ನಿರ್ದೇಶಕರಾದ ಭವಿತ್ ಶೇತ್ ಮತ್ತು ಹರ್ಷ್ ಜೈನ್ ವಿರುದ್ಧದ  ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಬೆಂಗಳೂರು (ಮಾ. 21): 'ಡ್ರೀಮ್ 11' ಗೇಮಿಂಗ್ ಆ್ಯಪ್ (Dream 11) ಪ್ರಮೋಟ್‌ ಮಾಡುವ ಸ್ಪೋರ್ಟಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಭವಿತ್ ಶೇತ್ ಮತ್ತು ಹರ್ಷ್ ಜೈನ್ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಜೂಜಾಟವನ್ನು ನಿಷೇಧಿಸುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ, 2021 ರ ಅಡಿಯಲ್ಲಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ (FIR) ಅನ್ನು ರದ್ದುಗೊಳಿಸುವಂತೆ ಕೋರಿ ಇಬ್ಬರೂ ನ್ಯಾಯಾಲಯದ ಮೊರೆ ಹೋಗಿದ್ದರು.

ಅಕ್ಟೋಬರ್ 7 ರಂದು ಬೆಂಗಳೂರಿನ ನಾಗರಭಾವಿ ನಿವಾಸಿ ಮಂಜುನಾಥ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ತಿದ್ದುಪಡಿ ಕಾಯ್ದೆಯ ಸೆಕ್ಷನ್ 79 ಮತ್ತು 80 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. 

ಇದನ್ನೂ ಓದಿ:ಸ್ಮಾರ್ಟ್‌ಫೋನ್‌ನಲ್ಲಿ 3D ಎಫೆಕ್ಟ್ ಹೆಚ್ಚಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮದ್ರಾಸ್‌ ಐಐಟಿ

ಸ್ಕಿಲ್ ಗೇಮಿಂಗ್ ಇಂಡಸ್ಟ್ರಿ ಬಾಡಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (AIGF), ಸ್ವಯಂ ನಿಯಂತ್ರಣ ಫ್ಯಾಂಟಸಿ ಕ್ರೀಡಾ ಉದ್ಯಮ ಸಂಸ್ಥೆ ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ (FIFS), ರಿಯಲ್-ಮನಿ ಗೇಮಿಂಗ್ ಸಂಸ್ಥೆಗಳು ಮೊಬೈಲ್ ಪ್ರೀಮಿಯರ್ ಲೀಗ್ (MPL), ಗೇಮ್ಸ್24x7, ಎ23 (Ace2Three), ಜಂಗ್ಲೀ ಗೇಮ್ಸ್, ಗೇಮ್ಸ್ಕ್ರಾಫ್ಟ್ ಮತ್ತು ಪೆಸಿಫಿಕ್ ಗೇಮ್ಸ್ ಸೇರಿದಂತೆ ಹಲವು ಸಂಸ್ಥೆಗಳು ಕಾನೂನಿಗೆ ವಿರುದ್ಧವಾಗಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದವು.

ಈ ಅರ್ಜಿಗಳು ಹಣ ವರ್ಗಾವಣೆಯನ್ನು ಒಳಗೊಂಡಿರುವ ಎಲ್ಲಾ ರೀತಿಯ ಆನ್‌ಲೈನ್ ಗೇಮಿಂಗ್ ನಿಷೇಧಿಸಿದ್ದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆಗೆ ಮಾಡಿದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದವು. ಯುವಕರನ್ನು ಬಹುಬೇಗನೆ ಆಕರ್ಷಿಸುವ ಆನ್‌ಲೈನ್‌ ಜೂಜುಗಳಿಂದ ದುಷ್ಪರಿಣಾಮಗಳಾಗುತ್ತಿರುವುದನ್ನು ಮನಗಂಡು ಅವಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿತ್ತು. ಕಳೆದ ಅಕ್ಟೋಬರ್‌ನಲ್ಲಿ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತಂದು ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸಿತ್ತು.

ಕೌಶಲ್ಯದ ಆಟಗಳನ್ನು ನಿರ್ಬಂಧಿಸುವುದು ಕಾನೂನು ಬಾಹಿರ ಎಂಬ ಗೇಮಿಂಗ್‌ ಕಂಪನಿಗಳ ವಾದವನ್ನು ಪುರಸ್ಕರಿಸಿರುವ ಹೈಕೋರ್ಟ್‌, ಆ ತಿದ್ದುಪಡಿಗಳನ್ನು ರದ್ದುಗೊಳಿಸಿತ್ತು. ಇದರೊಂದಿಗೆ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಆನ್‌ಲೈನ್‌ ಗೇಮಿಂಗ್‌ ಹಾಗೂ ಬೆಟ್ಟಿಂಗ್‌ಗೆ ಮತ್ತೆ ಅವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ: Online Complaint: ಆನ್‌ಲೈನಲ್ಲೇ ದೂರು ನೀಡಿ, ಎಫ್‌ಐಆರ್‌ ಪಡೆಯಿರಿ!

‘ಡ್ರೀಮ್‌ 11’ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಫ್ಯಾಂಟಸಿ ಗೇಮಿಂಗ್‌(Fantacy Gaming) ಅವಕಾಶ ಒದಗಿಸುವ ವೇದಿಕೆಯಾಗಿದೆ. 2020ರಲ್ಲಿ ಈ ಸ್ಟಾರ್ಟಪ್‌ನ ಮಾರುಕಟ್ಟೆ ಮೌಲ್ಯ 1 ಶತಕೋಟಿ ಡಾಲರ್‌ ದಾಟುವ ಮೂಲಕ, ಇಂಥ ಸಾಧನೆ ಮಾಡಿದ ಭಾರತದ ಮೊದಲ ಗೇಮಿಂಗ್‌ ಆ್ಯಪ್‌(Gaming App) ಎಂಬ ಹಿರಿಮೆಗೆ ಪಾತ್ರವಾಗಿತ್ತು.

ಏನಿದು ಡ್ರೀಮ್‌-11?:  ಇದೊಂದು ಆನ್‌ಲೈನ್‌ ಗೇಮಿಂಗ್‌ ಆ್ಯಪ್‌. ಇದರಲ್ಲಿ ಕ್ರಿಕೆಟ್‌ ಸೇರಿದಂತೆ ಹಲವು ಕ್ರೀಡೆಗಳ ಫ್ಯಾಂಟಸಿ ಗೇಮಿಂಗ್‌ಗೆ ಅವಕಾಶವಿದೆ. ಜನರು ಇದರಲ್ಲಿ ಹಣ ಬೆಟ್‌ ಕಟ್ಟಬಹುದು. ಕರ್ನಾಟಕದಲ್ಲಿ ಆನ್‌ಲೈನ್‌ ಗೇಮಿಂಗ್‌ ನಿಷೇಧಿಸಿದ ಬೆನ್ನಲ್ಲೇ ಈ ಆ್ಯಪ್‌ ವಿರುದ್ಧ ಕೇಸು ದಾಖಲಿಸಿ, ಇದರಲ್ಲಿ ಬೆಟ್ಟಿಂಗ್‌ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದರು.