ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸಂಶೋಧನೆ| ಭೂಮಿಯನ್ನು ಹೋಲುವ ವಾಸಯೋಗ್ಯ ಗ್ರಹ ಪತ್ತೆ| ಸೌರಮಂಡಲದ ಹೊರಗೆ ನೀರಿರುವ ಗ್ರಹ ಪತ್ತೆ ಹಚ್ಚಿದ ವಿಜ್ಞಾನಿಗಳು| ಗಾತ್ರದಲ್ಲಿ ಭೂಮಿಗಿಂತ ಎರಡು ಪಟ್ಟು ದೊಡ್ಡದಿರುವ ಕೆ2-18 ಗ್ರಹ| ಮಾತೃ ನಕ್ಷತ್ರದಿಂದ ನಿರ್ದಿಷ್ಟ ಅಂತರದಲ್ಲಿ ಸುತ್ತುತ್ತಿರುವ ಕೆ2-18ಬಿ ಗ್ರಹ| ನೇಚರ್ ಅಸ್ಟ್ರೊನೊಮಿಯಲ್ಲಿ ಬ್ರಿಟಿಷ್ ಖಗೋಳ ವಿಜ್ಞಾನಿಗಳ ವರದಿ ಪ್ರಕಟ|

ಪ್ಯಾರಿಸ್(ಸೆ.12): ಖಗೋಳ ವಿಜ್ಞಾನ ಕ್ಷೇತ್ರ ಇಂದು ಅಕ್ಷರಶಃ ಕುಣಿದಾಡುತ್ತಿದೆ. ಶತ ಶತಮಾನಗಳಿಂದ ಮಾನವ ಯಾವುದಕ್ಕಾಗಿ ಹುಡುಕಾಟ ನಡೆಸಿದ್ದನೋ, ಏನನ್ನು ಕಂಡು ಹಿಡಿಯಲು ಹಗಲಿರುಳು ಶ್ರಮಿಸಿದನೋ ಅದನ್ನು ಕಂಡು ಹಿಡಿಯುವಲ್ಲಿ ಕೊನೆಗೂ ಆತ ಯಶಸ್ವಿಯಾಗಿದ್ದಾನೆ.

Add Asianetnews Kannada as a Preferred SourcegooglePreferred

ಹೌದು, ಭೂಮಿಯನ್ನು ಹೋಲುವ, ನೀರು ಲಭ್ಯ ಇರುವ, ವಾಸಯೋಗ್ಯ ಮತ್ತೊಂದು ಗ್ರಹದ ಹುಡುಕಾಟದಲ್ಲಿ ನಿರತನಾಗಿದ್ದ ಮಾನವ, ಕೊನೆಗೂ ಭೂಮಿಯ ತದ್ರೂಪಿ ಗ್ರಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ.

ಸೌರಮಂಡಲದ ಹೊರಗಿನ ನಕ್ಷತ್ರವೊಂದನ್ನು ಸುತ್ತುವ ಕೆ2-18ಬಿ ಎಂಬ ಗ್ರಹದಲ್ಲಿ ಜೀವಿಗಳ ವಾಸಯೋಗ್ಯ ವಾತಾವರಣದ ಜೊತೆಗೆ ನೀರು ಇರುವ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಸೌರಮಂಡಲದ ಹೊರಗಿನ ಗ್ರಹವೊಂದರಲ್ಲಿ ಇದೇ ಮೊದಲ ಬಾರಿಗೆ ನೀರು ಇರುವುದು ಪತ್ತೆಯಾಗಿದ್ದು, ಭೂಮಿಯ ಮೇಲಿನ ಉಷ್ಣಾಂಶದಷ್ಟೇ ಉಷ್ಣಾಂಶ ಹೊಂದಿರುವ ಕೆ 2-18ಬಿ ಗ್ರಹ ಜೀವಿಗಳಿಗೆ ಬದುಕಲು ಸಹಾಯವಾಗುವ ರೀತಿಯಲ್ಲಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Scroll to load tweet…

ಕೆ2-18ಬಿ ಗ್ರಹ ಭೂಮಿಯ ಎಂಟು ಪಟ್ಟು ದ್ರವ್ಯರಾಶಿಯನ್ನು ಹೊಂದಿದ್ದು, ಗಾತ್ರದಲ್ಲಿ ಭೂಮಿಗಿಂತ ಎರಡು ಪಟ್ಟು ದೊಡ್ಡದಿದೆ ಎಂದು ಹೇಳಲಾಗಿದೆ. ನಕ್ಷತ್ರದಿಂದ ನಿರ್ದಿಷ್ಟ ಅಂತರದಲ್ಲಿ ಈ ಗ್ರಹ ಸುತ್ತುತ್ತಿರುವುದರಿಂದ ಇಲ್ಲಿ ನೀರು ದ್ರವರೂಪದಲ್ಲಿದೆ ಎಂದು ವಿಜ್ಞಾನಿಗಳು ಹೇಳಿರುವುದಾಗಿ ನೇಚರ್ ಅಸ್ಟ್ರೊನೊಮಿ ವರದಿ ಮಾಡಿದೆ.

ಸೌರಮಂಡಲದ ಹೊರಗಿರುವ ವಾಸಯೋಗ್ಯ ಗ್ರಹಗಳ ಪೈಕಿ ಈ ಗ್ರಹ ಅತ್ಯಂತ ಉತ್ತಮ ಗ್ರಹ ಎಂದು ವಿಜ್ಞಾನಿಗಳು ಕೆ2-18ಬಿ ಗ್ರಹವನ್ನು ಬಣ್ಣಿಸಿದ್ದಾರೆ. ಅಲ್ಲದೇ ಇದೀಗ ಈ ಗ್ರಹದಲ್ಲಿ ಜೀವಿಗಳೇನಾದರೂ ವಾಸಿಸುತ್ತಿವೆಯೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನ ನಡೆಸಲಾಗುವುದು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

2015ರಲ್ಲಿ ಕೆ2-18ಬಿ ಪತ್ತೆಯಾಗಿದ್ದು, ಸೂಪರ್ ಅರ್ಥ್ಸ್ ಪ್ಲಾನೆಟ್ ಎಂದು ಕರೆಯಲ್ಪಡುವ ನೂರಾರು ಗ್ರಹಗಳಲ್ಲಿ ಇದು ಕೂಡ ಒಂದು.