ಶ್ರೀಹರಿಕೋಟಾ[ಜು.22]: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಕಡೆಯ ಗಳಿಗೆಯಲ್ಲಿ ಮುಂದೂಡಿಕೆ ಕಂಡಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಚಂದ್ರಯಾನ-2 ಹೊತ್ತು ‘ಬಾಹುಬಲಿ’ ಎಂದೇ ಹೆಸರುವಾಸಿಯಾಗಿರುವ ಇಸ್ರೋದ ‘ಜಿಎಸ್‌ಎಲ್‌ವಿ ಮಾರ್ಕ್ 3’ ರಾಕೆಟ್‌ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಭೋಮಂಡಲದತ್ತ ಚಿಮ್ಮಿದೆ. ಭಾರತದ ಕೀರ್ತಿ ಪತಾಕೆ ಹಾರಿಸಿದ ಇಸ್ರೋ ವಿಜ್ಞಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಇದಕ್ಕಾಗಿ ಭಾನುವಾರ ಸಂಜೆಯಿಂದಲೇ ಕ್ಷಣಗಣನೆ ಆರಂಭವಾಗಿತ್ತು ಎಂಬುವುದು ಉಲ್ಲೇಖನೀಯ.

"

ಬಾಹ್ಯಾಕಾಶದಲ್ಲಿ ಇಸ್ರೋ ಮೈಲಿಗಲ್ಲು; ಹೀಗಿರಲಿದೆ ಚಂದ್ರಯಾನ-2

ಈ ಉಡಾವಣೆಯನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿತ್ತು. ಈವರೆಗೆ ಚಂದಿರನ ಮೇಲೆ ನೌಕೆ ಇಳಿಸುವ ಸಾಹಸವನ್ನು ಅಮೆರಿಕ, ರಷ್ಯಾ, ಚೀನಾ ಮಾತ್ರವೇ ಮಾಡಿವೆ. ಈ ಮೂರೂ ದೇಶಗಳು ಅಧ್ಯಯನ ನಡೆಸದ ಚಂದಿರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಸ್ರೋ ಇಳಿಸುತ್ತಿದೆ. ಅಲ್ಲದೆ ಈ ಮೂರೂ ದೇಶಗಳಿಗಿಂತ ಅಗ್ಗದ ದರದಲ್ಲಿ ಚಂದ್ರಯಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಸ್ರೋ ಮತ್ತೊಮ್ಮೆ ವಿಶ್ವದಲ್ಲಿ ಗಮನ ಸೆಳೆದಿದೆ. ಚಂದ್ರಯಾನ-2 ಯಶಸ್ವಿ ಉಡಾವಣೆಯಿಂದ ಈ ಸಾಧನೆ ಮಾಡಿದ ದೇಶಗಳ ಪಟ್ಟಿಗೆ ಸೇರಿದ ಭಾರತ ಸೇರ್ಪಡೆಗೊಂಡಿದೆ.

ಚಂದ್ರಯಾನ-2 ನೌಕೆಯಲ್ಲೇನಿದೆ? ಹೇಗೆ ಕೆಲಸ ನಿರ್ವಹಿಸುತ್ತೆ?

ಚಂದ್ರಯಾನ-2 ನೌಕೆಯಲ್ಲಿ ಆರ್ಬಿಟರ್‌, ವಿಕ್ರಮ್‌ ಹೆಸರಿನ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ಎಂಬ ರೋವರ್‌ ಇವೆ. ರಾಕೆಟ್‌ನಿಂದ ಉಡಾವಣೆಗೊಂಡ ಬಳಿಕ ಸೆಪ್ಟೆಂಬರ್‌ಗೆ ಚಂದ್ರಯಾನ-2 ನೌಕೆ ಚಂದ್ರನ ಕಕ್ಷೆ ತಲುಪಲಿದೆ. ರೋವರ್‌ ಅನ್ನು ಮಡಿಲಿನಲ್ಲಿ ಇಟ್ಟುಕೊಂಡಿರುವ ಲ್ಯಾಂಡರ್‌ ಆಗ ಆರ್ಬಿಟರ್‌ನಿಂದ ಪ್ರತ್ಯೇಕಗೊಳ್ಳಲಿದೆ. ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಇಳಿದ ಮೇಲೆ ರೋವರ್‌ ಅದರಿಂದ ಹೊರಬಂದು ಚಂದಿರನ ನೆಲದಲ್ಲಿ 500 ಮೀಟರ್‌ನಷ್ಟುಅಡ್ಡಾಡಿ, ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಲಿದೆ. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಆರ್ಬಿಟರ್‌ ಅತ್ಯುತ್ಕೃಷ್ಟಚಿತ್ರಗಳನ್ನು ಸೆರೆ ಹಿಡಿದು ಭೂಮಿಗೆ ಕಳುಹಿಸಲಿದೆ.

ರೈತನ ಮಗ ಚಂದ್ರಕಾಂತ್: ಚಂದ್ರಯಾನ-2 ಪ್ರಮುಖ ವಿಜ್ಞಾನಿ!

ಚಂದ್ರನ ಉದಯ, ವಿಕಸನ ಯಾವ ರೀತಿ ಆಯ್ತು? ಅಲ್ಲಿ ನೀರಿದೆಯಾ? ಯಾವೆಲ್ಲಾ ಖನಿಜಗಳನ್ನು ಚಂದ್ರ ಹೊಂದಿದ್ದಾನೆ ಎಂಬ ಅಮೂಲ್ಯ ಮಾಹಿತಿಯನ್ನು ಚಂದ್ರಯಾನ-2 ಹೆಕ್ಕುವ ನಿರೀಕ್ಷೆಯಲ್ಲಿ ವಿಜ್ಞಾನಿಗಳು ಇದ್ದಾರೆ.

ಕಳೆದ ಸೋಮವಾರ ನಸುಕಿನ ಜಾವ 2.51ಕ್ಕೇ ಚಂದ್ರಯಾನ-2 ಉಡಾವಣೆಯಾಗಬೇಕಿತ್ತಾದರೂ ರಾಕೆಟ್‌ನ ಕ್ರಯೋಜನಿಕ್‌ ಹಂತದ ಇಂಧನ ಟ್ಯಾಂಕ್‌ನಲ್ಲಿ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆಗೆ 56 ನಿಮಿಷಗಳಿರುವಾಗ ಹಠಾತ್‌ ಮುಂದೂಡುವ ನಿರ್ಧಾರವನ್ನು ವಿಜ್ಞಾನಿಗಳು ಕೈಗೊಂಡಿದ್ದರು. ದೋಷವನ್ನು ಹಗಲಿರುಳೆನ್ನದೇ ವಿಜ್ಞಾನಿಗಳು ಸರಿಪಡಿಸಿದ್ದಾರೆ. ಜುಲೈ ಅಂತ್ಯದೊಳಗೆ ಚಂದ್ರಯಾನ-2 ಉಡಾವಣೆ ಮಾಡಲು ವಿಫಲರಾದರೆ, ಮತ್ತೊಂದು ಉಡಾವಣೆ ಸಮಯಕ್ಕೆ ಸೆಪ್ಟೆಂಬರ್‌ವರೆಗೆ ಕಾಯಬೇಕಾಗಿರುವುದು ಇದಕ್ಕೆ ಕಾರಣ.

ಚಂದ್ರಯಾನ-2 ನೇತೃತ್ವ ಮಹಿಳಾ ವಿಜ್ಞಾನಿಗಳದ್ದು!

ಚಂದ್ರಯಾನ-2 ವಿಶೇಷತೆಗಳು

980 ಕೋಟಿ ರು.: ಇಸ್ರೋ ಚಂದ್ರಯಾನ- 2ಕ್ಕೆ ಆಗಿರುವ ಒಟ್ಟಾರೆ ವೆಚ್ಚ

3840 ಕೆ.ಜಿ.: ಚಂದ್ರಯಾನ-2 ನೌಕೆಯ ಒಟ್ಟು ತೂಕ

3.84 ಲಕ್ಷ ಕಿ.ಮೀ.: ಭೂಮಿಯಿಂದ ಚಂದ್ರನಿಗೆ ಇರುವ ಅಂತರ

ಉಡಾವಣೆಯ ದೃಶ್ಯಗಳು: