ತಂತ್ರಜ್ಞಾನದಿಂದ ಅಗಾಧ ಪ್ರಯೋಜನವಿದೆ. ಭವಿಷ್ಯದಲ್ಲಿ ಅದು ಮಿತಿಯೇ ಇಲ್ಲದ ಅವಕಾಶಗಳನ್ನು, ಆಯ್ಕೆಗಳನ್ನು ತೆರೆದಿಡುತ್ತದೆ. ಇದು ಸಂವಹನದ ಹೊಸ ಆಯಾಮವನ್ನೇ ತೆರೆದಿಟ್ಟಿದೆ. ತಂತ್ರಜ್ಞಾನದಿಂದಾಗಿ ಭವಿಷ್ಯದಲ್ಲಿ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸ್ವರೂಪವೇ ಬದಲಾಗಲಿದೆ.

ಮುಂದಿನ ದಿನಗಳಲ್ಲಿ ದೈಹಿಕ ಅಡೆತಡೆಗಳನ್ನು ಮೀರಿ ಯುವ ಜನತೆಯನ್ನು ಜಾಗತಿಕ ತರಗತಿ ಕೋಣೆಗಳೊಂದಿಗೆ ಸಂಪರ್ಕಿಸಬಹುದು. ಸಮುದಾಯ ಸೇವೆಗಳನ್ನು ಒದಗಿಸುವ ಸ್ವರೂಪವೂ ರೂಪಾಂತರಗೊಳ್ಳುತ್ತದೆ.

ತಂತ್ರಜ್ಞಾನದಿಂದ ಅಪಾಯವೂ ಇದೆ

ರಾಷ್ಟ್ರೀಯ ಮತ್ತು ಜಾಗತಿಕ ಒಳಿತಿಗಾಗಿ ನಾವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ನಿಜ. ಆದರೆ ಕಂಪ್ಯೂಟರ್‌ ಮತ್ತು ಮೊಬೈಲ್‌ ಫೋನ್‌ ಆಧಾರಿತ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಎಷ್ಟುಉಪಯೋಗವಿದೆಯೋ ಅವುಗಳಿಂದ ಅಪಾಯವೂ ಅಷ್ಟೇ ಇದೆ. ನಾವು ತಂತ್ರಜ್ಞಾನದ ಮೂಲಕ ಜಗತ್ತನ್ನು ಪ್ರವೇಶಿಸಬಹುದಾದರೂ, ಅದೇ ತಂತ್ರಜ್ಞಾನವನ್ನು ನಮ್ಮನ್ನು ಪ್ರವೇಶಿಸಲೂ ಬಳಸಬಹುದು. ಮತ್ತು ಜಗತ್ತಿಗೆ ನಮ್ಮ ಪ್ರವೇಶವು ಪಾರದರ್ಶಕವಾಗಿದ್ದರೂ, ನಮ್ಮ ಖಾಸಗಿ ಜೀವನಕ್ಕೆ ಅದರ ಪ್ರವೇಶವು ರಹಸ್ಯವಾಗಿರಬಹುದು. ಇತರರು ನಮ್ಮ ಅಮೂಲ್ಯವಾದ ಖಾಸಗಿ ಕ್ಷಣಗಳ ಮೇಲೆ ಕಣ್ಣಿಟ್ಟಿರಬಹುದು. ಅಂತಹ ಕಣ್ಗಾವಲು ತಂತ್ರಜ್ಞಾನಗಳೂ ಈಗ ಲಭ್ಯವಿದೆ.

ತಂತ್ರಜ್ಞಾನದ ಅತಿಯಾದ ಮೆರವಣಿಗೆ ಮತ್ತು ಅಪ್ಪಿಕೊಳ್ಳುವಿಕೆಯು ಹೆಚ್ಚು ಅತ್ಯಾಧುನಿಕವಾಗುತ್ತಿದ್ದಂತೆ, ನಮ್ಮ ಖಾಸಗಿ ಜೀವನದಲ್ಲಿ ಅದರ ಆಕ್ರಮಣದ ಸ್ವರೂಪವೂ ಹೆಚ್ಚಾಗುತ್ತದೆ. ಮತ್ತು ನಮ್ಮ ಅಸ್ತಿತ್ವದ ಮೂಲಭೂತ ಅಂಶಗಳನ್ನು ಉಲ್ಲಂಘಿಸುವ ಸಾಮರ್ಥ್ಯವನ್ನು ಪಡೆಯುತ್ತಾ ಹೋಗುತ್ತದೆ. ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಡೇಟಾವನ್ನು ಅದು ಬಹಿರಂಗಪಡಿಸುವ ಸಾಧ್ಯತೆ ಇರುತ್ತದೆ.

ವಾಟ್ಸಾಪ್ ಬಳಸಿ ಮೊಬೈಲ್ ಗೆ ಕನ್ನ! 'ನಿಗೂಢ' ಬೇಹುಗಾರಿಕೆಗೆ ಬೆಚ್ಚಿ ಬಿದ್ದ ಜನ

ಸ್ಪೈವೇರ್‌ ದುರ್ಬಳಕೆ

ಈ ವಾಣಿಜ್ಯ ಜಗತ್ತಿನಲ್ಲಿ ಹ್ಯಾಕರ್‌ಗಳು ಸ್ಪರ್ಧೆಗೆ ಬಿದ್ದು ವಿನೂತನ ರೀತಿಯಲ್ಲಿ ಹ್ಯಾಕ್‌ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ದುರುದ್ದೇಶಪೂರಿತ ಆಕ್ರಮಣಗಳನ್ನು ತಡೆಯಲು ತಂತ್ರಜ್ಞಾನ ಆಧಾರಿತ ರಕ್ಷಣಾ ಗೋಡೆಗಳನ್ನು ಅಭಿವೃದ್ಧಿಪಡಿಸುವ ತುರ್ತು ಇದೆ. ಪ್ರವೇಶದ ಬಹುಮುಖಿ ಸ್ವರೂಪಗಳು ಮತ್ತು ರಕ್ಷಣೆಗಳನ್ನು ಸಕ್ರಿಯಗೊಳಿಸುವ ವೈವಿಧ್ಯಮಯ ರೂಪಗಳ ವ್ಯವಹಾರವು ಮುಂದಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದುತ್ತದೆ. ಆದರೆ ನಿಜವಾದ ಆತಂಕ ಇರುವುದು ಸರ್ಕಾರಕ್ಕೆ ತನ್ನ ಪ್ರಜೆಗಳ ಮೇಲೆ ಕಣ್ಣಿಡುವ ಹಕ್ಕಿರುವುದರಲ್ಲಿ.

ಸರ್ಕಾರಗಳಿಗೆ ಇಂಥ ಅವಕಾಶವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹವ್ಯಾಸವಿರುತ್ತದೆ. ಇತ್ತೀಚೆಗೆ ಇಸ್ರೇಲಿ ಮೂಲದ ಎನ್‌ಎಸ್‌ಒ ಸಂಸ್ಥೆ ಅಭಿವೃದ್ಧಿಪಡಿಸಿರುವ ಪೆಗಾಸಸ್‌ ಎಂಬ ಸ್ಪೈವೇರ್‌ ವಾಟ್ಸ್‌ಆ್ಯಪ್‌ ಮೂಲಕ ಜಗತ್ತಿನ ಪ್ರಮುಖ ಪತ್ರಕರ್ತರು, ರಾಜಕಾರಣಿಗಳು, ವಕೀಲರ ಮೊಬೈಲ್‌ಗೆ ಪ್ರವೇಶಿಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಬಹಿರಂವಾಗಿದೆ. ಉಗ್ರರ ಚಲನವಲನ ವೀಕ್ಷಣೆಗೆಂದೇ ಅಭಿವೃದ್ಧಿಪಡಿಸಲಾದ ಪೆಗಾಸಸ್‌ ಸ್ಪೈವೇರನ್ನು ಇಸ್ರೇಲಿ ಮೂಲದ ಈ ಕಂಪನಿ ಕೇವಲ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುತ್ತದೆ. ಈಗಾಗಲೇ ಹಲವು ದೇಶಗಳು ಈ ಸ್ಪೈವೇರನ್ನು ದುರ್ಬಳಕೆ ಮಾಡಿಕೊಂಡಿವೆ.

ಸರ್ಕಾರವೇ ಉತ್ತರಿಸಬೇಕು ಏಕೆಂದರೆ..

ಪೆಗಾಸಸ್‌ ಸ್ಪೈವೇರ್‌ ಬಳಸಿ ಭಾರತದಲ್ಲಿಯೂ ಕೆಲ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸುವ ಪ್ರಯತ್ನ ನಡೆದಿತ್ತು ಎಂದು ಸ್ವತಃ ವಾಟ್ಸ್‌ಆ್ಯಪ್‌ ಬಹಿರಂಗಪಡಿಸಿದೆ. ಇದು ನಿಜಕ್ಕೂ ಆತಂಕಕಾರಿ. ಪೆಗಾಸಸ್‌ನ ದುರುಪಯೋಗದ ಬಗ್ಗೆ ಸರ್ಕಾರಕ್ಕೆ ಸರಿಯಾಗಿ ಮಾಹಿತಿ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ನಾವು ಹೋಗಬೇಕಾಗಿಲ್ಲ.

ಏಕೆಂದರೆ ಪೆಗಾಸಸ್‌ ಸ್ಪೈವೇರನ್ನು ಸರ್ಕಾರ ಮಾತ್ರ ಬಳಕೆ ಮಾಡಲು ಸಾಧ್ಯ. ಆದಾಗ್ಯೂ ನಮ್ಮ ಈಗಿನ ಸರ್ಕಾರ ಈ ಬಗ್ಗೆ ಉತ್ತರಿಸುವಂತೆ ವಾಟ್ಸ್‌ಆ್ಯಪ್‌ಗೆ ಸೂಚಿಸಿದೆ. ಆದರೆ ಈ ಬಾರಿ ಸರ್ಕಾರದಿಂದಲೇ ಇದಕ್ಕೆ ಉತ್ತರ ಪಡೆಯಬೇಕಾದ ಸಮಯ ಇದು.

ಆಗ ಭಾರತ ಸರ್ಕಾರ ಹೇಳಿದಾಗ 'ಖಾಸಗಿತನಕ್ಕೆ ಧಕ್ಕೆ' ನೆಪ; ವಾಟ್ಸಾಪ್ ಈಗ ಏನಪ್ಪಾ?

ಸರ್ಕಾರ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಮೊದಲನೆಯದು, ಪೆಗಾಸಸನ್ನು ಸರ್ಕಾರ ಕೊಂಡುಕೊಂಡಿದ್ದು ಯಾವಾಗ? ಎರಡನೆಯದು ಈ ಸಂದಾನ ನಡೆದಿದ್ದು ಹೇಗೆ?, ಮೂರನೆಯದು ಎನ್‌ಎಸ್‌ಒ ಒಂದು ಖಾಸಗಿ ಸಂಸ್ಥೆ. ಹಾಗಾಗಿ ಕೊಂಡುಕೊಳ್ಳುವಾಗ ಹೆಚ್ಚು ಹಣದ ಬೇಡಿಕೆ ಇದ್ದೇ ಇರುತ್ತದೆ. ಆ ಹಣ ಎಲ್ಲಿಂದ ಬಂತು? ನಾಲ್ಕನೆಯದಾಗಿ, ಪೆಗಾಸಸ್‌ ಬಳಕೆ ಅಧಿಕಾರ ಪಡೆದವರು ಯಾರು ಮತ್ತು ಯಾರ ಸಲಹೆ ಪಡೆದು ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಮೊಬೈಲ್‌ ಮೇಲೆ ಗೂಢಚರ್ಯೆ ನಡೆಸಲಾಗಿದೆ? ಐದನೆಯದು, ಈ ಸ್ಪೈವೇರನ್ನು ವಾಟ್ಸ್‌ಆ್ಯಪ್‌ ವೇದಿಕೆ ಮೂಲಕ ಮಾತ್ರ ಬಳಕೆ ಮಾಡಬಹುದೇ ಅಥವಾ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಹೊಂದಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಬಳಸಲು ಅವಕಾಶವಿದೆಯೇ? ಆ್ಯಂಡ್ರಾಯ್ಡ್‌, ಆ್ಯಪಲ್‌ ಐ ಫೋನ್‌ ಮತ್ತು ಬ್ಲಾಕ್‌ಬೆರಿ ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಈ ಪೆಗಾಸಸ್‌ ಸಕ್ರಿಯವಾಗಿ ಕಾರ‍್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾದರೆ 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿಯೇ ನಾಗರಿಕರ ಖಾಸಗಿ ಹಕ್ಕನ್ನು ಉಲ್ಲಂಘಿಸಲಾಗಿತ್ತೇ?

ತನಿಖೆಯಾಗಬೇಕು

ಸದ್ಯ ಅಮೆರಿಕದದ ಕ್ಯಾಲಿಫೋರ್ನಿಯಾ ಫೆಡರಲ್‌ ನ್ಯಾಯಾಲಯದಲ್ಲಿ ಫೇಸ್‌ಬುಕ್‌ ಮಾಲಿಕತ್ವದಲ್ಲಿರುವ ವಾಟ್ಸ್‌ಆ್ಯಪ್‌ ದಾವೆ ಹೂಡಿದೆ. ಭಾರತದಲ್ಲೂ ಇಂಥ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಅದು ಸಾಧ್ಯವಾಗದಿದ್ದರೆ, ಸರ್ಕಾರ ಪೆಗಾಸಸ್‌ ಸ್ಪೈವೇರನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಸಾರ್ವಜನಿಕ ಹಿತಾಸಕ್ತಿಯಾಧಾರದಲ್ಲಿ ದಾವೆ ದಾಖಲಿಸಲು ಬೇಡಿಕೆ ಇಡಬೇಕು. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸ್ಪಷ್ಟಉಲ್ಲಂಘನೆಯಾಗಿದೆ ಮತ್ತು ಸಂವಿಧಾನದತ್ತವಾಗಿರುವ ಖಾಸಗಿ ಹಕ್ಕು ಉಲ್ಲಂಘನೆ ಎಂದು ತನಿಖೆ ಪ್ರಾರಂಭಿಸಬೇಕು.

ಸರ್ಕಾರಗಳು ಸ್ವಭಾವತಃ ಇಂಥ ಪ್ರಶ್ನೆಗಳಿಗೆ ಸುಲಭವಾಗಿ ಸ್ಪಂದಿಸುವುದಿಲ್ಲ. ಅವರು ಗೌಪ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅಂತಹ ನಡಾವಳಿಗಳ ಮೂಲಕ ಬಹಿರಂಗಗೊಳ್ಳಲು ಅವರು ಇಚ್ಛಿಸುವುದಿಲ್ಲ. ಯಾರೂ ಸುರಕ್ಷಿತವಾಗಿಲ್ಲ ಹಾಗಾಗಿ ನ್ಯಾಯಾಲಯಗಳು ರಕ್ಷಣಾತ್ಮಕವಾಗಬೇಕಾದ ಸಮಯ ಇದು. ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ಸಾಂವಿಧಾನಾತ್ಮಕ ಹಕ್ಕು. ನ್ಯಾಯಾಲಯಗಳು ನಾಗರಿಕರ ಪರವಾಗಿ ನಿಲ್ಲಬೇಕಾದ ಸಮಯ ಇದು.

-  ಕಪಿಲ್‌ ಸಿಬಲ್‌, ಮಾಜಿ ಕೇಂದ್ರ ಸಚಿವ