ಬೆಂಗಳೂರು (ಜು.30): ತಮ್ಮ ಮೊಬೈಲ್‌ಗೆ ಕರೆ ಮಾಡುವವರ ಮಾಹಿತಿಯನ್ನು ತಿಳಿಸುವ Truecaller ಆ್ಯಪ್, ಸರ್ವೇಸಾಮಾನ್ಯವಾಗಿ ಬಿಟ್ಟಿದೆ. 100 ಮಿಲಿಯನ್‌ಕ್ಕಿಂತಲೂ ಹೆಚ್ಚು ಮಂದಿ ಈ ಆ್ಯಪನ್ನು ತಮ್ಮ ಫೋನ್‌ಗಳಲ್ಲಿ ಬಳಸುತ್ತಿದ್ದಾರೆ. 

ಆ್ಯಂಡ್ರಾಯಿಡ್ ಸ್ಮಾರ್ಟ್‌ಫೋನ್‌ಗಳಲ್ಲಿ Truecaller ಬಳಸುವವರಿಗೆ ಇಂದು ಬೆಳ್ಳಂಬೆಳಗ್ಗೆ ಶಾಕ್ ಸಿಕ್ಕಿದೆ. ಟ್ರೂಕಾಲರ್ ತನ್ನ ಆ್ಯಪ್ ಬಳಕೆದಾರರ ಅನುಮತಿಯಿಲ್ಲದೇ, ICICI ಬ್ಯಾಂಕಿನಲ್ಲಿ UPI ಖಾತೆಯನ್ನು ತೆರೆದಿದೆ.

Truecaller ಇತ್ತೀಚೆಗೆ 10.41.6. ಅಪ್ಡೇಟನ್ನು ಬಿಡುಗಡೆ ಮಾಡಿತ್ತು. ಆ ಬಳಿಕ ಈ ಸಮಸ್ಯೆ ಎದುರಾಗಿದೆ. 2017ರಲ್ಲಿ UPI ಆಧಾರಿತ ಮೊಬೈಲ್ ಪಾವತಿ ಸೇವೆಯನ್ನು ಆರಂಭಿಸಲು, Truecaller ಕಂಪನಿಯು ICICI ಬ್ಯಾಂಕ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.

ಇದನ್ನೂ ಓದಿ | ಗುಡ್ ನ್ಯೂಸ್ : ಭಾರತದಲ್ಲಿ ಭಾರಿ ಅಗ್ಗದ ದರದಲ್ಲಿ ಆ್ಯಪಲ್‌ ಐಫೋನ್‌

ಈ ಹೊಸ ಎಡವಟ್ಟನ್ನು ಬಳಕೆದಾರರು UPI ಹಗರಣವೆಂದೇ ಬಣ್ಣಿಸುತ್ತಿದ್ದಾರೆ. ಧೀರಜ್ ಕುಮಾರ್ ಎಂಬವರು ಇದನ್ನು ಟ್ವಿಟ್ಟರ್ ನಲ್ಲಿ ಮೊದಲು ಬಹಿರಂಗ ಪಡಿಸಿದವರು. ಬೆಳ್ಳಂಬೆಳಗ್ಗೆ ICICI ಬ್ಯಾಂಕಿನಿಂದ, ನಿಮ್ಮ UPI ಖಾತೆ ತೆರೆಯಲಾಗಿದೆ ಎಂಬ ಸಂದೇಶ ಬಂದಾಗ ಧೀರಜ್ ಬೆಚ್ಚಿಬಿದ್ದರು. ವಿಚಿತ್ರವೆಂದರೆ, ಧೀರಜ್ ICICI ಬ್ಯಾಂಕಿನಲ್ಲಿ ಖಾತೆಯನ್ನೇ ಹೊಂದಿಲ್ಲ.

ಇನ್‌ಬಾಕ್ಸ್ ಪರಿಶೀಲಿಸಿದಾಗ, Truecaller ರಹಸ್ಯವಾಗಿ ಅಪರಿಚಿತ ನಂಬರ್‌ವೊಂದಕ್ಕೆ ಆ ಸೇವೆಯನ್ನು ಶುರುಮಾಡಲು ಸಂದೇಶವೊಂದನ್ನು ಕಳುಹಿಸಿರುವುದು ಗಮನಕ್ಕೆ ಬಂದಿದೆ.

ತಕ್ಷಣ, ಈ ವಿಷಯವನ್ನುNational Payments Corporation of India (NPCI), ICICI ಬ್ಯಾಂಕ್ ಮತ್ತು Truecaller ಗಮನಕ್ಕೆ ತಂದರು. NPCI ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರೆ, ಬೇರಾರೂ ದೂರಿಗೆ ಸ್ಪಂದಿಸಲಿಲ್ಲ.

ಬಳಿಕ, ಈ ಎಡವಟ್ಟಿನ ಬಗ್ಗೆ ಸ್ಪಷ್ಟೀಕರಣ ನೀಡಿರುವ Truecaller, ಇದೊಂದು ಬಗ್‌ನಿಂದ ಆಗಿರುವ ತಾಂತ್ರಿಕ ದೋಷ ಎಂದು ಹೇಳಿದೆ. ಈ ಸಮಸ್ಯೆಯನ್ನು ಸರಿಪಡಿಸುತ್ತಿದ್ದೇವೆ ಎಂದು  ಹೇಳಿದೆ.

ಬ್ಯಾಂಕಿಂಗ್ ಅಥವಾ ಪಾವತಿ ಆ್ಯಪ್‌ಗಳ ಮೂಲಕ ಹಣ ವ್ಯವಹಾರ ಮಾಡಬೇಕಾದರೆ Unified Payment Interface (UPI) ಖಾತೆಯನ್ನು ತೆರೆಯಬೇಕಾಗುತ್ತದೆ. UPI ಖಾತೆಯಿದ್ದರೆ, ಹೆಚ್ಚಿನ ಕಿರಿಕಿರಿಯಿಲ್ಲದೇ ತಕ್ಷಣ ಹಣ ಪಾವತಿ ಮಾಡಬಹುದಾಗಿದೆ.