Asianet Suvarna News Asianet Suvarna News

ಟ್ರಿಣ್ ಟ್ರಿಣ್ ಟ್ರೀನ್ ಟ್ರೀನ್.. ಟ್ರೀಈನ್...... BSNL ಅಂತ್ಯ ಸನ್ನಿಹಿತ?

ಫಿಕ್ಸೆಡ್ ಲೈನ್ ಟೆಲಿಫೋನ್ ಅಂದ್ರೆ ಇಂದಿಗೂ ನೆನಪಾಗೋದು BSNL ಫೋನ್ | ದೇಶದ ನಾಲ್ಕನೇ ದೊಡ್ಡ ಟೆಲಿಕಾಂ ಸಂಸ್ಥೆ BSNL ಬಳಿ ಉದ್ಯೋಗಿಗಳಿಗೆ ಜೂನ್ ತಿಂಗಳ ವೇತನ ಪಾವತಿಸಲೂ ದುಡ್ಡಿಲ್ಲ! | ನೆರವಿಗಾಗಿ ಸರ್ಕಾರದ ಮೊರೆ ಹೋದ ಸಂಸ್ಥೆ | ಸರ್ಕಾರಿ ಸ್ವಾಮ್ಯದ ಕಂಪನಿ ಎಡವಿದ್ದೆಲ್ಲಿ? | ಮುಂದೇನು? 

No Money To Pay Salaries All You Need To Know About BSNL Crisis
Author
Bengaluru, First Published Jun 26, 2019, 6:23 PM IST

ಬೆಂಗಳೂರು (ಜೂ. 26): ಒಂದು ಕಾಲದಲ್ಲಿ ಲಾಭದಲ್ಲಿದ್ದ ಕೆಲವೇ ಕೆಲವು ಟೆಲಿಕಾಂ ಕಂಪನಿಗಳ ಪೈಕಿ BSNL ಒಂದು. ಒಂದೊಮ್ಮೆ ಪ್ರತಿ ವರ್ಷ BSNL ಬರೋಬ್ಬರಿ 10000 ಕೋಟಿ ಲಾಭ ಗಳಿಸುತ್ತಿತ್ತು. ಆದರೆ, 2019ರಲ್ಲಿ ತನ್ನ ಉದ್ಯೋಗಿಗಳಿಗೆ ಸಂಬಳ ಕೊಡುವಷ್ಟೂ ಸಾಮರ್ಥ್ಯ BSNLಗೆ ಇಲ್ಲವಾಗಿದೆ. ಸುಮಾರು 13000 ಕೋಟಿ ಸಾಲದಲ್ಲಿರುವ BSNL ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದೆ. 

ನಷ್ಟ ಅಷ್ಟಿಷ್ಟಲ್ಲ!

ಕಳೆದ ಐದು ವರ್ಷಗಳಿಂದ BSNL ಸತತವಾಗಿ ನಷ್ಟವನ್ನು ಅನುಭವಿಸುತ್ತಿದೆ. 2017ರಲ್ಲಿ  ₹4786 ಕೋಟಿ ನಷ್ಟವನ್ನು ಅನುಭವಿಸಿದ್ದ BSNL, 2018ರಲ್ಲಿ 8000 ಕೋಟಿ ನಷ್ಟದಲ್ಲಿತ್ತು. 2019ರಲ್ಲಿ ಅದಿನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 2017-18ನೇ ಸಾಲಿನವರೆಗೆ 31,287 ಕೋಟಿ ರು. ಸಂಚಿತ ನಷ್ಟವನ್ನು BSNL ಹೊಂದಿತ್ತು. ಸರ್ಕಾರಿ ಸ್ವಾಮ್ಯದ, ದೇಶದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ BSNL ಶೀಘ್ರದಲ್ಲೇ ರಿಂಗಣಿಸುವುದನ್ನು ನಿಲ್ಲಿಸಲಿದೆ ಎಂಬ ಆತಂಕ ಈಗ ಎದುರಾಗಿದೆ.

ಲೈನ್ ಕಟ್ ಆದದ್ದೆಲ್ಲಿ?

ಕೆಲವು ವರ್ಷಗಳಿಂದ ನಷ್ಟದಲ್ಲಿದ್ದ BSNL ಪರಿಸ್ಥಿತಿ, ರಿಲಯನ್ಸ್ ಜಿಯೋ ಬಂದ ಬಳಿಕವಂತೂ ಮತ್ತಷ್ಟು ಬಿಗಡಾಯಿಸಿದೆ. ಗುಣಮಟ್ಟದ ಸೇವೆ ಹಾಗೂ ಆಧುನಿಕ ತಂತ್ರಜ್ಞಾನದ ವಿಚಾರದಲ್ಲಿ ಖಾಸಗಿ ಕಂಪನಿಗಳಿಗೆ ಹೋಲಿಸಿದಾಗ BSNL ಹಿಂದಿದೆ. ಇತರೆಲ್ಲಾ ಟೆಲಿಕಾಂ ಕಂಪನಿಗಳು 5Gಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, BSNL ಇನ್ನೂ 4Gಯನ್ನು ಪರೀಕ್ಷಿಸುತ್ತಿದೆ. ಸರ್ಕಾರಿ ನೀತಿಗಳು, ಆಧುನಿಕ ಸೌಕರ್ಯಗಳ ಕೊರತೆ, ಕಂಪನಿಯ ಸ್ವರೂಪ,  ಬ್ಯಾಂಕ್ ಸಾಲ ಪಡೆಯದಿರಲು ಸರ್ಕಾರದ ಸೂಚನೆ, ಮತ್ತಿತರ ಕಾರಣಗಳು BSNL  ಅಧೋಗತಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.  

ಕಳೆದ ಫೆಬ್ರವರಿಯಲ್ಲಿ  BSNLನ್ನು ಲಾಭಕ್ಕೆ ತರುವ ಬಗ್ಗೆ ಅಥವಾ ಮುಚ್ಚುವ ಬಗ್ಗೆ ಸಮಗ್ರ ವರದಿಯೊಂದನ್ನು ನೀಡುವಂತೆ ಕೇಂದ್ರ ಸರ್ಕಾರ BSNL ಮುಖ್ಯಸ್ಥರಿಗೆ ಸೂಚನೆ ನೀಡಿದನ್ನು ಸ್ಮರಿಸಬಹುದು.

ಸಂಬಳಕ್ಕೂ ಕೈ ಚಾಚುವ ಪರಿಸ್ಥಿತಿ:

BSNL ಇತಿಹಾಸದಲ್ಲೇ ಮೊದಲ ಬಾರಿಗೆ 1.76 ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲು ಹಣವಿಲ್ಲದಂತಹ ಸ್ಥಿತಿ ಫೆಬ್ರವರಿಯಲ್ಲಿ ನಿರ್ಮಾಣವಾಗಿತ್ತು. ಬಳಿಕ ಸುಮಾರು 54 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರಸ್ತಾವನೆಯೊಂದನ್ನು BSNL ಮಂಡಳಿ ಅನುಮೋದಿಸಿದೆ ಎಂದು ಹೇಳಲಾಗಿತ್ತು.

ಲೈನ್ ರಿಪೇರಿ ಹೇಗೆ: 

ಕಂಪನಿಯ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ರಚಿಸಲಾಗಿದ್ದ ಅಹಮದಾಬಾದ್‌ ಐಐಎಂ ತಜ್ಞರ ಸಮಿತಿ ನೀಡಿದ 10ರ ಪೈಕಿ 3 ಪ್ರಸ್ತಾಪಗಳನ್ನು BSNL ಮಂಡಳಿಯು ಅನುಮೋದಿತ್ತು. ಅವುಗಳಲ್ಲಿ ನೌಕರರ ನಿವೃತ್ತಿ ವಯಸ್ಸನ್ನು ಈಗಿನ 60ರಿಂದ 58ಕ್ಕೆ ಇಳಿಸುವುದು ಹಾಗೂ 50 ವರ್ಷ ಮೇಲ್ಪಟ್ಟ ನೌಕರರ ಸ್ವಯಂ ನಿವೃತ್ತಿ (VRS) ಎಂಬ 2 ಮಹತ್ವದ ಪ್ರಸ್ತಾಪಗಳು ಇದ್ದುವು ಎಂದು ವರದಿಯಾಗಿತ್ತು.

ಆ ಹಿನ್ನೆಲೆಯಲ್ಲಿ, ತಕ್ಷಣವೇ  BSNLಗೆ 4G ಸ್ಪೆಕ್ಟ್ರಂ ಹಂಚಿಕೆ ಮಾಡಬೇಕು, ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಬೇಕು ಮತ್ತು ತಕ್ಷಣವೇ ಬಂಡವಾಳ ಹೂಡಿಕೆ ಮಾಡಬೇಕು. ಈ ಮೂರು ಪ್ರಸ್ತಾವನೆಗಳ ಜಾರಿಗೆ ಶೀಘ್ರವೇ ಮಾರ್ಗಸೂಚಿ ನೀಡಿ ಎಂದು ಪ್ರಧಾನಿ ಕಾರ್ಯಾಲಯ ಇತ್ತೀಚೆಗೆ ಸೂಚಿಸಿದೆ ಎನ್ನಲಾಗಿದೆ. 

ಹಣಕಾಸು ನೆರವಿಗಾಗಿ BSNL ಸರ್ಕಾರದ ಮತ್ತು ಬ್ಯಾಂಕ್‌ಗಳ ಮೊರೆ ಹೋಗಿದೆ.  ಜೂನ್ ತಿಂಗಳ ವೇತನ ಪಾವತಿಸಲು ₹850 ಕೋಟಿ , ಹಾಗೂ ಮುಂದಿನ ಕೆಲವು ತಿಂಗಳ ಕಾಲ ಸುಗಮವಾಗಿ ನಡೆಸುವಂತಾಗಲು ₹2500 ಕೋಟಿ ಸಾಲದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.  

ಮುಂದೇನು?

ಸರ್ಕಾರ ಒಂದು ವೇಳೆ ₹2500 ಕೋಟಿ ಸಾಲ ನೀಡಲು ಒಪ್ಪಿದರೆ ಇನ್ನು 6 ತಿಂಗಳು ಸಂಸ್ಥೆಯನ್ನು ನಡೆಸಬಹುದು.  ಈ ನಡುವೆ, ಏನಾದರೂ ವ್ಯವಹಾರಿಕ ಪವಾಡ ನಡೆದರೆ, BSNL ತನ್ನ ದೌರ್ಬಲ್ಯಗಳನ್ನು ಮೆಟ್ಟಿ ನಿಂತರೆ,  ಏನಾದರು ಒಳ್ಳೆಯದನ್ನು ನಿರೀಕ್ಷಿಸಬಹುದು.  ತದನಂತರ ಇದೇ ಸನ್ನಿವೇಶ ಉಂಟಾಗಲಿದೆ. ಸಾಲ ಸಿಗದಿದ್ದರೇ? ಈ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ.

5 ಸೆಪ್ಟಂಬರ್ 2000 ರಲ್ಲಿ ಆರಂಭವಾದ BSNL, ಲ್ಯಾಂಡ್ ಲೈನ್ ಟೆಲಿಫೋನ್, ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸುತ್ತಿದೆ. ಬ್ರಿಟಿಷ್ ಕಾಲದಲ್ಲಿ ಆರಂಭವಾಗಿ, ಅಂಚೆ ಇಲಾಖೆಯ ಅಧೀನದಲ್ಲಿದ್ದ ಟೆಲಿಗ್ರಾಫ್ ಸೇವೆಯು ನಂತರದ ವರ್ಷಗಳಲ್ಲಿ BSNL ತೆಕ್ಕೆಯಲ್ಲಿತ್ತು.  2013ರಲ್ಲಿ ಟೆಲಿಗ್ರಾಂ ಸೇವೆಯನ್ನು BSNL ಸ್ಥಗಿತಗೊಳಿಸಿತ್ತು.  2018 ಡಿಸೆಂಬರ್ ಹೊತ್ತಿಗೆ BSNL ಸುಮಾರು 114.342 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು.

Follow Us:
Download App:
  • android
  • ios