ಗವಿ ಗಂಗಾಧರೇಶ್ವರ ಸೂರ್ಯ ಮಜ್ಜನ, ಬದಲಾಗತ್ತೆ ದಿನ: ಹೇಳತ್ತೆ ವಿಜ್ಞಾನ!

https://static.asianetnews.com/images/authors/7d06288b-fbfa-5ff6-bfcf-f2ff6a2ad184.jpg
First Published 11, Jan 2019, 3:09 PM IST
Scientific Aspects of Miracle of Bengaluru Gavi Gangadhareshwara Temple
Highlights

ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನಕ್ಕೆ ಕ್ಷಣಗಣನೆ| ಸಂಕ್ರಾಂತಿಯಂದು ನಡೆಯುವ ಅಪರೂಪದ ವಿದ್ಯಮಾನ| ಸೂರ್ಯ ರಶ್ಮಿ ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ| ಇದೊಂದು ಖಗೋಳೀಯ ವಿದ್ಯಮಾನ ಎನ್ನುತ್ತಾರೆ ವಿಜ್ಞಾನಿಗಳು| ನ್ಯಾಶನಲ್ ಕಾಲೇಜ್‌ನಲ್ಲಿ ನಡೆದ ಕಾರ್ಯಾಗಾರ| ಖಗೋಳೀಯ ವಿದ್ಯಮಾನದ ಕುರಿತು ಡಾ. ಜಯಂತ್ ವ್ಯಾಸನಕೆರೆ ಅಭಿಪ್ರಾಯ ಮಂಡನೆ

ಬೆಂಗಳೂರು(ಜ.11): ನಗರದ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದ ಸಂಕ್ರಾಂತಿ ಸೂರ್ಯ ಮಜ್ಜನಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಸಾವಿರಾರು ಭಕ್ತರು ತಮ್ಮ ನಂಬಿಕೆಯ ಮೂಟೆ ಹೊತ್ತು ದೇವಸ್ಥಾನಕ್ಕೆ ಭೇಟಿ ನೀಡಲು ಕಾತರರಾಗಿದ್ದಾರೆ.

ಏನಿದು ಸೂರ್ಯ ಮಜ್ಜನ?:

ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ದಿನದಂದು ಸೂರ್ಯ ರಶ್ಮಿ ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಇದು ಭಕ್ತರ ನಂಬಿಕೆಯಂತೆ ಪವಾಡವಾಗಿದ್ದು, ಈ ಅಪರೂಪದ ಘಟನಾವಳಿಯನ್ನು ವೀಕ್ಷಿಸಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಇದು ಪವಾಡ ಅಲ್ಲ, ಖಗೋಳೀಯ ವಿದ್ಯಮಾನ:

ಆದರೆ ವಿಜ್ಞಾನ ಈ ಘಟನೆಗೆ ಬೇರೆಯದ್ದೇ ಕಾರಣ ನೀಡುತ್ತದೆ. ಅದರಂತೆ ಇಂದು ಬಸವನಗುಡಿಯ ನ್ಯಾಶನಲ್ ಕಾಲೇಜ್‌ನಲ್ಲಿ ನಡೆದ ' ಗವಿ ಗಂಗಾಧರೇಶ್ವರ ದೇವಸ್ಥಾನದ ಖಗೋಳಿಯ ವಿದ್ಯಮಾನ' ಕಾರ್ಯಾಗಾರದಲ್ಲಿ ಅಜೀಂ ಪ್ರೇಮ್ ಜೀ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ವ್ಯಾಸನಕೆರೆ ಮಾತನಾಡಿದರು.

ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನ ಒಂದು ಖಗೋಳೀಯ ವಿದ್ಯಮಾನವಾಗಿದ್ದು, ಇಂತದ್ದೇ ವಿದ್ಯಮಾನ ಪ್ರತಿ ವರ್ಷದ ನವೆಂಬರ್ 28 ಅಥವಾ 29 ರಂದೂ ಘಟಿಸುತ್ತದೆ ಎಂದು ಡಾ. ಜಯಂತ್ ಹೇಳಿದರು.

ಭೂಮಿಯ ಅಯನ ಸಂಕ್ರಾಂತಿಯಲ್ಲಿ ಬೇಸಿಗೆ ಅಯನ ಸಂಕ್ರಾಂತಿಯಂದು(ಜೂ.21) ಸೂರ್ಯ ನಿರ್ದಿಷ್ಟ ಅಕ್ಷದ ಮೇಲಿರುವ ಪರಿಣಾಮ ಭೂಮಿಯು ಅತ್ಯಂತ ದೀರ್ಘ ಹಗಲನ್ನು ಕಾಣುತ್ತದೆ. ಇದನ್ನು ದಕ್ಷಿಣಾಯನ ಎಂದು ಕರೆಯುತ್ತಾರೆ. ಅದರಂತೆ ಚಳಿಗಾಲದ ಅಯನ ಸಂಕ್ರಾಂತಿಯಂದು(ಡಿ.22) ಭೂಮಿ ಅತ್ಯಂತ ದೀರ್ಘ ರಾತ್ರಿಯನ್ನು ಕಾಣುತ್ತದೆ. ಇದನ್ನು ಉತ್ತರಾಯಣ ಎಂದು ಕರೆಯುತ್ತಾರೆ.

ನಮಗೆ ಭಾಸವಾಗುವಂತೆ ಸೂರ್ಯ ನಮ್ಮ ಸುತ್ತಲೂ ಕ್ರಾಂತಿವೃತ್ತದ ಮೇಲೆ ಒಂದು ಪರಿಭ್ರಮಣೆಯನ್ನು 365.2422 ದಿವಸಗಳಲ್ಲಿ ಪೂರೈಸುತ್ತದೆ. ಈ ವಾರ್ಷಿಕ ಚಲನೆಯಲ್ಲಿ ಎರಡು ಸ್ಪಷ್ಟ ವಿಧಗಳಿವೆ. ಡಿಸೆಂಬರ್ 22ರಿಂದ ಜೂನ್ 21ರ ವರೆಗೆ ಉತ್ತರಾಭಿಮುಖ ಚಲನೆ, ಜೂನ್ 21ರಿಂದ ಡಿಸೆಂಬರ್ 22ರ ವರೆಗೆ ದಕ್ಷಿಣಾಭಿಮುಖ ಚಲನೆ.

ಅಂದರೆ ಡಿ.22 ಮತ್ತು ಜೂ.21 ಸೂರ್ಯನ ಚಲನೆಯ ದಿಕ್ಕು ಪಲ್ಲಟವಾಗುವ ದಿನಗಳು. ಒಂದು ಕಾಲದಲ್ಲಿ ಜನವರಿ 14ರಂದು ಸೂರ್ಯ ಕ್ರಾಂತಿ ವೃತ್ತ ಇದ್ದ ಬಿಂದು ಒಂದು ಸಂಕ್ರಾಂತಿ ಬಿಂದುವೂ ಆಗಿತ್ತು. ಅದರೆ ವಿಷುವದ್ಬಿಂದುಗಳು ಪ್ರದಕ್ಷಿಣ ದಿಶೆಯಲ್ಲಿ ಕ್ರಾಂತಿವೃತ್ತದ ಮೇಲೆ ಮಂದಗತಿಯಿಂದ ಸರಿಯುವುದರಿಂದ ಅದೇ ದಿಶೆಯಲ್ಲಿ ಮತ್ತು ಗತಿಯಲ್ಲಿ ಸಂಕ್ರಾಂತಿ ಬಿಂದುಗಳೂ ಸರಿಯುತ್ತವೆ. ಹೀಗಾಗಿ ಜನವರಿ 14ರಂದು ಸಂಭವಿಸುತ್ತಿದ್ದ ಉತ್ತರಾಯಣ ಘಟನೆ ಇಂದು ಡಿಸೆಂಬರ್ 22ರಂದೇ ಸಂಭವಿಸುತ್ತದೆ. ಎಂದರೆ ಇಂದಿನ ಆಚರಣೆ ವಾಸ್ತವಿಕತೆಯಿಂದ ದೂರವಾಗಿದೆ.

ಅಂದರೆ ಮುಂದಿನ ಕೆಲವು ಶತಮಾನಗಳ ನಂತರ ಈ ಸೂರ್ಯ ಮಜ್ಜನದ ನೈಜ ದಿನವೂ ಬದಲಾಗುತ್ತದೆ ಎಂದು ಡಾ. ಜಯಂತ್ ವ್ಯಾಸನಕೆರೆ ಪ್ರತಿಪಾದಿಸಿದರು. ನಂತರ ಕಾರ್ಯಾಗಾರದ ಎರಡನೇ ಭಾಗದಲ್ಲಿ 'ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನ' ಎಂಬ ವಿಷಯದ ಮೇಲೆ ಕೆಎಲ್ ಇ ಸೊಸೈಟಿಯ ನಿಜಲಿಂಗಪ್ಪಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಮಾತನಾಡಿದರು. ಕಾರ್ಯಾಗಾರದಲ್ಲಿ ನ್ಯಾಶನಲ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿಜ್ಞಾನ, ಆಧ್ಯಾತ್ಮ ಸ್ವತಂತ್ರ್ಯ ಮತ್ತು ಪೂರಕ ಕ್ಷೇತ್ರಗಳು: ಡಾ. ಜಯಂತ್ ವ್ಯಾಸನಕೆರೆ!

loader