ಕಾಲಕಾಲಕ್ಕೆ ಹೊಸ ಹೊಸ ಫೋನುಗಳನ್ನು ಬಿಡುಗಡೆ ಮಾಡುತ್ತಲೇ ಬಂದಿರುವ ಟೆಕ್ನೋ ಇದೀಗ ಟೆಕ್ನೋ ಸ್ಪಾರ್ಕ್ ಗೋ ಎಂಬ ಹೊಸ ಫೋನನ್ನು ಮಾರುಕಟ್ಟೆಗೆ ತಂದಿದೆ. 

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೋನ್‌ ನೀಡುವುದರಲ್ಲಿ ಟೆಕ್ನೋ ಹೆಸರುವಾಸಿ. ಅದು ಅತ್ಯುತ್ತಮವೋ ಅತ್ಯಾಧುನಿಕವೋ ಅನ್ನುವುದು ಮಾತ್ರ ವಿವಾದಾತ್ಮಕ. ಎಲ್ಲಾ ಹೊಸ ಮಾದರಿಯ ಫೋನುಗಳ ವಿನ್ಯಾಸವನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯುವ ಸಾಮರ್ಥ್ಯವನ್ನು ಪ್ರತಿಭೆ ಇರುವ ಟೆಕ್ನೋ ಈ ಬಾರಿ ಏಳುಸಾವಿರಕ್ಕೆ ರುಪಾಯಿ ಕಮ್ಮಿಗೆ ಕೊಡುತ್ತಿರುವ ಈ ಫೋನು ನೋಡುವುದಕ್ಕೆ ಸಿಂಗಾರ. ಆ ಬೆಲೆಗೆ ಇದೇ ಬಂಗಾರ.

6.1 ಇಂಚಿನ ಎಚ್‌ಡಿ ಡಿಸ್‌ಪ್ಲೇ, ಡಾಟೆಡ್‌ ನಾಚ್‌ ಇದರ ವೈಶಿಷ್ಟ್ಯ. ಸ್ಕ್ರೀನ್‌ ಅನುಪಾತ ಜಾಸ್ತಿ ಅನ್ನೋದು ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಒಂದು ಹೆಗ್ಗಳಿಕೆ. ಆದರೆ ಪೋನಿಗೆ ನಿಜವಾಗಿಯೂ ಬೇಕಾಗಿರುವುದೇನು? ಇದರಲ್ಲಿ ಇರುವುದು 2 ಜಿಬಿ ರಾರ‍ಯಂಡಮ್‌ ಆಕ್ಸೆಸ್‌ ಮೆಮರಿ ಮತ್ತು 16 ಜಿಬಿ ಸ್ಟೋರೇಜ್‌. ಅದನ್ನು 256 ಜಿಬಿಗೆ ಬೇಕಿದ್ದರೂ ವಿಸ್ತರಿಸಬಹುದು. ಆಗ ಫೋನ್‌ ಎಷ್ಟು ನಿಧಾನ ಆಗಬಹುದು ಅನ್ನೋದನ್ನು ನೀವೇ ನಿರ್ಧರಿಸಿ.

ಟೆಕ್ನೋದ ಎಚ್‌ಐ ಆಪರೇಟಿಂಗ್‌ ಸಿಸ್ಟಮ್‌ ಇದರಲ್ಲಿದೆ. ಅದಕ್ಕೆ ಮೂಲ ಆಂಡ್ರಾಯ್ಡ್‌. ಅದರ ಕುರಿತು ತಕರಾರಿಲ್ಲ.

ಇದನ್ನೂ ಓದಿ | ಹುಚ್ಚೆಬ್ಬಿಸಿದೆ 64MP ಕ್ಯಾಮೆರಾದ ಹೊಸ ಪೋನ್; ಒಂದೇ ದಿನದಲ್ಲಿ ಒಂದು ಮಿಲಿಯನ್ ಬುಕಿಂಗ್!

ಕ್ಯಾಮೆರಾ ನಿಮ್ಮನ್ನು ಇರುವುದಕ್ಕಿಂತ ಹೆಚ್ಚು ಚೆನ್ನಾಗಿ ತೋರಿಸುತ್ತದೆ. ಐದು ಮೆಗಾಫಿಕ್ಸೆಲ್‌ ಸೆಲ್ಫೀ ಕ್ಯಾಮರಾದಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸೂ ಉಂಟು, ಆಗ್‌ಮೆಂಟೆಡ್‌ ರಿಯಾಲಿಟಿಯೂ ಉಂಟು. ಅಂದ ಹಾಗೆ ಸೆಲ್ಫಿಗೂ ಫ್ಲಾಷ್‌ ಉಂಟು. ಆದರೆ ಅದು ಬರಿಗಣ್ಣಿಗೆ ಕಾಣದಷ್ಟು ನಾಜೂಕಾಗಿ ಅವಿತುಕೂತಿದೆ.

ಮತ್ತೊಂದು ಕ್ಯಾಮೆರಾ ಎಂಟು ಮೆಗಾಫಿಕ್ಸೆಲ್‌ನದ್ದು. ಅದಕ್ಕೆ ಎರಡು ಫ್ಲಾಷ್‌ಗಳಿವೆ. ಅದು ಕೂಡ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಹೊಂದಿದೆ. ಅದರಿಂದ ಏನು ಪ್ರಯೋಜನ ಅಂತ ಕೇಳಬಾರದು.

ಈ ಫೋನನ್ನು ಬೇಕಾಬಿಟ್ಟಿ ಬಳಸಿದರೆ ಮಧ್ಯಾಹ್ನದ ಹೊತ್ತಿಗೆ ಮಲಗಿಕೊಳ್ಳುತ್ತದೆ. ಬ್ಯಾಟರಿ ಚಿಕ್ಕದಲ್ಲದೇ ಇದ್ದರೂ ಆಯಸ್ಸು ಕಮ್ಮಿ. ಕೇವಲ 3000 ಎಂಎಎಚ್‌ ಕೆಪಾಸಿಟಿ. ಫೇಸ್‌ ಅನ್‌ಲಾಕ್‌ ಸಿಸ್ಟಮ್‌ ಉಂಟು. ಅದನ್ನು ಪೂರ್ತಿ ನಂಬದೇ ಇರುವುದು ಒಳಿತು. ನೆಬ್ಯುಲಾ ಬ್ಲಾಕ್‌ ಮತ್ತು ರಾಯಲ್‌ ಪರ್ಪಲ್‌ ಬಣ್ಣಗಳಲ್ಲಿ ಫೋನು ಲಭ್ಯ.

ಟೆಕ್ನೋ ಫೋನುಗಳ ಕುರಿತು ಎಷ್ಟು ಬರೆದರೂ ಅಷ್ಟೇ. ಇದೇ ಮೊದಲ ಬಾರಿಗೆ ಫೋನ್‌ ತೆಗೆದುಕೊಳ್ಳುವ ಶ್ರೀಸಾಮಾನ್ಯನ ಪಾಲಿಗೆ ಅವು ಅತ್ಯುತ್ತಮ. ಹಾಗೆಯೇ ದುಬಾರಿ ಫೋನಿದ್ದವರು ಕೂಡ ಜಾತ್ರೆಗೋ ಸಂತೆಗೋ ಹೋಗುವಾಗ ಈ ಫೋನ್‌ ಒಯ್ಯಬಹುದು. ಕಳೆದುಹೋದರೆ ಚಿಂತೆ ಮಾಡಬೇಕಾಗಿಲ್ಲ. ಗೇಮಿಂಗ್‌ ಮೋಡ್‌ ಪ್ರತ್ಯೇಕವಾಗಿ ಇಲ್ಲದೇ ಹೋದರೂ ಆಟ ಆಡುವುದಕ್ಕೇನೂ ತೊಂದರೆಯಿಲ್ಲ. ವೇಗ ಕಮ್ಮಿ, ಬಣ್ಣ ಜಾಸ್ತಿ.

ಇದನ್ನೂ ಓದಿ | ಕೈಗೆಟಕುವ ಬೆಲೆಯ ಹೊಸ HP ಲ್ಯಾಪ್ ಟಾಪ್ ಮಾರುಕಟ್ಟೆಗೆ

ಈ ಫೋನ್‌ ಮತ್ತೆ ಹಳೆಯ ಶೈಲಿಗೇ ಮರಳಿದಂತಿದೆ. ಇದರ ಬ್ಯಾಟರಿ ತೆಗೆಯಬಹುದು. ಸಿಮ್‌ ಕಾರ್ಡ್‌ ಹಾಕಲಿಕ್ಕೂ ಇದರ ಕವರ್‌ ತೆಗೆಯಬೇಕು. ಫೋನಿನ ಕೆಳಭಾಗದಲ್ಲಿ ಒಂದು ಸಣ್ಣ ಜಾಗದಲ್ಲಿ ಕವರ್‌ ಕೊರೆದು ಒಳಗೆ ಸ್ಪೀಕರ್‌ ಅಳವಡಿಸಲಾಗಿದೆ. ಹೀಗಾಗಿ ನೀರಿಗೆ ಬಿದ್ದರೆ ಗೋವಿಂದಾಯ ನಮಃ.