ನವದೆಹಲಿ(ಜು.02): ಇಂದು ವಿಶ್ವದಾದ್ಯಂತ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದ್ದು, ಭಾರತದಲ್ಲಿ ಮಾತ್ರ ಸೂರ್ಯಗ್ರಹಣ ಗೋಚರವಾಗದಿರುವುದು ಖಗೋಳ ಪ್ರೀಯರಿಗೆ ನಿರಾಸೆ ತಂದಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 10.25 ರ ಸಮಯಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, 11.54ಕ್ಕೆ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಲಿದೆ. ಈ ಕುರಿತು ಟ್ವೀಟ್ ಮಾಡಿರುವ ನಾಸಾ, ಸಂಪೂರ್ಣ ಸೂರ್ಯಗ್ರಹಣದ ಲೈವ್ ದೃಶ್ಯಾವಳಿಯನ್ನು ಕಣ್ತುಂಬಿಕೊಳ್ಳಲು ನಾಸಾದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.

ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಚಂದ್ರನ ಪಾರ್ಶ್ವ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಈ ಖಗೋಳೀಯ ವಿದ್ಯಮಾನವನ್ನು ಸಂಪೂರ್ಣ ಸೂರ್ಯಗ್ರಹಣ ಎಂದು ಕರೆಯಾಲಾಗುತ್ತದೆ.

ಇಂದಿನ ಸಂಪೂರ್ಣ ಸೂರ್ಯಗ್ರಹಣ ಅರ್ಜೆಂಟಿನಾ, ಚಿಲಿ ಹಾಗೂ ಪೆಸಿಫಿಕ್ ಭೂಭಾಗದಲ್ಲಿ ಗೋಚರವಾಗಲಿದೆ. ಅದರಂತೆ ದ.ಅಮೆರಿಕ ಭೂಭಾಗದಲ್ಲಿ ಬ್ರೆಝಿಲ್, ಇಕ್ವೆಡಾರ್, ಉರುಗ್ವೆ ಮತ್ತು ಪೆರುಗ್ವೆ ದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ.