ಶೀಘ್ರದಲ್ಲೇ ಮತ್ತೋರ್ವ ಭೂತಾಯಿ?: ದಿಗಂತದಲ್ಲಿ ಮೆಕ್ಸಿಕನ್ ಮೆಣಸಿನಕಾಯಿ!
ಅಂತರಿಕ್ಷದಲ್ಲಿ ಮೆಣಸಿನಕಾಯಿ ಬೆಳೆಯಲಿದೆ ನಾಸಾ| ಭವಿಷ್ಯದ ಅಂತರಿಕ್ಷ ಯೋಜನೆಗಳಿಗಾಗಿ ದಿಗಂತದಲ್ಲಿ ಆಹಾರ ಉತ್ಪಾದನೆ| ಅಂತರಾಷ್ಟ್ರೀಯ ಬ್ಯಾಹಾಕಾಶ ನಿಲ್ದಾಣದಲ್ಲಿ ವಿಶ್ವ ಪ್ರಸಿದ್ಧ ಮೆಕ್ಸಿಕನ್ ಚಿಲ್ಲಿ| ಅಂತರಿಕ್ಷದಲ್ಲಿ ಹೊಸ ಸಂಶೋಧನೆಗೆ ಮುನ್ನಡಿ ಬರೆದ ನಾಸಾ|
ವಾಷಿಂಗ್ಟನ್(ಜು.28): ಮನುಷ್ಯನನ್ನು ಭೂಮಿಯ ಮೇಲಿನ ಅತ್ಯಂತ ಬುದ್ದಿವಂತ ಪ್ರಾಣಿ ಅಂತಾರೆ. ಆತ ಅದಷ್ಟು ಬುದ್ದಿವಂತನೆಂದರೆ ತನಗೆ ಜನ್ಮವಿತ್ತ ಭೂಮಿಯನ್ನೇ ಬಿಟ್ಟು ಮತ್ತೊಂದು ಭುಮಿಯನ್ನು ಅರಸುತ್ತಿದ್ದಾನೆ.
ಅರಸದೇ ಇನ್ನೇನು ತಾನೇ ಮಾಡಿಯಾನು ಹೇಳಿ?. ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ವಸುಧೆಯ ಒಡಲನ್ನು ಹಾಳು ಮಾಡಿರುವ ಮಾನವ, ಇದೀಗ ಅದರ ಮಡಿಲಿನಿಂದ ಆಚೆ ಹೋಗುವ ತವಕದಲ್ಲಿದ್ದಾನೆ.
ಇದೇ ಕಾರಣಕ್ಕೆ ಇತರರಿಗಿಂತ ತುಸು ಹೆಚ್ಚೇ ಬುದ್ದಿವಂತರಾಗಿರುವ ಖಗೋಳ ವಿಜ್ಞಾನಿಗಳು, ಇಂದಲ್ಲ ನಾಳೆ ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಕುರುಕ್ಷೇತ್ರವಾಗಿ ಮಾರ್ಪಡಲಿರುವ ಈ ಭೂಮಿಯನ್ನು ಆದಷ್ಟು ಬೇಗ ಬಿಟ್ಟು ಮತ್ತೊಂದು ಸುಂದರ ಭೂಮಿಯಲ್ಲಿ ಸುಂದರ ಬದುಕಿನ ಪ್ರಾರಂಭದ ಕನಸು ಕಾಣುತ್ತಿದ್ದಾರೆ.
ಅಂದರೆ ಈ ಅನಂತ ವಿಶ್ವದಲ್ಲಿ ಭೂಮಿಯನ್ನು ಹೋಲು ಮತ್ತೊಂದು ಗ್ರಹವನ್ನು ಶೋಧಿಸುವಲ್ಲಿ ನಿರತರಾಗಿರುವ ಖಗೋಳಶಾಸ್ತ್ರಜ್ಞರು, ಹಾಗೊಂದು ವೇಳೆ ಅಂತಹ ಗ್ರಹವನ್ನು ಅನ್ವೇಷಿಸಿದ್ದೇ ಆದಲ್ಲಿ, ಬದುಕಿಗೆ ಅವಶ್ಯವಾಗಿರುವ ಆಹಾರ ಧಾನ್ಯಗಳನ್ನು ಅಂತರಿಕ್ಷದಲ್ಲಿ ಬೆಳೆಯುವ ಪ್ರಯೋಗವನ್ನೂ ಮಾಡುತ್ತಿದ್ದಾರೆ.
ಹೌದು, ನಾಸಾದ ಭವಿಷ್ಯದ ಅಂತರಿಕ್ಷ ಯೋಜನೆಗಳಾದ ಚಂದ್ರಯಾನ, ಮಂಗಳಯಾನ ಮತ್ತಿತರ ಖಗೋಳ ಪ್ರವಾಸಗಳಲ್ಲಿ ಗಗನಯಾತ್ರಿಗಳಿಗಾಗಿ ಆಹಾರ ಪದ್ದತಿ ನಿರ್ಧರಿಸಲು ನಾಸಾ ಹೊಸ ಯೋಜನೆ ಕೈಗೆತ್ತಿಕೊಂಡಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಅವುಗಳನ್ನು ಗಗನಯಾತ್ರಿಗಳ ಆಹಾರವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಸಂಶೋಧನೆಗೆ ನಾಸಾ ಮುನ್ನುಡಿ ಬರೆದಿದೆ.
ಈ ಯೋಜನೆಯ ಭಾಗವಾಗಿ ನಾಸಾ ವಿಶ್ವ ಪ್ರಸಿದ್ಧ ಮೆಕ್ಸಿಕನ್ ಚಿಲ್ಲಿ(ಮೆಣಸಿನಕಾಯಿ)ಯ ತಳಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಬೆಳೆಸಲು ನಿರ್ಧರಿಸಿದೆ. ಈ ಯೋಜನೆ ಯಶಸ್ವಿಯಾದರೆ ಬೇರೆ ಬೇರೆ ಆಹಾರ ಪದಾರ್ಥಗಳನ್ನು ಬೆಳೆಯುವ ಯೋಜನೆಗೆ ನಾಸಾ ಮುಂದಾಗಲಿದೆ.
ಎಸ್ಪಾನೋಲಾ ಚಿಲ್ಲಿ ಉತ್ತರ ಮೆಕ್ಸಿಕೋದಲ್ಲಿ ಬೆಳೆಯುವ ಮೆಣಸಿನಕಾಯಿಯಾಗಿದ್ದು, ಮೆಕ್ಸಿಕೋದ ಹ್ಯಾಚ್ ವ್ಯಾಲಿಯಾ ಸ್ಯಾಂಡಿಯಾ ತಳಿ ಕೂಡ ವಿಶ್ವ ಪ್ರಸಿದ್ಧ.