ಪ್ಯಾರಿಸ್[ಆ.17]: ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ, ಅಜೈವಿಕ ಎನ್ನುವ ಕಾರಣಕ್ಕಾಗಿ ಇದರ ಬಳಕೆಯನ್ನು ಸಾಧ್ಯವಾದಷ್ಟು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿವೆ. ಹೀಗಿದ್ದರೂ ಈಗಾಗಲೇ ಬಳಕೆಯಾದ ಟನ್ ಗಟ್ಟಲೇ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ ಭೂಮಿಯನ್ನು ಹಾಳು ಮಾಡುತ್ತಿದ್ದರೆ, ಅತ್ತ ಸಮುದ್ರದಾಳದಲ್ಲೂ ಭಾರೀ ಪ್ರಮಾಣದಲ್ಲಿ ಹಾನಿಯುಮಟು ಮಾಡುತ್ತಿದೆ. ಹೀಗಿರುವಾಗ ನಾಶಪಡಿಸಲಾಗದ ಪ್ಲಾಸ್ಟಿಕ್ ನಿಂದ ಬೇರೇನಾದರೂ ಉಪಯೋಗವಾಗುತ್ತದೆಯೇ ಎಂಬ ಪ್ರಯೋಗಗಳು ನಡೆಯುತ್ತಲೇ ಇವೆ.

ಸದ್ಯ ಈ ಪ್ಲಾಸ್ಟಿಕ್ ಹಾವಳಿಯಿಂದ ತಪ್ಪಿಸಿಕೊಳ್ಳಲು ದಕ್ಷಿಣ ಫ್ರಾನ್ಸ್ ನ ವಿಜ್ಞಾನಿ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ತಮ್ಮ ಪ್ರಯೋಗದ ಕುರಿತಾಗಿ ವಿವರಿಸಿರುವ ಕ್ರಿಸ್ಟೋಫರ್ ಕೋಸ್ಟೆಸ್ 'ನಾನು ಕಂಡುಹಿಡಿದ ಯಂತ್ರ ಪ್ಲಾಸ್ಟಿಕ್ ನ್ನು ತೈಲವನ್ನಾಗಿ ಮಾರ್ಪಾಡು ಮಾಡುತ್ತದೆ. 450 ಡಿಗ್ರಿ ಸೆಲ್ಸಿಯಸ್ ಶಾಖವಿಟ್ಟು, ಪ್ಲಾಸ್ಟಿಕ್ ನ್ನು ಯಂತ್ರದೊಳಗೆ ಹಾಕಬೇಕು. ಇದು ಪ್ಲಾಸ್ಟಿಕ್ ಕರಗಿಸಿ ದ್ರವ ರೂಪದ ತೈಲವನ್ನು ಬಿಡುಗಡೆಗೊಳಿಸುತ್ತದೆ. ಇದು ಶೇ. 65ರಷ್ಟು ಡೀಸೆಲ್ ಹೊಂದಿರುತ್ತದೆ. ಇದನ್ನು ಜನರೇಟರ್ ಅಥವಾ ಮೋಟರ್ ಬೋಟ್ ಗಳಿಗೆ ಬಳಸಬಹುದು. ಶೇ. 18ರಷ್ಟು ಪೆಟ್ರೋಲ್ ಸಿಗುತ್ತದೆ ಇದನ್ನು ದೀಪ ಬೆಳಗಿಸಲು ಉಪಯೋಗಿಸಬಹುದು. ಶೇ. 10 ರಷ್ಟು ಗ್ಯಾಸ್ ಹಾಗೂ ಶೇ. 7ರಷ್ಟು ಕ್ರೆಯಾನ್ಸ್ ಅಥವಾ ಬಣ್ಣದ ಪೆನ್ಸಿಲ್ ಮಾಡಬಲ್ಲ ಕಾರ್ಬನ್ ಸಿಗುತ್ತದೆ' ಎಂದಿದ್ದಾರೆ.

ಸದ್ಯ 50,000 ಯೂರೋಸ್, ಸುಮಾರು 370ಲಕ್ಷ ಬೆಲೆಬಾಳುವ ಈ ಮಷೀನ್, ಒಂದು ತಿಂಗಳಿಗೆ 10 ಟನ್ ಪ್ಲಾಸ್ಟಿಕ್ ನ್ನು ತೈಲವನ್ನಾಗಿ ಮಾರ್ಪಾಡು ಮಾಡುವ ಸಾಮರ್ಥ್ಯ ಹೊಂದಿದೆ. ಒಂದು ಕಿಲೋ ಪ್ಲಾಸ್ಟಿಕ್ ನಿಂದ 1 ಲೀಟರ್ ತೈಲ ಸಿಗುತ್ತದೆ. ಇದು ದೇಶದ ಅಭಿವೃದ್ಧಿಗೆ ಸಹಕರಿಸುವುದರೊಂದಿಗೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಸಮಸ್ಯೆಯನ್ನೂ ನಿವಾರಿಸಲಿದೆ.