಿಗೆ ಅಥವಾ ಪ್ರಯಾಣದಲ್ಲಿ ಅನುಚಿತವಾಗಿ ವರ್ತಿಸುವವರನ್ನು ಕ್ಯಾಬ್‌ನಿಂದ, ಅಗತ್ಯ ಬಿದ್ದರೆ ಕಂಪನಿಯು ಆ್ಯಪ್‌ನಿಂದಲೇ ತೆಗೆದುಹಾಕಬಹುದು. 

ಗ್ರಾಹಕರು ತಮ್ಮ ರೇಟಿಂಗ್ ಹೆಚ್ಚಿಸಿಕೊಳ್ಳಲು,  ಪ್ರಯಾಣದ ವೇಳೆ ಹೇಗೆ ವರ್ತಿಸಬೇಕು? ಕ್ಯಾಬ್‌ನಲ್ಲಿ ಸ್ವಚ್ಛತೆ ಹೇಗೆ ಕಾಪಾಡಬೇಕು? ಚಾಲಕನಿಗೆ ಅತೀವೇಗವಾಗಿ ಗಾಡಿಯನ್ನು ಓಡಿಸುವಂತೆ ಒತ್ತಡ ಹಾಕದಂತೆ ಟಿಪ್ಸ್‌ಗಳನ್ನು ನೀಡಲಾಗುವುದು ಎಂದು  ಉಬರ್ ಹೇಳಿದೆ.

ಅಂದ ಹಾಗೇ ಈ ವ್ಯವಸ್ಥೆ ಅಮೆರಿಕಾ ಮತ್ತು ಕೆನಡಾದಲ್ಲಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಬಹುದು.

ಇದನ್ನೂ ಓದಿ | 2.2 ಬಿಲಿಯನ್ ಫೇಸ್ಬುಕ್ ಖಾತೆ ಡಿಲೀಟ್! ನಿಯಮ ಮೀರಿದ್ರೆ ಇದೇ ಗತಿ!