ನವದೆಹಲಿ(ಮೇ.28): ನಿಮಗೆ ಕರೆ ಮಾಡುವ ಅನಾಮಧೇಯ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸುವ ಟ್ರೂಕಾಲರ್‌ ಆ್ಯಪ್‌ ಬಳಸುತ್ತಿದ್ದೀರಾ? ಹಾಗಿದ್ದರೆ, ನಿಮ್ಮ ಮಾಹಿತಿ ಡಾರ್ಕ್ವೆಬ್‌ನಲ್ಲಿ ಬಿಕರಿಯಾಗಿರುವ ಸಾಧ್ಯತೆ ಬಗ್ಗೆ ಎಚ್ಚರವಾಗಿರಿ.

ಹೌದು, ಅನಾಮಧೇಯ ವ್ಯಕ್ತಿಗಳ ಹೆಸರು ಗುರುತಿಸುವ ಟ್ರೂಕಾಲರ್‌ ಆ್ಯಪ್‌ನ 4.75 ಕೋಟಿ ಭಾರತೀಯ ಬಳಕೆದಾರರ ಮಾಹಿತಿಗಳು 75 ಸಾವಿರ ರು.ಗೆ ಡಾರ್ಕ್ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸ್ಫೋಟಕ ವಿಚಾರವನ್ನು ಅಮೆರಿಕದ ಸೈಬರ್‌ ಗುಪ್ತಚರ ಸಂಸ್ಥೆ ಸೈಬಲ್‌ಐಎನ್‌ಸಿ ಬಹಿರಂಗಪಡಿಸಿದೆ.

ಚೀನಿ ಆ್ಯಪ್ ನಿಷೇಧದ ಬಳಿಕೆ ಭಾರತ ಆ್ಯಪ್‌ಗಳಿಗೆ ಬಂಪರ್

ಸೈಬಲ್‌ಐಎನ್‌ಸಿ ಪ್ರಕಾರ, 2019ರಿಂದ ಟ್ರೂಕಾಲರ್‌ ಬಳಕೆದಾರರ ಹೆಸರು, ಮೊಬೈಲ್‌ ಸಂಖ್ಯೆ, ಆತನ ಕೆಲಸ, ಲಿಂಗ, ಇ-ಮೇಲ್‌ ಅಡ್ರೆಸ್‌, ಫೇಸ್‌ಬುಕ್‌ ಐಡಿ ಸೇರಿದಂತೆ ಇನ್ನಿತರ ಮಾಹಿತಿಗಳು ಡಾರ್ಕ್ವೆಬ್‌ನಲ್ಲಿ ಲಭ್ಯವಿವೆ. ಅಲ್ಲದೆ, ಈ ಮಾಹಿತಿಗಳನ್ನು ರಾಜ್ಯಗಳು, ನಗರಗಳು ಮತ್ತು ಕೆಲಸ ಎಂಬ 3 ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ಆದರೆ, ಈ ಆರೋಪವನ್ನು ಅಲ್ಲಗೆಳೆದಿರುವ ಟ್ರೂಕಾಲರ್‌ ಸಂಸ್ಥೆ ತನ್ನ ಆ್ಯಪ್‌ ಬಳಸುತ್ತಿರುವ ಯಾವುದೇ ಭಾರತೀಯರ ಮಾಹಿತಿಗಳನ್ನು ಡಾರ್ಕ್ವೆಬ್‌ನಲ್ಲಿ ಮಾರಾಟಕ್ಕಿಟ್ಟಿಲ್ಲ. ಸೋರಿಕೆಯೂ ಆಗಿಲ್ಲ ಎಂದು ಹೇಳಿದೆ.