Asianet Suvarna News Asianet Suvarna News

ಈ ಕಾರಣಗಳಿಗಾಗಿ ಎಲೆಕ್ಟ್ರಿಕ್ ಕಾರು ಸೂಪರ್ ಚಾಯ್ಸ್!

ಈ ಕಾರಣಗಳಿಗಾಗಿ ಎಲೆಕ್ಟ್ರಿಕ್ ಕಾರು ಸೂಪರ್ ಚಾಯ್ಸ್

ಎಲೆಕ್ಟ್ರಿಕ್ ಕಾರುಗಳೆಂದರೆ ಮೂಗು ಮುರುಯೋ ಕಾಲ ಹೋಯ್ತು

ಎಲೆಕ್ಟ್ರಿಕ್ ಕಾರು ರಸ್ತೆ ಆಳುವ ದಿನ ದೂರವಿಲ್ಲ

ಪರಿಸರ ರಕ್ಷಣೆಗೆ ಅತ್ಯವಶ್ಯ ಈ ಎಲೆಕ್ಟ್ರಿಕ್ ಕಾರು
 

Top 10 reasons to buy an electric car right now

ಬೆಂಗಳೂರು(ಜೂ.28): ಎಲೆಕ್ಟ್ರಿಕ್ ಕಾರುಗಳೆಂದರೆ ಬಹುತೇಕರು ಮೂಗು ಮುರಿಯುತ್ತಾರೆ. ಪೆಟ್ರೋಲ್ ಅಥವಾ ಡಿಸೇಲ್ ಕಾರುಗಳು ಕೊಡುವ ಡ್ರೈವಿಂಗ್ ಮಜಾ ಈ ಕಾರುಗಳು ಕೊಡುವುದಿಲ್ಲ ಎಂಬುದೇ ಈ ನಿರಾಸಕ್ತಿಗೆ ಕಾರಣ. ಆದರೆ ಮುಂದಿನ ದಿನಮಾನಗಳಲ್ಲಿ ವಿಶ್ವದಲ್ಲಿ ಅದರಲ್ಲೂ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳೇ ರಸ್ತೆಗಳನ್ನು ಆಳುತ್ತವೆ ಎಂಬುದರಲ್ಲಿ ಅನುಮಾನವೇ ಬೇಡ.

ಹಾಗೆ ನೋಡಿದರೆ ಎಲೆಕ್ಟ್ರಿಕ್ ಕಾರುಗಳು ನಿಧಾನಗತಿಯಲ್ಲಿ ಪ್ರಖ್ಯಾತಿ ಗಳಿಸುತ್ತಿವೆ. ವಿಶ್ವದ ಆಧುನಿಕ ಮಹಾನಗರಳು ಎನಿಸಿಕೊಂಡ ಬಹುತೇಕ ನಗರಗಳು ಕಲುಷಿತ ವಾತಾವರಣದ ದುಷ್ಪರಿಣಾಮಗಳನ್ನು ಎದುರಿಸುತ್ತಿವೆ. ಅದರಲ್ಲೂ ವಾಯು ಮಾಲಿನ್ಯಕ್ಕೆ ನಗರದ ಸಂಚಾರ ದಟ್ಟಣೆ ಪ್ರಮುಖ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೇ ಕಾರಣಕ್ಕೆ ನಿಧಾನವಾಗಿ ಜನರ ಮನಸ್ಸು ಎಲೆಕ್ಟ್ರಿಕ್ ಕಾರುಗಳತ್ತ ಹೊರಳುತ್ತಿದೆ.

ಆದರೆ ಎಲೆಕ್ಟ್ರಿಕ್ ಕಾರು ಉತ್ಪಾದನಾ ತಂತ್ರಜ್ಞಾನ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಇದು ಜನಪ್ರಿಯವಾಗಲು ಇನ್ನೂ ಕೆಲ ಸಮಯ ಬೇಕಾಗುತ್ತದೆ. ಆದರೆ ಇದರ ಹತ್ತಾರು ಪ್ರಯೋಜನಗಳು ಖಂಡಿತ ಜನರನ್ನು ಮನಸೂರೆಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಹಾಗಾದರೆ ಎಲೆಕ್ಟ್ರಿಕ್ ಕಾರು ಕೊಳ್ಳಲು ಯಾವ ಅಂಶಗಳು ಮಾನದಂಡವಾಗುತ್ತವೆ ಎಂದು ನೋಡುವುದಾದರೆ..

1. ಸಾಮಾನ್ಯವಾಗಿ ಇಂದಿನ ಯುಜನತೆ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಮನೋಭಾವದವರು. ಅದರಲ್ಲೂ ತಂತ್ರಜ್ಞಾನ, ಆಟೋಮೊಬೈಲ್ ಕ್ಷೇತ್ರಗಳಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದೆ ಇರುವ ಇಂದಿನ ಯುವಪೀಳಿಗೆ ಖಂಡಿತವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರು ಹೋಗುತ್ತದೆ ಎಂಬುದು ಬಹುತೇಕರ ಅಂಬೋಣ.

2. ಎಲೆಕ್ಟ್ರಿಕ್ ಕಾರುಗಳು ಉತ್ತಮ ಮೈಲೇಜ್ ಕೊಡುತ್ತವೆ. ಒಂದು ಬಾರಿ ರಿಚಾರ್ಜ್ ಮಾಡಿದರೆ ಆರಾಮವಾಗಿ ಬಹು ದೂರದವರೆಗೆ ಪ್ರಯಾಣ ಮಾಡಬಲ್ಲ ಸಾಮರ್ಥ್ಯ ಇರುವ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ ಎಂಬುದು ವಿಶೇಷ.

3. ಪೆಟ್ರೋಲ್ ಹಾಗೂ ಡಿಸೇಲ್ ಕಾರುಗಳಲ್ಲಿ ೨೦೦ಕ್ಕೂ ಹೆಚ್ಚು ಭಾಗಗಳಿರುತ್ತವೆ. ಆದರೆ ಎಲೆಕ್ಟ್ರಿಕ್ ಕಾರುಗಳು ಕೇವಲ ೨೦ ಭಾಗಗಳನ್ನು ಹೊಂದಿರುತ್ತದೆ. ಈ ಕಾರಣಕ್ಕಾಗಿ ಕಾರಿನ ನಿರ್ವಹಣೆ ಸುಲಭ ಎಂಬುದು ತಜ್ಞರ ಅಭಿಪ್ರಾಯ.

4. ಇನ್ನು ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಭಟನೆ, ಬಂದ್ ಬಿಸಿ ತಟ್ಟಲ್ಲ. ಅಂದರೆ ಬಂದ್ ವೇಳೆ ಪೆಟ್ರೋಲ್ ಬಂಕ್ ಗಳಿಗೂ ಬೀಗ ಹಾಕಲಾಗುತ್ತದೆ. ಎಲೆಕ್ಟ್ರಿಕ್ ಕಾರುಗಳು ಈ ಗೊಡವೆ ಇಲ್ಲದೇ ಆರಾಮವಾಗಿ ಸಂಚರಿಸಬಲ್ಲವು. ಅಲ್ಲದೇ ಬೇಕೆಂದಾಗ ಕಚೇರಿಯಲ್ಲಿ, ಮನೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಬಹುದು.

5. ಇನ್ನು ಪೆಟ್ರೋಲ್ ಹಾಗೂ ಡಿಸೇಲ್ ಕಾರುಗಳಂತೆ ಎಲೆಕ್ಟ್ರಿಕ್ ಕಾರುಗಳು ಹೊಗೆ ಉಗುಳುವುದಿಲ್ಲ. ಅಂದರೆ ಎಲೆಕ್ಟ್ರಿಕ್ ಕಾರುಗಳ ಜಿರೋ ಎಮಿಶನ್ ಹೊಂದಿರುತ್ತವೆ. ಪರಿಸರ ರಕ್ಷಣೆಗೆ ಇನ್ನೇನು ಬೇಕು ಹೇಳಿ.

6. ಇಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳು ಡ್ರೈವರ್ ಫ್ರೆಂಡ್ಲಿ ಕಾರುಗಳು. ಈ ಕಾರುಗಳನ್ನು ಚಾಲನೆ ಮಾಡುವುದು ತುಂಬ ಸುಲಭ. ಅದರಲ್ಲೂ ಮಹಾನಗರಗಳ ಟ್ರಾಫಿಕ್ ಕಿರಿಕಿರಿ ಮಧ್ಯೆ ಈ ಕಾರುಗಳನ್ನು ಆರಾಮವಾಗಿ ಚಾಲನೆ ಮಾಡಬಹುದು.

7. ಮುಂದಿನ ಪೀಳಿಗೆಯ ಕಾರು: ಎಲೆಕ್ಟ್ರಿಕ್ ಕಾರುಗಳನ್ನು ಮುಂದಿನ ಪೀಳಿಗೆಯ ಕಾರುಗಳೆಂದೇ ಪರಿಗಣಿಸಲಾಗಿದೆ. ಮುಂದಿನ ಪೀಳಿಗೆಯ ಬೇಕು ಬೇಡಗಳನ್ನು ಗಮನದಲ್ಲಿಟ್ಟುಕೊಂಡೇ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲಾಗುತ್ತಿದೆ. ಪರಿಸರ ರಕ್ಷಣೆ, ಯುವ ಜನಾಂಗದ ಆಟೋಮೋಬೈಲ್ ಕ್ರೇಜ್ ಎರಡನ್ನೂ ಸಮ್ಮಿಳಿತಗೊಳಿಸಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.  

Follow Us:
Download App:
  • android
  • ios