ಫ್ಲೋರಿಡಾ [ಜೂ.28] : ಚಿನ್ನ, ಪ್ಲಾಟಿನಂನಂತಹ ದುಬಾರಿ ಲೋಹಗಳಿಂದಲೇ ತಯಾರಾಗಿರುವ ‘ಸೈಕ್‌- 16’ ಎಂಬ ಕ್ಷುದ್ರಗ್ರಹಕ್ಕೆ 2022ರೊಳಗೆ ಯಾನ ಕೈಗೊಳ್ಳಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮುಂದಾಗಿದೆ. ಮಂಗಳ ಹಾಗೂ ಗುರು ಗ್ರಹಗಳ ಮಧ್ಯೆ ಇರುವ ಈ ಸಣ್ಣ ಆಕಾಶಕಾಯದಲ್ಲಿ ಗಣಿಗಾರಿಕೆ ನಡೆಸಿ, ಅದರಲ್ಲಿರುವ ಲೋಹಗಳನ್ನು ಭೂಮಿಗೆ ತಂದು ಹಂಚಿದರೆ ಪ್ರತಿಯೊಬ್ಬರನ್ನೂ ಸಹಸ್ರಾರು ಕೋಟಿ ಒಡೆಯರನ್ನಾಗಿಸಬಹುದು! ಅಷ್ಟುಲೋಹ ಅಲ್ಲಿ ದಾಸ್ತಾನಿದೆ.

ವಿಜ್ಞಾನಿಗಳು ಹಾಗೂ ಗಣಿಗಾರಿಕೆ ತಜ್ಞರ ಲೆಕ್ಕಾಚಾರದ ಪ್ರಕಾರ ಸೈಕ್‌ ಕ್ಷುದ್ರಗ್ರಹದಲ್ಲಿ 8000 ಕ್ವಾಡ್ರಿಲಿಯನ್‌ ಪೌಂಡ್‌ ಮೌಲ್ಯದಷ್ಟುಲೋಹಗಳ ದಾಸ್ತಾನು ಇದೆ. (1 ಕ್ವಾಡ್ರಿಲಿಯನ್‌ ಅಂದರೆ 100 ಲಕ್ಷ ಕೋಟಿ ರು.)

ಚಿನ್ನ, ಪ್ಲಾಟಿನಂ, ಕಬ್ಬಿಣ, ನಿಕಲ್‌ನಂತಹ ಘನ ಲೋಹಗಳಿಂದಲೇ ಸೃಷ್ಟಿಯಾಗಿರುವ ಈ ಕ್ಷುದ್ರಗ್ರಹದಲ್ಲಿ ಗಣಿಗಾರಿಕೆ ನಡೆಸುವ ಸಲುವಾಗಿ ನಾಸಾ ಯಾನ ಕೈಗೊಳ್ಳುತ್ತಿಲ್ಲ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಪತ್ತೆ ಹಚ್ಚಲು ಹೊರಟಿದೆ. ಕ್ಷುದ್ರಗ್ರಹಗಳ ಮಾಲೀಕತ್ವವನ್ನು 2015ರಿಂದ ಕಾನೂನುಬದ್ಧಗೊಳಿಸಲಾಗಿರುವುದರಿಂದ ಗಣಿ ಉದ್ಯಮಿಗಳು ಕ್ಷುದ್ರಗ್ರಹದ ಮೇಲೆ ಭಾರಿ ಆಸೆ ಹೊಂದಿದ್ದಾರೆ. ಆದರೆ ಅಲ್ಲಿ ವಾಣಿಜ್ಯ ಗಣಿಗಾರಿಕೆ ಮಾಡಲು ಇನ್ನೂ 50 ವರ್ಷಗಳೇ ಬೇಕಾಗುತ್ತವೆ ಎಂದು ವರದಿಗಳು ತಿಳಿಸಿವೆ.