ನವದೆಹಲಿ(ಸೆ.07): ಚಂದ್ರಯಾನ-2 ಯೋಜನೆಯ  ಹಿನ್ನಡೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದ ಜನತೆಯ ಮೇಲೆ ಇಸ್ರೋ ಋಣ ಸಾಕಷ್ಟಿದೆ ಎಂದು ಹೇಳಿದ್ದಾರೆ.

ಯೋಜನೆ ಹಿನ್ನಡೆ ಕಂಡಿರುವುದು ಕೇವಲ ತಾತ್ಕಾಲಿಕ ಎಂದಿರುವ ಸೋನಿಯಾ, ಭವಿಷ್ಯದಲ್ಲಿ ಖಂಡಿತ ಇಸ್ರೋ ತನ್ನ ಗುರಿಯನ್ನು ತಲುಪಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಇಸ್ರೋ ಹಲವು ಸಾಧನೆಗಳನ್ನು ಮಾಡುವ ಮೂಲಕ ದೇಶದ ಗೌರವವನ್ನು ಎತ್ತಿ ಹಿಡಿದಿದೆ ಎಂದಿರುವ ಸೋನಿಯಾ, ಸಂಸ್ಥೆಯ ಋಣ ನಮ್ಮೆಲ್ಲರ ಮೇಲಿದ್ದು ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಇಸ್ರೋ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.

ಇಸ್ರೋ ಇದುವರೆಗೂ 115ಕ್ಕೂ ಹೆಚ್ಚು ಸಫಲ ಬಾಹ್ಯಾಕಾಶ ಯೋಜನೆಗಳನ್ನು ಪೂರೈಸಿದ್ದು, ಚಂದ್ರಯಾನ-1 ಹಾಗೂ ಮಂಗಳಯಾನ ಯೋಜನೆಗಳ ಯಶಸ್ಸು ಭಾರತ ಮರೆತಿಲ್ಲ ಎಂದು ಸೋನಿಯಾ ಸಂಸ್ಥೆಯ ಬೆನ್ನು ತಟ್ಟಿದ್ದಾರೆ.

2008ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಚಂದ್ರಯಾನ ಯೋಜನೆಯನ್ನು ಘೋಷಿಸಿತ್ತು. ಆರಂಭದಲ್ಲಿ ಭಾರತ-ರಷ್ಯಾ ಸಹಭಾಗಿತ್ವದಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತಾದರೂ, ಮುಂದೆ ಇಸ್ರೋ ಏಕಾಂಗಿಯಾಗಿ ಯೋಜನೆಯ ಪೂರ್ಣಗೊಳಿಸುವ ನಿರ್ಧಾರ ಕೈಗೊಂಡಿತ್ತು.