Asianet Suvarna News Asianet Suvarna News

5G Launch In India: ಹಳೆಯದಾಯ್ತು 4ಜಿ, ಇನ್ನು 5ಜಿ ಯುಗ..!

ದೇಶದಲ್ಲಿ 4ಜಿ ಜಮಾನ ಹಳೆಯದಾಗಿದೆ. 5ಜಿ ಯುಗ ಆರಂಭವಾಗಿದೆ. ಶನಿವಾರ ಪ್ರಗತಿ ಮೈದಾನದಲ್ಲಿ ಆರಂಭವಾದ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ 5ಜಿ ಸೇವೆಗೆ ಚಾಲನೆ ನೀಡಿದರು. ಏರ್‌ಟೆಲ್‌ ವಾರಣಾಸಿಯಿಂದ ಈ ಸೇವೆ ಆರಂಭಿಸಲಿದ್ದರೆ, ಜಿಯೋ ಅಹಮದಾಬಾದ್‌ನಿಂದ ಈ ಸೇವೆಯನ್ನು ಆರಂಭಿಸಿದೆ.

PM Narendra Modi Launch 5G Service in India Take Live Demo From DIAS To Monitor Work In Real time san
Author
First Published Oct 1, 2022, 11:03 AM IST

ನವದೆಹಲಿ (ಅ.1): ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಬಹುನಿರೀಕ್ಷಿತ 5ಜಿ ಸೇವೆಗೆ ಚಾಲನೆ ನೀಡಿದರು. ಅದರೊಂದಿಗೆ ದೇಶದಲ್ಲಿ ಹೈಸ್ಪೀಡ್‌ ಇಂಟರ್ನೆಟ್‌ ದುನಿಯಾ ಆರಂಭವಾಗಿದೆ. 4ಜಿ ಸೇವೆಯಲ್ಲಿ 50 ಎಂಬಿಪಿಎಸ್‌ ಕನಿಷ್ಠ ವೇಗವಾಗಿದ್ದರೆ, 5ಜಿ ಸೇವೆಯಲ್ಲಿ ಇಂಟರ್‌ನೆಟ್‌ನ ವೇಗ ಕನಿಷ್ಠ 1 ಜಿಬಿ ಇರಲಿದೆ. ದೇಶದ ಅಗ್ರ ಟೆಲಿಕಾಂ ಸೇವಾ ಸಂಸ್ಥೆಗಳಾಗಿರುವ ಏರ್‌ಟೆಲ್‌ ವಾರಣಾಸಿಯಿಂದ ಈ ಸೇವೆಯನ್ನು ಆರಂಭ ಮಾಡಲಿದ್ದರೆ, ಜಿಯೋ ಸಂಸ್ಥೆಯು ಅಹಮದಾಬಾದ್‌ನ ಹಳ್ಳಿಯಿಂದ 5ಜಿ ಸೇವೆಯನ್ನು ಆರಂಭ ಮಾಡಲಿದೆ. ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಪ್ರಗತಿ ಮೈದಾನದಲ್ಲಿ 5ಜಿಯನ್ನು ದೇಶಕ್ಕೆ ಅರ್ಪಣೆ ಮಾಡಿದರು. ಇಂದಿನಿಂದ ನಾಲ್ಕು ದಿನಗಳ ಕಾಲ 6ನೇ ಅವೃತ್ತಿಯ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌, ಪ್ರಗತಿ ಮೈದಾನದಲ್ಲಿ ಆರಂಭವಾಗಲಿದೆ. 5ಜಿ ಅನಾವರಣ ಮಾಡುವುದರೊಂದಿಗೆ ಪ್ರಧಾನಿ ಟೆಲಿಕಾಂ ಉದ್ಯಮದ ಪ್ರಮುಖ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇಶದ ಪ್ರಮುಖ ಉದ್ಯಮಿಗಳಾದ ಮುಖೇಶ್‌ ಅಂಬಾನಿ, ಅವರ ಪುತ್ರ ಹಾಗೂ ಜಿಯೋ ಚೇರ್ಮನ್‌ ಆಕಾಶ್‌ ಅಂಬಾನಿ, ಕುಮಾರ ಮಂಗಲಂ ಬಿರ್ಲಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.


ಇಂಡಿಯಾ ಮೊಬೈಲ್ ಕಾನ್ಫರೆನ್ಸ್‌ನಲ್ಲಿ ವರ್ಚುವಲ್ ರಿಯಾಲಿಟಿ ಅನುಭವ ತೆಗೆದುಕೊಳ್ಳಲು ಪ್ರಧಾನಿ ಮೋದಿ ವಿಶೇಷ ಕನ್ನಡಕಗಳನ್ನು ಧರಿಸಿ ಅನುಭವ ಪಡೆದರು. ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ವಸ್ತುಪ್ರದರ್ಶನವನ್ನು ವೀಕ್ಷಿಸಿದ ಪ್ರಧಾನಿ ಮೋದಿ ಅವರೊಂದಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಜೊತೆಯಾದರು. ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ, ಪ್ರಧಾನಿ ಮೋದಿ ಅವರು ದೇಶದಲ್ಲಿ 5G ಸೇವೆಗಳಿಗೆ ಚಾಲನೆ ನೀಡಿದ್ದು, ಆರಂಭದಲ್ಲಿ 13 ನಗರಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ. 'ದೇಶದಲ್ಲಿ 5G ಕ್ರಾಂತಿ ಪ್ರಾರಂಭವಾಗಲಿದೆ. ನಾನು ವಿಶೇಷವಾಗಿ ಟೆಕ್ ಜಗತ್ತು, ಸ್ಟಾರ್ಟಪ್ ಜಗತ್ತು ಮತ್ತು ನನ್ನ ಯುವ ಸ್ನೇಹಿತರನ್ನು ಈ ಕಾರ್ಯಕ್ರಮಕ್ಕೆ ಸೇರಲು ಮನವಿ ಮಾಡುತ್ತೇನೆ' ಎಂದು ಅನಾವರಣಕ್ಕೂ ಮುನ್ನ ಪ್ರಧಾನಿ ಮೋದಿ (Prime Minister Narendra Modi) ಟ್ವೀಟ್‌ ಮಾಡಿದ್ದರು.

ಲೈವ್ ಡೆಮೊ ನೀಡಿದ ಜಿಯೋ, ವೊಡಾಫೋನ್ ಮತ್ತು ಏರ್‌ಟೆಲ್: ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸಲು, ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಪ್ರಧಾನ ಮಂತ್ರಿಗೆ ತಮ್ಮ 5ಜಿ ಸೇವೆಯನ್ನು ಪ್ರದರ್ಶಿಸಲಿದ್ದಾರೆ. ಅದೇ ಸಮಯದಲ್ಲಿ, ವಿಆರ್ (VR) ಮತ್ತು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಂಡು ನೈಜ ಸಮಯದಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಪಿಎಂ ಮೋದಿ ಡಿಯಾಸ್‌ನಿಂದ ಲೈವ್ ಡೆಮೊ ತೆಗೆದುಕೊಂಡಿದ್ದಾರೆ. ಡ್ರೋನ್ ಆಧಾರಿತ ಕೃಷಿ, ಸ್ವಯಂಚಾಲಿತ ಮಾರ್ಗದರ್ಶಿ ವಾಹನಗಳು, ಸ್ಮಾರ್ಟ್ ಆಂಬ್ಯುಲೆನ್ಸ್‌ಗಳು, ಸ್ಮಾರ್ಟ್-ಅಗ್ರಿ ಕಾರ್ಯಕ್ರಮಗಳು ಮತ್ತು ಆರೋಗ್ಯ ರೋಗನಿರ್ಣಯದಂತಹ ವಿಷಯಗಳನ್ನು ಸಹ ಪ್ರಧಾನಿ ಮುಂದೆ ಪ್ರದರ್ಶಿಸಲಾಗಿದೆ.

ಹೀಗಿತ್ತು ಟೆಲಿಕಾಂ ಆಪರೇಟರ್‌ಗಳ ಡೆಮೋ: ರಿಲಯನ್ಸ್ ಜಿಯೋ (Jio) ಮುಂಬೈ ಶಾಲೆಯ ಶಿಕ್ಷಕರೊಬ್ಬರನ್ನು 5ಜಿ ಸೇವೆ ಬಳಸಿಕೊಂಡು, ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದ ಮೂರು ವಿಭಿನ್ನ ಸ್ಥಳಗಳ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸುತ್ತದೆ. ಈ ಮೂಲಕ ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರವಾಗಿಸುವ ಮೂಲಕ, ಅವರ ನಡುವಿನ ದೈಹಿಕ ಅಂತರವನ್ನು ನಿವಾರಿಸುವ ಮೂಲಕ 5G ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ಪ್ರಧಾನಿಯವರಿಗೆ ತಿಳಿಸಿದ್ದಾರೆ.

ಅಕ್ಟೋಬರ್‌ 1 ರಂದು ಭಾರತದಲ್ಲಿ 5ಜಿ ಸೇವೆ ಆರಂಭ, ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಮೋದಿ ಅನಾವರಣ

ಏರ್‌ಟೆಲ್ (Airtel) ತನ್ನ ಡೆಮೊದಲ್ಲಿ ಉತ್ತರ ಪ್ರದೇಶದ ವಿದ್ಯಾರ್ಥಿನಿಯನ್ನು ಸೇರಿಸಿಕೊಳ್ಳಲಿದೆ. ಆ ವಿದ್ಯಾರ್ಥಿಗೆ ವರ್ಚುವಲ್ ಮತ್ತು ವರ್ಧಿತ ರಿಯಾಲಿಟಿ ಸಹಾಯದಿಂದ ಸೌರವ್ಯೂಹದ ಬಗ್ಗೆ ಕಲಿಸಲಾಗುತ್ತದೆ.  ವಿದ್ಯಾರ್ಥಿ ಹೊಲೊಗ್ರಾಮ್ ಮೂಲಕ ವೇದಿಕೆಯಲ್ಲಿ ಉಪಸ್ಥಿತರಿದ್ದರು ಮತ್ತು ಅವರ ಕಲಿಕೆಯ ಅನುಭವವನ್ನು ಪ್ರಧಾನ ಮಂತ್ರಿಯೊಂದಿಗೆ ಹಂಚಿಕೊಂಡರು.

ಅಕ್ಚೋಬರ್ 12ಕ್ಕೆ ಭಾರತದಲ್ಲಿ 5G ಸೇವೆ ಆರಂಭ, ಟೆಲಿಕಾಂ ಸಚಿವ ಘೋಷಣೆ!

ವೊಡಾಫೋನ್ ಐಡಿಯಾವು (Vodafone Idea)  ದೆಹಲಿ ಮೆಟ್ರೋದ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಕಾರ್ಮಿಕರ ಸುರಕ್ಷತೆಯನ್ನು ಡಯಾಸ್‌ನಲ್ಲಿ ಸುರಂಗದ 'ಡಿಜಿಟಲ್ ಟ್ವಿನ್' ನಿರ್ಮಾಣದ ಮೂಲಕ ಪ್ರದರ್ಶನ ಮಾಡಿದೆ. ಡಿಜಿಟಲ್ ಟ್ವಿನ್ ದೂರದ ಸ್ಥಳದಿಂದ ನೈಜ ಸಮಯದಲ್ಲಿ ಕಾರ್ಮಿಕರಿಗೆ ಸುರಕ್ಷತೆ ಎಚ್ಚರಿಕೆಗಳನ್ನು ಒದಗಿಸಲು ಸಹಾಯ ಮಾಡಿದೆ.

5G ಸೇವೆಯಿಂದ ಆಗುವ ಪ್ರಯೋಜನಗಳೇನು?

- ಈ ಸೇವೆಯ ಮೊಟ್ಟಮೊದಲ ಪ್ರಯೋಜನ ಬಳಕೆದಾರರು ವೇಗದ ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುತ್ತದೆ.

- ವೀಡಿಯೊ ಗೇಮಿಂಗ್ ಕ್ಷೇತ್ರದಲ್ಲಿ 5G ಆಗಮನವು ದೊಡ್ಡ ಬದಲಾವಣೆಯನ್ನು ತರುತ್ತದೆ.

- ಬಫರಿಂಗ್ ಅಥವಾ ಯಾವ ಅಡೆತಡೆ ಇಲ್ಲದೆ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ.

- ಇಂಟರ್ನೆಟ್ ಕರೆಗಳಲ್ಲಿ, ಧ್ವನಿಯು ಯಾವುದೇ ತಡೆ ಇಲ್ಲದೆ ಮತ್ತು ಸ್ಪಷ್ಟವಾಗಿ ಕೇಳಲಿದೆ.

- 2 GB ಚಲನಚಿತ್ರವು 10 ರಿಂದ 20 ಸೆಕೆಂಡುಗಳಲ್ಲಿ ಡೌನ್‌ಲೋಡ್ ಆಗುತ್ತದೆ.

- ಕೃಷಿ ವಲಯದ ಕ್ಷೇತ್ರಗಳ ಮೇಲ್ವಿಚಾರಣೆಯಲ್ಲಿ ಡ್ರೋನ್ ಬಳಕೆ ಸಾಧ್ಯ.

- ಮೆಟ್ರೊ ಮತ್ತು ಚಾಲಕ ರಹಿತ ವಾಹನಗಳ ನಿರ್ವಹಣೆ ಸುಲಭವಾಗಲಿದೆ.

- ವರ್ಚುವಲ್ ರಿಯಾಲಿಟಿ ಮತ್ತು ಕಾರ್ಖಾನೆಗಳಲ್ಲಿ ರೋಬೋಟ್‌ಗಳನ್ನು ಬಳಸುವುದು ಸುಲಭವಾಗುತ್ತದೆ.

Follow Us:
Download App:
  • android
  • ios