ಇನ್ನು ಲೇಟ್ ಆಗತ್ತೆ ಮನೆಯಲ್ಲಿ ಅಡಿಗೆ: ಆಧುನಿಕ ಮಹಿಳೆ ಮಾಡ್ತಿದ್ದಾಳೆ ಬಾಹ್ಯಾಕಾಶ ನಡಿಗೆ!
ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿ| ಇತಿಹಾಸ ಬರೆದ ನಾಸಾದ ಮಹಿಳಾ ಗಗನಯಾತ್ರಿಗಳು| ಮಹಿಳಾ ಗಗನಯಾತ್ರಿಗಳಿಂದ ಬಾಹ್ಯಾಕಾಶ ನಡಿಗೆ| ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸ್ಪೇಸ್ ವಾಕ್ ಮಾಡಿದ ಮಹಿಳಾ ಗಗನಯಾತ್ರಿಗಳು| ISSನ ಬ್ಯಾಟರಿ ರಿಪೇರಿ ಕಾರ್ಯ ಪೂರ್ಣಗೊಳಿಸಿದ ಮಹಿಳಾ ಗಗನಯಾತ್ರಿಗಳು| ಕ್ರಿಸ್ಟಿನಾ ಕೊಚ್ ಮತ್ತು ಜೆಸ್ಸಿಕಾ ಮೀರ್ ಅವರಿಂದ ಬಾಹ್ಯಾಕಾಶ ನಡಿಗೆ|
ನ್ಯೂಯಾರ್ಕ್(ಅ.20): ಇದು ಖಗೋಳ ವಿಜ್ಞಾನದ ಇತಿಹಾಸದಲ್ಲಿ ನಿಜಕ್ಕೂ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ವಿದ್ಯಮಾನ. ಅಡುಗೆ ಮನೆಯಿಂದ ಹೊರಬಂದಿರುವ ಆಧುನಿಕ ಮಹಿಳೆ ಎಲ್ಲಿದ್ದಾಳೆ ಎಂಬ ಪ್ರಶ್ನೆಗೆ ಬ್ರಹ್ಮಾಂಡದ ಅಂಚಿನಲ್ಲಿ ಮಿನುಗುತ್ತಿದ್ದಾಳೆ ಎಂಬ ಉತ್ತರವನ್ನು ಖಗೋಳ ವಿಜ್ಞಾನ ಮಾತ್ರ ನೀಡಬಲ್ಲದು.
ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ISS)ದಲ್ಲಿ ಇಬ್ಬರು ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶ ನಡಿಗೆ(Space Walk)ಮಾಡುವ ಮೂಲಕ ಇತಿಹಾಸ ರಚಿಸಿದ್ದಾರೆ.
ನಿಷ್ಕ್ರೀಯಗೊಂಡಿದ್ದ ಬ್ಯಾಟರಿ ಚಾರ್ಜರ್ ಬದಲಾಯಿಸುವ ಕಾರ್ಯವನ್ನು, ನಾಸಾದ ಮಹಿಳಾ ಗಗನಯಾತ್ರಿಗಳಾದ ಕ್ರಿಸ್ಟಿನಾ ಕೊಚ್ ಮತ್ತು ಜೆಸ್ಸಿಕಾ ಮೀರ್ ಬಾಹ್ಯಾಕಾಶ ನಡಿಗೆ ಮೂಲಕ ಯಶಸ್ವಿಯಾಗಿ ಪೂರೈಸಿದ್ದಾರೆ.
ಇತಿಹಾಸದಲ್ಲಿ ಮಹಿಳಾ ಗಗನಯಾತ್ರಿಗಳಷ್ಟೇ ಬಾಹ್ಯಾಕಾಶ ನಡಿಗೆ ಕೈಗೊಂಡಿರುವುದು ಇದೇ ಮೊದಲು. 2024ರಲ್ಲಿ ಚಂದ್ರನಲ್ಲಿಗೆ ಮಹಿಳಾ ಗಗನಯಾತ್ರಿಗಳನ್ನು ಕಳುಹಿಸುವ ನಾಸಾ ಯೋಜನೆಗೆ ಮತ್ತಷ್ಟು ಬಲ ಬಂದಂತಾಗಿದೆ.
ಮಹಿಳಾ ಗಗನಯಾತ್ರಿಗಳ ಸ್ಪೇಸ್ ವಾಕ್ ಸಾಹಸಕ್ಕೆ ಈ ಹಿಂದೆ ಮಾರ್ಚ್ 26ರ ದಿನಾಂಕ ನಿಗದಿಪಡಿಸಲಾಗಿತ್ತಾದರೂ, ಮಹಿಳಾ ಗಗನಯಾತ್ರಿಕರಿಗೆ ಸರಿ ಹೊಂದುವ ಬಾಹ್ಯಾಕಾಶ ಉಡುಗೆ(Space Suit)ಇಲ್ಲದ ಕಾರಣ ಕೊನೆ ಕ್ಷಣದಲ್ಲಿ ಯೋಜನೆಯನ್ನು ಮುಂದೂಡಲಾಗಿತ್ತು.