ನವದೆಹಲಿ (ಜ. 29):  ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ತನ್ನ ಭಾರಿ ಗಾತ್ರದ ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ನಲ್ಲಿ ಸೀಮೆಎಣ್ಣೆಯನ್ನು ಇಂಧನವಾಗಿ ಬಳಸಲು ಸಿದ್ಧತೆ ಆರಂಭಿಸಿದೆ. ಆದರಿದು ಜನಸಾಮಾನ್ಯರು ಬಳಸುವ ಸೀಮೆಎಣ್ಣೆಯಲ್ಲ. ಬದಲಿಗೆ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಸಂಸ್ಕರಿಸಲ್ಪಟ್ಟಕೆರೋಲಾಕ್ಸ್‌ ಎಂಬ ಸೀಮೆಎಣ್ಣೆ.

ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ನ ಸರಕು ಹೊರುವ ಸಾಮರ್ಥ್ಯವನ್ನು ಈಗಿನ 4 ಟನ್‌ನಿಂದ 6 ಟನ್‌ಗೆ ಏರಿಸಲು ಇಸ್ರೋ ನಿರ್ಧರಿಸಿದೆ. ಅದಕ್ಕಾಗಿ ರಾಕೆಟ್‌ನಲ್ಲಿ ಕೆಲ ಸುಧಾರಣೆಗಳನ್ನು ಮಾಡುತ್ತಿದ್ದು, ಎರಡನೇ ಹಂತದ ಪ್ರಯಾಣದಲ್ಲಿ ಸೀಮೆಎಣ್ಣೆಯನ್ನು ಇಂಧನವಾಗಿ ಬಳಸುವುದು ಕೂಡ ಅದರಲ್ಲಿ ಒಂದು ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್‌ ಹೇಳಿದ್ದಾರೆ.

ಮೊದಲಿಗೆ ಜಿಎಸ್‌ಎಲ್‌ವಿ ರಾಕೆಟ್‌ನ ಕ್ರಯೋಜೆನಿಕ್‌ ಹಂತದ ಇಂಧನ ಸಾಮರ್ಥ್ಯವನ್ನು 25 ಟನ್‌ನಿಂದ 30 ಟನ್‌ಗೆ ಹೆಚ್ಚಿಸಲಾಗುತ್ತದೆ. ನಂತರ ಎರಡನೇ ಹಂತದಲ್ಲಿ ಬಳಸುವ 110 ಟನ್‌ ಯುಡಿಎಂಎಚ್‌ ಹಾಗೂ ಎನ್‌2ಒ2 ಇಂಧನದ ಬದಲು ದ್ರವೀಕೃತ ಆಮ್ಲಜನಕ ಹಾಗೂ ಸಂಸ್ಕರಿತ ಸೀಮೆಎಣ್ಣೆ (ಕೆರೋಲಾಕ್ಸ್‌ - ಆರ್‌ಪಿ-1) ಬಳಸಲು ಉದ್ದೇಶಿಸಿದ್ದೇವೆ. ಇದರ ಮೊದಲ ಪರೀಕ್ಷೆ 2020ರ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೆರೋಲಾಕ್ಸ್‌ ಇಂಧನವು ಸಾಮಾನ್ಯ ಹೈಡ್ರೋಲಾಕ್ಸ್‌ಗಿಂತ 10 ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿದ್ದು, ರಾಕೆಟ್‌ಗೆ ಹೈಡ್ರೋಲಾಕ್ಸ್‌ಗಿಂತ ಹೆಚ್ಚು ಶಕ್ತಿಯನ್ನು ಒದಗಿಸಲಿದೆ. ಹಾಗೆಯೇ ಇದು ಕಡಿಮೆ ಬೆಲೆಯ ಇಂಧನ ಕೂಡ ಆಗಿದೆ. ಜೊತೆಗೆ, ಹೈಡ್ರೋಲಾಕ್ಸ್‌ಗಿಂತ ಕಡಿಮೆ ಅಪಾಯಕಾರಿಯಾಗಿದ್ದು, ರಾಕೆಟ್‌ನ ಒಳಗಿನ ಉಷ್ಣತೆ ಹೆಚ್ಚಿದಾಗಲೂ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ. ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಸಂಸ್ಥೆ ಬೃಹತ್‌ ಉಪಗ್ರಹ ಹಾಗೂ ಬಾಹ್ಯಾಕಾಶ ಸಾಮಗ್ರಿಗಳನ್ನು ಹೊತ್ತೊಯ್ಯುವ ತನ್ನ ಫಾಲ್ಕನ್‌ 9 ರಾಕೆಟ್‌ಗಳಲ್ಲಿ ಕೆರೋಲಾಕ್ಸ್‌ ಇಂಧನ ಬಳಸುತ್ತಿದೆ.