ಸಿಯೋಲ್: ಸ್ಯಾಮ್ಸಂಗ್ ಕಳೆದ ತಿಂಗಳಷ್ಟೇ ಬಿಡುಗಡೆಗೊಳಿಸಿದ ₹ 59.900 ಮೌಲ್ಯದ 'ಗ್ಯಾಲಕ್ಸಿ ನೋಟ್ 7' ಬ್ಯಾಟರಿಯಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ, ಅದನ್ನು ಮಾರುಕಟ್ಟೆಯಿಂದ ಹಿಂಪಡೆಯುವುದಾಗಿ ಸ್ಯಾಮ್ಸಂಗ್ ಘೋಷಿಸಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.

ಈಗಾಗಲೇ ವಿಶ್ವಾದ್ಯಂತ ಮೊಬೈಲ್ ಖರೀದಿಸಿದರಿಗೆ ಬದಲಿ ಮೊಬೈಲ್ ನೀಡುವುದಾಗಿಯೂ ಭರವಸೆ ನೀಡಿದೆ. ಇನ್ನು ಎರಡು ವಾರಗಳಲ್ಲಿ ಬದಲಿ ಮೊಬೈಲ್ ತಯಾರಿಸಿ ನೀಡುವುದಾಗಿ ಸಂಸ್ಥೆ ಹೇಳಿದೆ.

ಮೊಬೈಲ್ ಚಾರ್ಜ್ ಮಾಡುವಾಗ ಬ್ಯಾಟರಿ ಸ್ಫೋಟಗೊಳ್ಳುವ ಬಗ್ಗೆ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಸ್ಯಾಮಸಂಗ್ ನಡೆಸಿದ ತನಿಖೆ ಪ್ರಕಾರ, ವಿಶ್ವಾದ್ಯಂತ ಈ ರೀತಿ 35 ಪ್ರಕರಣಗಳು ಪತ್ತೆಯಾಗಿವೆ.

"ದೋಷಪೂರಿತ ಮೊಬೈಲ್ಗಳನ್ನು ಪತ್ತೆ ಮಾಡಲು ಮಾರುಕಟ್ಟೆಯಲ್ಲಿ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿದ್ದೇವೆ. ಮೊಬೈಲ್ ಮಾರಾಟವನ್ನೂ ಸ್ಥಗಿತಗೊಳಿಸಲಾಗಿದೆ" ಎಂದು ಸ್ಯಾಮ್ಸಂಗ್ ತಿಳಿಸಿದೆ.