ಜಿಯೋದಿಂದ 600 ರು.ಗೆ ಟೀವಿ, ಲ್ಯಾಂಡ್‌ಲೈನ್, ಬ್ರಾಡ್ ಬ್ಯಾಂಡ್!
ಜಿಯೋದಿಂದ 600 ರು.ಗೆ ಟೀವಿ, ಲ್ಯಾಂಡ್‌ಲೈನ್, ಬ್ರಾಡ್ ಬ್ಯಾಂಡ್| ಗಿಗಾಫೈಬರ್ ಮೂಲಕ 100 ಎಂಬಿ ವೇಗದಲ್ಲಿ 100 ಜಿ.ಬಿ. ಡೇಟಾ| 600 ಟೀವಿ ಚ್ಯಾನಲ್‌ಗಳು, ಅನಿಯಮಿತಿ ದೂರವಾಣಿ ಕರೆ ಸೌಲಭ್ಯ
ಮುಂಬೈ[ಏ.24]: ಅಗ್ಗದ ದರಕ್ಕೆ 4ಜಿ ಸೇವೆ ನೀಡಿ ಗ್ರಾಹಕರನ್ನು ಸೇಳೆಯಲು ಯಶಸ್ವಿಯಾಗಿರುವ ರಿಲಯನ್ಸ್ ಜಿಯೋ, ಇದೀಗ ತಿಂಗಳಿಗೆ ಕೇವಲ 600 ರು.ಗೆ ಹೈ ಸ್ಪೀಡ್ ಬ್ರಾಡ್ ಬ್ಯಾಂಡ್, ಸ್ಥಿರ ದೂರವಾಣಿ ಹಾಗೂ ಇಂಟರ್‌ನೆಟ್ ಟೀವಿ ಸೇವೆ ಒದಗಿಸಲಿದೆ.
100 ಮೆಗಾಬೈಟ್ ವೇಗದಲ್ಲಿ 100 ಜಿಜಿ ಡೇಟಾ ನೀಡುವ ಗಿಗಾಫೈಬರ್ ಯೋಜನೆಯನ್ನು ದೆಹಲಿ ಮತ್ತು ಮುಂಬೈನಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೋಟರ್‌ಗೆ 4,500 ರು. ಶುಲ್ಕ ಹೊರತುಪಡಿಸಿ ಉಳಿದಲ್ಲವೂ ಉಚಿತವಾಗಿ ನೀಡಲಾಗುತ್ತಿದೆ. ಈ ಸೇವೆಗೆ ಮುಂದಿನ ಮೂರು ತಿಂಗಳಿನಲ್ಲಿ ಸ್ಥಿರ ದೂರವಾಣಿ ಮತ್ತು ಇಂಟರ್‌ನೆಟ್ ಟೀವಿ ಸೇವೆಯನ್ನು ಸೇರ್ಪಡೆ ಮಾಡಲಾಗುತ್ತದೆ. ಒಂದು ವರ್ಷಗಳ ಕಾಲ ಉಚಿತವಾಗಿ ಈ ಸೇವೆಯನ್ನು ನೀಡಲಾಗುತ್ತದೆ. ಬಳಿಕ ವಾಣಿಜ್ಯಿಕವಾಗಿ ರಿಲಯನ್ಸ್ ಜಿಯೋ ಗಿಗಾ ಫೈಬರ್ ಯೋಜನೆಯನ್ನು ಇತರ ನಗರಗಳಲ್ಲೂ ಜಾರಿ ಮಾಡಲಿದೆ.
ಮೂರು ವಿಧದ ಸೇವೆಗಳು ಆಫ್ಟಿಕಲ್ ನೆಟ್‌ವರ್ಕ್ ಟರ್ಮಿನಲ್ (ಒಎನ್‌ಟಿ) ಬಾಕ್ಸ್ ರೂಟರ್‌ನ ಮೂಲಕ ಲಭ್ಯವಾಗಲಿದೆ. ಸ್ಮಾರ್ಟ್‌ಫೋನ್, ಸ್ಮಾರ್ಟ್ ಟೀವಿ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ಸ್ಮಾರ್ಟ್ ಉಪಕರಣಗಳು ಸೇರಿದಂತೆ 40ರಿಂದ 45 ಉಪಕರಣಗಳಿಗೆ ಸಂಪರ್ಕಿಸಬಹುದಾಗಿದೆ. ಇಂಟರ್‌ನೆಟ್ ಟೀವಿಯಲ್ಲಿ 600 ಚ್ಯಾನಲ್‌ಗಳು, ಸ್ಥಿರ ದೂರವಾಣಿಯಲ್ಲಿ ಅನಿಯಮಿತ ಕರೆ ಸೌಲಭ್ಯ ಮತ್ತು 100 ಮೆಗಾಬೈಟ್ ವೇಗದಲ್ಲಿ ಬ್ರಾಡ್ ಬ್ರ್ಯಾಂಡ್ ಸೇವೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.