ಆಗ ಫೇಸ್ ಬುಕ್ ಈಗ ವಾಟ್ಸಾಪ್; ನಿಮ್ಮ ವಾಟ್ಸಾಪ್ ಮಾಹಿತಿ ಹೇಗೆ ಕದಿಯಬಹುದು?
ಇಸ್ರೇಲಿ ಮೂಲದ ಪೆಗಾಸಸ್ ಸ್ಪೈವೇರ್ ಬಳಸಿ ಭಾರತವೂ ಸೇರಿದಂತೆ ವಿಶ್ವದ ಹಲವು ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ವಾಟ್ಸ್‌ಆ್ಯಪ್‌ಗೆ ಕನ್ನ ಹಾಕಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮೂಲಕ ನಮ್ಮ ಸೈಬರ್ ವ್ಯವಸ್ಥೆಯ ಸುರಕ್ಷೆ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ಪೆಗಾಸಸ್ ಎಂದರೆ ಏನು, ಇದು ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಹೇಗೆ ಕದಿಯುತ್ತದೆ, ಇದನ್ನು ಅಭಿವೃದ್ಧಿಪಡಿಸಿದ್ದು ಏಕೆ, ಕೇಂದ್ರ ಸರ್ಕಾರದ ಮೇಲೆ ಈ ಆರೋಪ ಬಂದಿದ್ದೇಕೆ ಇತ್ಯಾದಿ ಸಂಪೂರ್ಣ ವಿವರ ಇಲ್ಲಿದೆ.
ಇಸ್ರೇಲಿ ಮೂಲದ ಪೆಗಾಸಸ್ ಸ್ಪೈವೇರ್ ಬಳಸಿ ಭಾರತವೂ ಸೇರಿದಂತೆ ವಿಶ್ವದ ಹಲವು ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ವಾಟ್ಸ್‌ಆ್ಯಪ್‌ಗೆ ಕನ್ನ ಹಾಕಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮೂಲಕ ನಮ್ಮ ಸೈಬರ್ ವ್ಯವಸ್ಥೆಯ ಸುರಕ್ಷೆ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ.
ಈ ಹಿನ್ನೆಲೆಯಲ್ಲಿ ಪೆಗಾಸಸ್ ಎಂದರೆ ಏನು, ಇದು ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಹೇಗೆ ಕದಿಯುತ್ತದೆ, ಇದನ್ನು ಅಭಿವೃದ್ಧಿಪಡಿಸಿದ್ದು ಏಕೆ, ಕೇಂದ್ರ ಸರ್ಕಾರದ ಮೇಲೆ ಈ ಆರೋಪ ಬಂದಿದ್ದೇಕೆ ಇತ್ಯಾದಿ ಸಂಪೂರ್ಣ ವಿವರ ಇಲ್ಲಿದೆ.
ಆಗ ಭಾರತ ಸರ್ಕಾರ ಹೇಳಿದಾಗ 'ಖಾಸಗಿತನಕ್ಕೆ ಧಕ್ಕೆ' ನೆಪ; ವಾಟ್ಸಾಪ್ ಈಗ ಏನಪ್ಪಾ?
ಏನಿದು ಪೆಗಾಸಸ್?
ಪೆಗಾಸಸ್ ಎನ್ನುವುದು ಒಂದು ಗೂಢಚರ ತಂತ್ರಾಂಶ. ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್ ಬಳಕೆದಾರರ ಮಾಹಿತಿ ದೋಚಲು ಇದು ಸಹಕರಿಸುತ್ತಿದೆ. ಈ ಸ್ಪೈವೇರನ್ನು ಬಳಕೆ ಮಾಡಿಕೊಂಡು ವಿಶ್ವದ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸುತ್ತಿವೆ ಎನ್ನಲಾಗಿದೆ. ಹಾಗೆ ನೋಡಿದರೆ ಮಾಹಿತಿ-ದತ್ತಾಂಶಗಳನ್ನು ಕದಿಯುವ ಅನೇಕ ಸ್ಪೈವೇರ್‌ಗಳಿವೆ.
ಇವುಗಳು ನಿರ್ದಿಷ್ಟ ಕಂಪನಿಯ ಆ್ಯಪ್‌ಗಳಲ್ಲದೆ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿದಾಗ ಫೋನ್‌ಗೆ ತನ್ನಿಂತಾನೇ ಇನ್‌ಸ್ಟಾಲ್ ಆಗಬಹುದು. ಆದರೆ ಪೆಗಾಸಸ್ ಹಾಗಲ್ಲ. ಯಾವುದೇ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡದಿದ್ದರೂ ವಾಟ್ಸ್‌ಆ್ಯಪ್ ಮೂಲಕ ಅದು ಮೊಬೈಲ್‌ನೊಳಗೆ ಸೇರಿಕೊಳ್ಳುತ್ತದೆ.
ಹೇಗೆ ಕೆಲಸ ಮಾಡುತ್ತದೆ?
ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಆಗಿರುವ ವಾಟ್ಸ್ ಆ್ಯಪ್ ಸಂಖ್ಯೆಗೆ ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ಪೆಗಾಸಸ್ ಗೂಢಚರ್ಯೆ ಕೆಲಸ ಆರಂಭಿಸುತ್ತದೆ. ಫೋನ್ ಅನ್‌ಲಾಕ್ ಆದ ತಕ್ಷಣ ತನ್ನಿಂತಾನೆ ಇನ್‌ಸ್ಟಾಲ್ ಆಗುವ ಈ ವೈರಸ್ ಮೊಬೈಲ್‌ನ ಸೆಕ್ಯುರಿಟಿ ಆ್ಯಪ್‌ಗಳನ್ನು ತನಗೆ ಬೇಕಾದಂತೆ ಬದಲಿಸಿಕೊಂಡು ಎಲ್ಲೋ ದೂರದಲ್ಲಿರುವ ತನ್ನ ಒಡೆಯನ ಸರ್ವರ್‌ಗೆ ನಿರಂತರವಾಗಿ ಮಾಹಿತಿ ರವಾನಿಸಲು ಆರಂಭಿಸುತ್ತದೆ. ಫೋನಿನಲ್ಲಿ ಇರುವ ಪಾಸ್‌ವರ್ಡ್, ಕಾಂಟಾಕ್ಟ್, ಕ್ಯಾಲೆಂಡರ್ ಇವೆಂಟ್, ಟೆಕ್ಸ್ಟ್‌ಮೆಸೇಜ್, ಖಾಸಗಿ ದತ್ತಾಂಶ ಇತ್ಯಾದಿ ಎಲ್ಲಾ ಖಾಸಗಿ ಮಾಹಿತಿಯು ಆ ಸರ್ವರ್‌ನಲ್ಲಿ ಸತತವಾಗಿ ದಾಖಲಾಗುತ್ತಿರುತ್ತವೆ.
ಶೀಘ್ರವೇ ಭಾರತಕ್ಕೆ ವೊಡಾಫೋನ್ ಗುಡ್ ಬೈ? ವರದಿ ಬಗ್ಗೆ ಕಂಪನಿ ಹೇಳಿದ್ದಿಷ್ಟು...
ಮಾತ್ರವಲ್ಲದೆ, ಮೊಬೈಲಿನ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸಿ ಇನ್ನಿತರ ಮಾಹಿತಿಯನ್ನು ಕೂಡ ಸಂಗ್ರಹಿಸುತ್ತದೆ. ಕೆಲವೊಮ್ಮೆ ಟೆಕ್ಸ್ಟ್‌ಸಂದೇಶದ ಮೂಲಕವೂ ಈ ಸ್ಪೈವೇರನ್ನು ಮೊಬೈಲ…ಗೆ ಕಳುಹಿಸಲಾಗುತ್ತದೆ. ಸಂದೇಶವನ್ನು ಓಪನ್ ಮಾಡಿದಾಗ ಮೊಬೈಲ್ ಬಳಕೆದಾರರಿಗೆ ತಿಳಿಯದಂತೆ ಇದು ಮೊಬೈಲಿನಲ್ಲಿ ಇನ್‌ಸ್ಟಾಲ್ ಆಗುತ್ತದೆ. ನೀವು ಎಲ್ಲಿದ್ದೀರಿ ಎಂಬ ಮಾಹಿತಿಯೂ ‘ಗೂಗಲ್ ಲೊಕೇಶನ್’ ಮೂಲಕ ಹಂಚಿಕೆಯಾಗುತ್ತದೆ. ಗೌಪ್ಯ ಸ್ಥಳದಲ್ಲಿ ನೀವು ಇದ್ದರೆ ನಿಮ್ಮ ಗಮನಕ್ಕೆ ಬಾರದೇ ಮೊಬೈಲ್ ಕ್ಯಾಮರಾಗಳು, ಮೈಕ್ರೋಫೋನ್‌ಗಳು ತನ್ನಿಂದ ತಾನಾಗಿಯೇ ಚಾಲೂ ಆಗುತ್ತವೆ. ಈ ಮೂಲಕ ಸ್ಥಳವನ್ನು ಜಾಹೀರುಮಾಡುತ್ತವೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಅ.29ರಂದು ಅಮೆರಿಕದ ಕ್ಯಾಲಿಫೋರ್ನಿಯಾ ಫೆಡರಲ್ ನ್ಯಾಯಾಲಯದಲ್ಲಿ ಫೇಸ್‌ಬುಕ್ ಮಾಲಿಕತ್ವದಲ್ಲಿರುವ ಪರ್ಸನಲ್ ಮೆಸೇಜಿಂಗ್ ವಾಟ್ಸ್‌ಆ್ಯಪ್ ಪ್ರತಿನಿಧಿಗಳು ಇಸ್ರೇಲಿ ಮೂಲದ ಎನ್‌ಎಸ್‌ಒ ಕಂಪನಿಯು ಪೆಗಾಸಸ್ ವೈರಸ್ ಅಭಿವೃದ್ಧಿಪಡಿಸಿ ಅದನ್ನು ಮಾನವ ಹಕ್ಕುಗಳ ಹೋರಾಟಗಾರರು, ಪತ್ರಕರ್ತರು, ವಕೀಲರ ಮೇಲೆ ಗೂಢಚರ್ಯೆ ನಡೆಸಲು ಹಲವರಿಗೆ ಅನುವು ಮಾಡಿಕೊಟ್ಟಿದೆ ಎಂದು ಆರೋಪಿಸಿ ತಂತ್ರಜ್ಞಾನ ಸೇವೆಯನ್ನು ಒದಗಿಸುವ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಮೇಲೆ ದಾವೆ ಹೂಡಿದ್ದರು. ಅನಂತರ ಈ ಪ್ರಕರಣ ಬೆಳಕಿಗೆ ಬಂತು.
ಭಾರತದಲ್ಲೂ ಗೂಢಚರ್ಯೆ
ಪೆಗಾಸಸ್ ವೈರಸ್ ಮೂಲಕ ವಿಶ್ವದ ವಿವಿಧೆಡೆ 1400 ಮಂದಿಯ ಮೇಲೆ ಗೂಢಚರ್ಯೆ ಪ್ರಯತ್ನ ನಡೆದಿದೆ ಎಂದು ವಾಟ್ಸ್‌ಆ್ಯಪ್ ಹೇಳಿತ್ತು. ಅದರಲ್ಲಿ ಭಾರತೀಯರೂ ಇದ್ದು, ಈವರೆಗೆ ಭಾರತದಲ್ಲಿ ಕನಿಷ್ಠ 24 ಪತ್ರಕರ್ತರು, ಶಿಕ್ಷಣ ತಜ್ಞರು, ವಕೀಲರು ಮತ್ತು ದಲಿತ ಹೋರಾಟಗಾರರಿಗೆ ‘ನಿಮ್ಮ ಮೇಲೆ ಮೇ ತಿಂಗಳಲ್ಲಿ ಗೂಢಚರ್ಯೆ ನಡೆದಿತ್ತು’ ಎಂದು ವಾಟ್ಸ್‌ಆ್ಯಪ್ ಮಾಹಿತಿ ರವಾನಿಸಿದೆ ಎಂದು ವರದಿಯಾಗಿದೆ. ಈ ಸುದ್ದಿ ಬಹಿರಂಗವಾದ ಬಳಿಕ ಕೇಂದ್ರ ಸರ್ಕಾರ ವಾಟ್ಸ್‌ಆ್ಯಪ್ ಮೂಲಕ ಗೂಢಚರ್ಯೆ ನಡೆಸಲು ಇಸ್ರೇಲಿ ಮೂಲದ ಎನ್‌ಎಸ್‌ಒ ಸಂಸ್ಥೆಯ ನೆರವು ಪಡೆದಿದೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ.
ಈ ಆರೋಪವನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ, ವಾಟ್ಸ್‌ಆ್ಯಪ್ ಕಂಪನಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದೆ. ಮತ್ತು ವಾಟ್ಸ್‌ಆ್ಯಪನ್ನು ದುರ್ಬಳಕೆ ಮಾಡಿ ಮಾಹಿತಿ ಕದಿಯುತ್ತಿರುವ ಸೈಬರ್ ದಾಳಿಕೋರರನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಉಗ್ರರ ಚಲನವಲನ ಗಮನಕ್ಕೆ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್
ಪೆಗಾಸಸ್ ಅಭಿವೃದ್ಧಿಪಡಿಸಿ ಅದನ್ನು ಪರವಾನಗಿ (ಲೈಸನ್ಸ್) ಮೂಲಕ ವಿವಿಧ ಸರ್ಕಾರಗಳಿಗೆ ಮಾರಾಟ ಮಾಡುವುದು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಒಡೆತನದಲ್ಲಿರುವ ಸೈಬರ್ ಟೆಕ್ನಾಲಜೀಸ್ ಕೆಲಸ. ಈ ಕಂಪನಿ ಮೇಲೆ ವಾಟ್ಸ್‌ಆ್ಯಪ್ ಹೂಡಿರುವ ದಾವೆಯಲ್ಲಿ ‘ಇದು ವಾಟ್ಸ್ ಆ್ಯಪ್‌ನ ನಿಯಮಗಳು ಮತ್ತು ಕ್ಯಾಲಿಫೋರ್ನಿಯಾದಲ್ಲಿ ಜಾರಿಯಲ್ಲಿರುವ ಕಾನೂನುಗಳ ಉಲ್ಲಂಘನೆ ’ ಎಂದು ಹೇಳಲಾಗಿದೆ. ಆದರೆ ಈ ಆರೋಪವನ್ನು ಎನ್‌ಎಸ್‌ಒ ತಳ್ಳಿ ಹಾಕಿ ಸ್ಪಷ್ಟನೆ ನೀಡಿದೆ.
ಸ್ಮಾರ್ಟ್‌ಫೋನ್‌ಗಳ ಗೂಢಚರ್ಯೆ ಮಾಡುವ ಪೆಗಾಸಸ್ ತಂತ್ರಾಂಶವನ್ನು ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತೇವೆ. ಆದರೆ ಅದನ್ನು ಪತ್ರಕರ್ತರು ಅಥವಾ ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಬಳಸಲು ಎಂದೂ ಪರವಾನಗಿ ನೀಡಿಲ್ಲ. ಉಗ್ರರ ಚಲನವಲನಗಳನ್ನು ಗಮನಿಸಲು ಸರ್ಕಾರಗಳಿಗೆ ನೀಡಲಾಗುವ ಸಾಫ್ಟ್‌ವೇರ್ ಇದಾಗಿದೆ. ಇದನ್ನು ಆಯಾ ಸರ್ಕಾರಗಳು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಎನ್‌ಎಸ್‌ಒ ಗ್ರೂಪ್ ಹೇಳಿದೆ. ಇದರ ಬಳಿಕ ಕೇಂದ್ರ ಸರ್ಕಾರದ ಮೇಲೆ ಆರೋಪಗಳು ಕೇಳಿಬಂದಿವೆ.
ಮೆಕ್ಸಿಕೋದಲ್ಲಿ ಹೆಚ್ಚು ಬಳಕೆ
ಜಗತ್ತಿನ ಹಲವು ದೇಶಗಳು ಈ ಪೆಗಾಸಸ್ ಸ್ಪೈವೇರ್ ಬಳಕೆ ಮಾಡುತ್ತಿದ್ದು, ಈ ಪೈಕಿ ವಿಶ್ವದಲ್ಲೇ ಮೆಕ್ಸಿಕೊ ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ವ್ಯವಸ್ಥೆ ಈ ಇಸ್ರೇಲಿ ಸೈಬರ್ ಗೂಢಚರ್ಯೆ ಸಾಫ್ಟ್‌ವೇರನ್ನು ಬಳಸುತ್ತಿದೆ. ಅಲ್ಲಿನ ಸರ್ಕಾರ 2016-17ರಿಂದ ಅಂದಾಜು 220 ಕೋಟಿ ರು. ವೆಚ್ಚ ಮಾಡಿ 500ಕ್ಕೂ ಹೆಚ್ಚು ಮಂದಿಯ ಫೋನ್‌ಗಳ ಮೇಲೆ ಗೂಢಚರ್ಯೆ ನಡೆಸಿತ್ತು ಎನ್ನಲಾಗಿದೆ.
ದುಬಾರಿ ಬೇಹುಗಾರ ಪೆಗಾಸಸ್!
ಇಸ್ರೇಲ್ ಮೂಲದ ಈ ಪೆಗಾಸಸ್ ಸಾಫ್ಟ್‌ವೇರನ್ನು ಖರೀದಿಸಿ ಬಳಸಬೇಕಾದರೆ ವಾರ್ಷಿಕವಾಗಿ 70-80 ಲಕ್ಷ ಡಾಲರ್ (ಸುಮಾರು 56 ಕೋಟಿ) ನೀಡಬೇಕಾಗುತ್ತದೆ. ಈ ಸ್ಪೈವೇರ್ ಬಳಸಿ ವಾರ್ಷಿಕವಾಗಿ 500 ಫೋನ್‌ಗಳನ್ನು ಹ್ಯಾಕ್ ಮಾಡಬಹುದಾಗಿದೆ.
ಮೊದಲು ಪತ್ತೆಯಾಗಿದ್ದು 2016ರಲ್ಲಿ
ಪೆಗಾಸಸ್ ಹೆಸರು ಮೊಟ್ಟಮೊದಲಿಗೆ ಕೇಳಿ ಬಂದಿದ್ದು 2016ರಲ್ಲಿ. ಯುಎಇ ಮಾನವ ಹಕ್ಕುಗಳ ಹೋರಾಟಗಾರ ಅಹ್ಮದ್ ಮನ್ಸೂರ್ ಇದರ ಅಸ್ತಿತ್ವವನ್ನು ಬಯಲಿಗೆಳೆದಿದ್ದರು. ಪೆಗಾಸಸ್ ಸ್ಪೈವೇರ್ ತಂತ್ರಾಶದ ಮೂಲಕ ಮನ್ಸೂರ್ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ಸಂದೇಹಾಸ್ಪದ ಸಂದೇಶಗಳು, ಲಿಂಕ್‌ಗಳು ಬಂದಾಗ ಅದನ್ನು ಇವರು ಸೆಕ್ಯುರಿಟಿ ಎಕ್ಸ್‌ಪರ್ಟ್‌ಗೆ ಕಳುಹಿಸುತ್ತಿದ್ದರು. ಲುಕ್‌ಔಟ್ ಎನ್ನುವ ಸೈಬರ್ ಸೆಕ್ಯುರಿಟಿ ಸಂಸ್ಥೆಯು ಇದೊಂದು ಗೂಢಚರ್ಯೆ ಸ್ಪೈವೇರ್ ಎನ್ನುವುದನ್ನು ದೃಢಪಡಿಸಿತ್ತು.
ಖಶೋಗ್ಗಿ ಕೊಲೆ ಹಿಂದೆ ಪೆಗಾಸಸ್ ಇರುವ ಶಂಕೆ?
ಕಳೆದ ವರ್ಷ ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿ ಖಶೋಗ್ಗಿ ಎಂಬ ಪತ್ರಕರ್ತನ ಹತ್ಯೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಸೌದಿ ಅರೇಬಿಯಾ ಸರ್ಕಾರ ತೆಗೆದುಕೊಳ್ಳುತ್ತಿದ್ದ ಕೆಲ ನಿರ್ಧಾರಗಳನ್ನು ಟೀಕಿಸಿದ್ದ ಪತ್ರಕರ್ತ ಜಮಾಲ್ ಖಶೋಗ್ಗಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದರು. ಸೌದಿ ಅರೇಬಿಯಾ ರಾಜತಾಂತ್ರಿಕ ಕಚೇರಿಯ ಒಳಹೋದವರು ಜೀವಂತವಾಗಿ ಹೊರಬರಲೇ ಇಲ್ಲ. ಅಲ್ಲಿ ಖಶೋಗ್ಗಿ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ಗಳಲ್ಲಿ ತುಂಬಿಸಿ ಹೊರ ಸಾಗಿಸಿದ್ದರು. ವಿಷಯ ಏನೆಂದರೆ ಖಶೋಗ್ಗಿ ಸೌದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಾಗ ಆವರ ಚಲನವಲನಗಳ ಮೇಲೆ ನಿಗಾ ಇಡಲು ಇದೇ ಪೆಗಾಸಸ್ ಸ್ಪೈವೇರ್ ಮೂಲಕ ಇಸ್ರೇಲ್‌ನ ಎನ್‌ಎಸ್‌ಒ ಕಂಪನಿಯು ಸೌದಿ ಸರ್ಕಾರಕ್ಕೆ ನೆರವಾಗಿತ್ತು ಎನ್ನುವ ಆರೋಪ ಎನ್‌ಎಸ್‌ಒ ಕಂಪನಿ ಮೇಲಿದೆ.
ನಿಮ್ಮ ಮೊಬೈಲ್ ದುರ್ಬಳಕೆ ಆಗದಿರಲು ಹೀಗೆ ಮಾಡಿ
- ವಾಟ್ಸ್‌ಆ್ಯಪ್ ಅಪ್‌ಡೇಟ್ ಮಾಡಿ
- ಸಂದೇಹಾತ್ಮಕ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ
- ಆಗಾಗ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುತ್ತಿರಿ
- ಮೊಬೈಲ್ ಬಳಸದೇ ಇರುವಾಗ ಡೇಟಾ, ವೈಫೈ, ಬ್ಲೂಟೂತ್‌ಗಳನ್ನು ಆಫ್ ಮಾಡಿಡಿ
- ಯಾವುದೇ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಮುನ್ನ ಎಲ್ಲಾ ನಿಬಂಧನೆಗಳನ್ನು ಒಮ್ಮೆ ಓದಿ