ಬೆಂಗಳೂರು(ಆ.04): ಅದು ಸಹಸ್ರಾರು ಕೋಟಿ ಜೀವಿಗಳನ್ನು ಸಾಕುತ್ತಿರುವ ತಾಯಿಯ ಮಡಿಲು. ಯಾರನ್ನೂ ದೂರ ತಳ್ಳದೇ, ಯಾರನ್ನೂ ನೋಯಿಸದೇ ಎಲ್ಲರನ್ನೂ ತನ್ನ ಮಕ್ಕಳಂತೆ ಕಾಣುವ ಭೂಮಿಗೆ ಸರಿಸಾಟಿ ಯಾವುದಿದೆ ಹೇಳಿ?.

ಅದರಂತೆ ಚಂದ್ರನ ಅಧ್ಯಯನ ನಡೆಸಲು ಇಸ್ರೋ ಕಳುಹಿಸಿರುವ ಚಂದ್ರಯಾನ -2 ನೌಕೆ, ಭೂಮಿಯ ಚಿತ್ರಗಳನ್ನು ರವಾನಿಸಿದೆ. ಚಂದ್ರಯಾನ-2 ರವಾನಿಸಿರುವ ಭೂಮಿಯ ಚಿತ್ರಗಳನ್ನು ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದೆ.

ಭೂಮಿಯ ಒಟ್ಟು 5 ಫೋಟೋಗಳನ್ನು ಬಿಡುಗಡೆ ಮಾಡಿರುವ ಇಸ್ರೋ, ಚಂದ್ರಯಾನ ನೌಕೆಯು ತನ್ನ ನಿರ್ದಿಷ್ಟ ಗುರಿಯತ್ತ ಸರಿಯಾದ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದೆ.

ಚಂದ್ರಯಾನ-2 ಈಗಾಗಲೇ ಭೂಕ್ಷಕೆಯ ನಾಲ್ಕನೇಯ ಸುತ್ತನ್ನು ಯಶಸ್ವಿಯಾಗಿ ಪೂರೈಸಿದ್ದು, ಆ. 14 ರಂದು ಭೂಮಿಯ ಗುರುತ್ವ ಬಲದಿಂದ ಆಚೆ ಹೋಗಲಿದೆ. ಅಲ್ಲದೇ ಆ.20 ರಂದು ಚಂದ್ರನ ಗುರುತ್ವ ಬಲದ ಒಳಗೆ ನೌಕೆ ಬರಲಿದ್ದು, ಸೆ.07ರಂದು ಚಂದ್ರನ ಮೇಲ್ಮೆ ಮೇಲೆ ಯಶಸ್ವಿಯಾಗಿ ಇಳಿಯಲಿದೆ.