ನಿಷೇಧಕ್ಕೆ ಬೆದರಿದ ಚೀನಾದ ಟಿಕ್‌ಟಾಕ್‌!

ನಿಷೇಧಕ್ಕೆ ಬೆದರಿದ ಟಿಕ್‌ಟಾಕ್‌| ಭಾರತದಲ್ಲೇ ದತ್ತಾಂಶ ಕೇಂದ್ರ| ಫೇಸ್‌ಬುಕ್‌ಗೆ ಟಿಕ್‌ಟಾಕ್‌ ಶಾಕ್‌

TikTok parent plans data centre in India

ನವದೆಹಲಿ[ಜು.22]: ಭಾರತೀಯ ಬಳಕೆದಾರರ ದತ್ತಾಂಶಗಳನ್ನು ಕದಿಯುತ್ತಿರುವ ಗಂಭೀರ ಆರೋಪಕ್ಕೆ ತುತ್ತಾಗಿರುವ ಚೀನಾ ಮೂಲದ ವಿಡಿಯೋ ಷೇರಿಂಗ್‌ ಸಾಮಾಜಿಕ ಜಾಲತಾಣವಾದ ‘ಟಿಕ್‌ಟಾಕ್‌’, ಭಾರತದ ಸರ್ಕಾರದ ನಿಷೇಧದ ತೂಗುಗತ್ತಿಯಿಂದ ಪಾರಾಗಲು ಭಾರತದಲ್ಲೇ ತನ್ನ ದತ್ತಾಂಶ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಟಿಕ್‌ಟಾಕ್‌ ಮತ್ತು ಹೆಲ್ಲೋ ಆ್ಯಪ್‌ಗಳ ಮಾತೃಸಂಸ್ಥೆಯಾದ ಬೈಟ್‌ಡ್ಯಾನ್ಸ್‌, ಭಾರತದಲ್ಲಿ ದೇಶವಿರೋಧಿ ಕೃತ್ಯದಲ್ಲಿ ತೊಡಗಿದೆ ಎಂದು ಇತ್ತೀಚೆಗೆ ಸ್ವದೇಶಿ ಜಾಗರಣ್‌ ಮಂಚ್‌ ಸಂಘಟನೆಯು ಕೇಂದ್ರ ಸರ್ಕಾರಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಬೈಟ್‌ಡ್ಯಾನ್ಸ್‌ಗೆ ಸರ್ಕಾರ 21 ಪ್ರಶ್ನೆಗಳನ್ನು ರವಾನಿಸಿ, ಸೂಕ್ತ ಉತ್ತರ ನೀಡದೇ ಹೋದಲ್ಲಿ ನಿಷೇಧ ಹಾಕುವುದಾಗಿ ಬೆದರಿಕೆ ಹಾಕಿತ್ತು.

ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಂಸ್ಥೆ, ದತ್ತಾಂಶ ರಕ್ಷಣೆ ಕುರಿತ ಭಾರತೀಯ ಕಾನೂನುಗಳನ್ನು ಗೌರವಿಸುವ ನಿಟ್ಟಿನಲ್ಲಿ, ಭಾರತದಲ್ಲೇ ದತ್ತಾಂಶ ಕೇಂದ್ರ ಸ್ಥಾಪನೆ ಬಗ್ಗೆ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಭಾರತೀಯ ಗ್ರಾಹಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಆಯ್ಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.

ಹಾಲಿ ಸಂಸ್ಥೆಯು, ಭಾರತೀಯ ಗ್ರಾಹಕರ ದತ್ತಾಂಶಗಳನ್ನು ಅಮೆರಿಕ ಮತ್ತು ಸಿಂಗಾಪುರದಲ್ಲಿರುವ ತನ್ನ ಸರ್ವರ್‌ಗಳಲ್ಲಿ ಸಂಗ್ರಹಿಸಿಡುತ್ತಿದೆ.

ಫೇಸ್‌ಬುಕ್‌ಗೆ ಟಿಕ್‌ಟಾಕ್‌ ಶಾಕ್‌

ಟಿಕ್‌ಟಾಕ್‌ ಹಾಲಿ ವಿಶ್ವದ 150 ದೇಶಗಳಲ್ಲಿ 75 ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಅದಕ್ಕೆ ಈಗಾಗಲೇ ಭಾರತದ 20 ಕೋಟಿ ಸೇರಿ ವಿಶ್ವದಾದ್ಯಂತ 70 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ಫೇಸ್‌ಬುಕ್‌ಗೆ ಹೋಲಿಸಿದರೆ ಭಾರತದಲ್ಲಿ ಟಿಕ್‌ಟಾಕ್‌ ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ.

2006ರಲ್ಲಿ ಭಾರತಕ್ಕೆ ಕಾಲಿಟ್ಟಫೇಸ್‌ಬುಕ್‌ ಇದುವರೆಗೆ 30 ಕೋಟಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫೇಸ್‌ಬುಕ್‌ ಭಾರತಕ್ಕೆ ಕಾಲಿಟ್ಟ13 ವರ್ಷಗಳಲ್ಲಿ 30 ಕೋಟಿ ಗ್ರಾಹಕರನ್ನು ಪಡೆದಿದ್ದರೆ, ಟಿಕ್‌ಟಾಕ್‌ ಕೇವಲ ಒಂದೇ ವರ್ಷದಲ್ಲಿ 20 ಕೋಟಿ ಗ್ರಾಹಕರನ್ನು ಸೆಳೆದುಕೊಂಡಿದೆ.

Latest Videos
Follow Us:
Download App:
  • android
  • ios