Asianet Suvarna News Asianet Suvarna News

ಇನ್ಫೋಸಿಸ್ ಫೌಂಡೇಶನ್ ಆರೋಹಣ್ ಪ್ರಶಸ್ತಿ ಪ್ರಕಟ

  • 2019 ನೇ ಸಾಲಿನ ಆರೋಹಣ್ ಸೋಶಿಯಲ್ ಇನ್ನೋವೇಶನ್ ಅವಾರ್ಡ್ಸ್
  • ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಪೂರಕವಾದ ಪರಿಹಾರಗಳನ್ನು ಆವಿಷ್ಕರಿಸಿರುವ ನಾಲ್ಕು ಸಂಸ್ಥೆಗಳಿಗೆ ಈ ಬಾರಿ ಪ್ರಶಸ್ತಿ
  • ಪ್ರಶಸ್ತಿಯ ಒಟ್ಟು ಮೊತ್ತ 1.50 ಕೋಟಿ ರೂಪಾಯಿಗಳು
Infosys Foundation Announces  Aarohan Social Innovation Awards 2019
Author
Bengaluru, First Published Feb 19, 2020, 2:11 PM IST

ಬೆಂಗಳೂರು (ಫೆ. 19): ಇನ್ಫೋಸಿಸ್‌ನ ಸಿಎಸ್‌ಆರ್ ಅಂಗಸಂಸ್ಥೆ ಇನ್ಫೋಸಿಸ್ ಫೌಂಡೇಶನ್ ತನ್ನ ಎರಡನೇ ಆವೃತ್ತಿಯ ಆರೋಹಣ ಸೋಶಿಯಲ್ ಇನ್ನೋವೇಷನ್ ಅವಾರ್ಡ್ಸ್  ಗಳನ್ನು ಪ್ರಕಟಿಸಿದೆ. 

ಇನ್ಫೋಸಿಸ್ ಫೌಂಡೇಶನ್  2018 ರಲ್ಲಿ ಈ ಪ್ರಶಸ್ತಿಗಳನ್ನು ಆರಂಭಿಸಿದ್ದು, ನಿರ್ಗತಿಕರು ಮತ್ತು ಹಿಂದುಳಿದ ವರ್ಗಗಗಳ ಶ್ರೇಯೋಭಿವೃದ್ಧಿಗೆ ಪೂರಕವಾದ ಪರಿಹಾರಗಳನ್ನು ಅವಿಷ್ಕರಿಸುವ ವ್ಯಕ್ತಿ ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಈ ವರ್ಷ ನಾಲ್ಕು ವಿಭಾಗಗಳಲ್ಲಿ- ಆರೋಗ್ಯ ರಕ್ಷಣೆ, ಗ್ರಾಮೀಣಾಭಿವೃದ್ಧಿ, ನಿರ್ಗತಿಕರ ಆರೈಕೆ ಮತ್ತು ಸುಸ್ಥಿರತೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಈ ಬಾರಿ ಪ್ರಶಸ್ತಿಗಾಗಿ 1,700 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅದರಲ್ಲಿ ಅತ್ಯುತ್ತಮವಾದ ಪರಿಹಾರಗಳನ್ನು ಕಂಡು ಹಿಡಿದವರನ್ನು ಶಾರ್ಟ್‌ಲೀಸ್ಟ್ ಮಾಡಲಾಗಿದೆ. 

ತೀರ್ಪುಗಾರರ ಮಂಡಳಿ

ಆಟಿಕೆ ಸಂಶೋಧಕ ಪದ್ಮಶ್ರೀ ಅರವಿಂದ ಗುಪ್ತಾ,  ಹನಿಬೀ ನೆಟ್‌ವರ್ಕ್‌ನ ಸಂಸ್ಥಾಪಕ- ಐಐಎಂ ಅಹ್ಮದಾಬಾದ್‌ನ ಉಪನ್ಯಾಸಕ ಪದ್ಮಶ್ರೀ ಪ್ರೊಫೆಸರ್ ಅನಿಲ್ ಗುಪ್ತಾ,   ಐಐಎಂ ಬೆಂಗಳೂರಿನ ನಿವೃತ್ತ ಡೀನ್ ಪ್ರೊಫೆಸರ್ ತ್ರಿಲೋಚನ್ ಶಾಸ್ತ್ರಿ ಐಐಟಿ ಹೈದ್ರಾಬಾದ್‌ನ ಟೀಚಿಂಗ್ ಲರ್ನಿಂಗ್ ಸೆಂಟರ್‌ನ ಉಪನ್ಯಾಸಕರಾದ ಪ್ರೊಫೆಸರ್ ಜಿವಿವಿ ಶರ್ಮಾ,     ಇನ್ಫೋಸಿಸ್‌ನ ಸಿಎಂಓ  ಸುಮೀತ್ ವಿರ್ಮಾನಿ, ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ತೀರ್ಪುಗಾರರ ಮಂಡಳಿ ಸದಸ್ಯರಾಗಿದ್ದರು.

ಆರೋಹಣ್ ಸೋಶಿಯಲ್ ಇನ್ನೋವೇಶನ್ ಅವಾರ್ಡ್ಸ್ ವಿಜೇತರು:

 ಚಿನ್ನದ ಪ್ರಶಸ್ತಿ: ಬಹುಮಾನದ ಮೊತ್ತ 20 ಲಕ್ಷ ರೂಪಾಯಿ

ಆರೋಗ್ಯ ರಕ್ಷಣೆ: ಕೊಲ್ಕತ್ತಾದ ಪಾರ್ಥ ಪ್ರತಿಮ್ ದಾಸ್ ಮಹಾಪಾತ್ರ. ಇವರು ಹ್ಯೂಮನ್ ಬಿಲಿರುಬಿನ್, ಆಕ್ಸಿಜನ್ ಸ್ಯಾಚುರೇಷನ್ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಮಾನವನ ದೇಹದಿಂದ ರಕ್ತವನ್ನು ತೆಗೆಯದೇ ಮಾಪನ ಮಾಡುವ ನಾನ್-ಇನ್‌ವೇಸಿವ್, ನಾನ್-ಕಾಂಟ್ಯಾಕ್ಟ್ ರೋಬಸ್ಟ್ ಹ್ಯಾಂಡ್-ಹೆಲ್ಡ್ ಪೋರ್ಟೇಬಲ್ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಆರೋಗ್ಯ ರಕ್ಷಣೆ: ಬೆಂಗಳೂರಿನ ಡಾ.ಬಿನಿತಾ ಎಸ್. ತುಂಗಾ ಮತ್ತು ಡಾ.ರಾಶಬೆಹರಿ ತುಂಗಾ ಅವರು ಸೊಳ್ಳೆ ಕಡಿತದಿಂದ ಆಗುವ ರೋಗಗಳಾದ ಮಲೇರಿಯಾ, ಚಿಕುನ್‌ಗುನ್ಯಾ ಮತ್ತು ಡೆಂಘೆಯನ್ನು ಪರಿಣಾಮಕಾರಿಯಾಗಿ ತಪ್ಪಿಸುವ ಮತ್ತು ಆರಂಭಿಕ ಹಂತದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವ ಸಿಂಗಲ್ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಆರೋಗ್ಯ ರಕ್ಷಣೆ: ಮುಂಬೈನ ತುಮಾಸ್ (ಫೌಂಡೇಷನ್ ಫಾರ್ ಟ್ಯುಬರ್‌ಕ್ಯುಲೋಸಿಸ್, ಮಾಲ್‌ನ್ಯೂಟ್ರಿಶನ್ ಅಂಡ್ ಏಡ್ಸ್) ಮೂತ್ರದ ಮೂಲಕ ಟಿಬಿಯನ್ನು ಪತ್ತೆ ಮಾಡುವ  ಪಾಯಿಂಟ್-ಆಫ್-ಕೇರ್, ಯೂಸರ್-ಫ್ರೆಂಡ್ಲಿ, ಕಾಸ್ಟ್-ಇಫೆಕ್ಟಿವ್ ಮತ್ತು ಕ್ಷಿಪ್ರ ಪತ್ತೆ ಮಾಡುವ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಸುಸ್ಥಿರತೆ: ಕೇರಳದ ರಶೀದ್ ಕೆ, ವಿಮಲ್ ಗೋವಿಂದ್ ಎಂಕೆ ಮತ್ತು ನಿಖಿಲ್ ಎನ್‌ಪಿ ಅವರು ‘ಬ್ಯಾಂಡಿಕೂಟ್' ಎಂಬ ವಿಶ್ವದ ಮೊದಲ ರೋಬೋಟ್ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಮ್ಯಾನ್‌ಹೋಲ್ ಸ್ವಚ್ಛತೆಗೆ ಮನುಷ್ಯರ ಬಳಕೆಗೆ ಇತಿಶ್ರೀ ಹಾಡಿ ಸಂಭವಿಸಬಹುದಾದ ಅನಾಹುತಗಳಿಂದ ಕಾರ್ಮಿಕರನ್ನು ರಕ್ಷಿಸಬಹುದಾಗಿದೆ.

ನಿರ್ಗತಿಕರ ರಕ್ಷಣೆ: ಚೆನ್ನೈನ ರಾಮಲಿಂಗಂ ಪಿಎಲ್ ಅವರು ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ವಿಕಲಚೇತನ ಮಕ್ಕಳಿಗೆಂದೇ ಕೈಗೆಟುಕುವ ದರದ ಸ್ಟಾಂಡಿಂಗ್ ವ್ಹೀಲ್‌ಚೇರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ರಜತ ಪ್ರಶಸ್ತಿ: ಬಹುಮಾನದ ಮೊತ್ತ 10 ಲಕ್ಷ ರೂಪಾಯಿಗಳು

ಆರೋಗ್ಯ ರಕ್ಷಣೆ: ಬೆಂಗಳೂರಿನ ನಿತೇಶ್ ಕುಮಾರ್ ಜಾಂಗೀರ್ ಅವರು ನವಜಾತ ಶಿಶುಗಳಿಗೆ ಉಸಿರಾಟ ವ್ಯವಸ್ಥೆ ಕಲ್ಪಿಸುವ ಸಾನ್ಸ್ ಎಂಬ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಅತ್ಯಂತ ಕಡಿಮೆ ಮೂಲಸೌಕರ್ಯದ ಅಗತ್ಯವಿದೆ.

ಆರೋಗ್ಯ ರಕ್ಷಣೆ: ನವದೆಹಲಿಯ ಅನೀಶ್ ಕರ್ಮ ಅವರು ಮೆಕ್ಯಾನಿಕಲಿ ಆ್ಯಕ್ಚುವೇಟೆಡ್ ಸ್ಟಾನ್ಸ್ ಕಂಟ್ರೋಲ್ಡ್ ನೀ ಆ್ಯಂಕಲ್ ಫೂಟ್ ಆರ್ಥೋಟಿಕ್ (ಎಂಎಸ್‌ಎಸ್‌ಸಿ-ಕೆಎಎಫ್‌ಒ) ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಡಿವೈಸ್ ಹಾಲಿ ಇರುವ ಆರ್ಥೋಟಿಕ್ ಕ್ಯಾಲಿಪರ್ಸ್‌ಗೆ ಪರ್ಯಾಯವಾಗಿದೆ.

ಆರೋಗ್ಯ ರಕ್ಷಣೆ: ಬೆಂಗಳೂರಿನ ರಾಜಲಕ್ಷ್ಮಿ ಬೊರ್ಥಕೂರು ಅವರು 'ಟಿಜಯ್' ಎಂಬ ಇಂಟರ್ನೆಟ್ ಆಫ್ ತಿಂಗ್ಸ್(ಐಒಟಿ)/ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಎಐ) ಎಂಬ ಸ್ಮಾರ್ಟ್ ವೇರೇಬಲ್ ಡಿವೈಸ್ ಅನ್ನು ಆವಿಷ್ಕಾರ ಮಾಡಿದ್ದಾರೆ. ಇದು ಅಪಸ್ಮಾರವನ್ನು ತಡೆಯುತ್ತದೆ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಗತಿಯನ್ನು ಗುರುತಿಸಲು ನೆರವಾಗುತ್ತದೆ.

ಆರೋಗ್ಯ ರಕ್ಷಣೆ: ಗಂಟಲು ಕ್ಯಾನ್ಸರ್‌ನಿಂದ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡವರಿಗೆ ಕೃತಕ ಧ್ವನಿಪೆಟ್ಟಿಗೆ ಔಮ್ ವಾಯ್ಸ್ ಪ್ರೊಸ್ತೆಸಿಸ್ ಅನ್ನು ಅಭಿವೃದ್ಧಿಪಡಿಸಿರುವ ಬೆಂಗಳೂರಿನ ಡಾ.ವಿಶಾಲ್ ಯುಎಸ್ ರಾವ್ ಮತ್ತು ಶಶಾಂಕ್ ಮಹೇಶ್. ಈ ಕೃತಕ ಧ್ವನಿಪೆಟ್ಟಿಗೆಯಿಂದ ರೋಗಿಗಳು ಮತ್ತೆ ಮಾತನಾಡಲು ಸಾಧ್ಯವಾಗುತ್ತದೆ.

ಗ್ರಾಮೀಣಾಭಿವೃದ್ಧಿ: ಮಧ್ಯಪ್ರದೇಶದ ರೋಹಿತ್ ಪಟೇಲ್ ಕಡಿಮೆ ವೆಚ್ಚದಲ್ಲಿ ಈರುಳ್ಳಿ ಸಂಗ್ರಹ ಮಾಡುವ ಪರಿಹಾರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಮಳೆಗಾಲದಲ್ಲಿ ಈರುಳ್ಳಿ ಹಾಳಾಗುವುದಿಲ್ಲ.

ಸುಧಾಮೂರ್ತಿ ಮಾತು:

ಪ್ರಶಸ್ತಿ ವಿಜೇತರರನ್ನು ಸನ್ಮಾನಿಸಿ ಮಾತನಾಡಿದ ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷರಾದ ಸುಧಾ ಮೂರ್ತಿ ಅವರು, 'ಆರೋಹಣ್ ಸೋಶಿಯಲ್ ಇನ್ನೋವೇಶನ್ ಅವಾರ್ಡ್ಸ್‌ನ ಎರಡನೇ ಆವೃತ್ತಿ ಇದಾಗಿದೆ. ಜನರು ತಾವು ಆವಿಷ್ಕರಿಸಿದ ಆವಿಷ್ಕಾರಗಳನ್ನು ಪ್ರದರ್ಶಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಇಂತಹ ಆವಿಷ್ಕಾರಗಳ ಮೂಲಕ ದೇಶ ಇಂದು ಎದುರಿಸುತ್ತಿರುವ ಸಾಮಾಜಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುನ್ನಡಿ ಇಡಲು ಈ ಪ್ರಶಸ್ತಿ ಸಹಕಾರಿಯಾಗುತ್ತದೆ, ಎಂದರು.

ಇಂತಹ ಆವಿಷ್ಕಾರಗಳು ಉತ್ತಮ, ಕಡಿಮೆ ವೆಚ್ಚ ಮತ್ತು ಸುಸ್ಥಿರ ಪರಿಹಾರಗಳನ್ನು ಒದಗಿಸುತ್ತವೆ ಎಂಬ ವಿಶ್ವಾಸ ನಮಗಿದೆ. ಈ ದಿಸೆಯಲ್ಲಿ ಇಂದು ಪ್ರಶಸ್ತಿ ಪಡೆದಿರುವವರು ಭವಿಷ್ಯದ ಭಾರತವನ್ನು ಮತ್ತಷ್ಟು ಉಜ್ವಲವಾಗುವಂತೆ ಮಾಡುವ ನಿಟ್ಟಿನಲ್ಲಿ ಹಗಲಿರುಳೂ ಶ್ರಮಿಸಿ ಪ್ರಶಸ್ತಿಗೆ ಭಾಜನರಾಗಿರುವವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಮತ್ತು ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮದಿಂದ ಪ್ರೇರೇಪಿತರಾಗಿ ಮತ್ತಷ್ಟು ಜನರು ಆವಿಷ್ಕಾರದತ್ತ ಗಮನಹರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸುಧಾ ಮೂರ್ತಿ ಹೇಳಿದರು.

ಇದಲ್ಲದೇ ಪ್ರಶಸ್ತಿ ವಿಜೇತರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಿನ್ನದ ಪ್ರಶಸ್ತಿಯನ್ನು ಗಳಿಸಿರುವ ವಿಜೇತರಿಗೆ ಐಐಟಿ ಹೈದ್ರಾಬಾದ್‌ನಲ್ಲಿ 8 ವಾರಗಳ ಕಾಲದ ರೆಸಿಡೆನ್ಷಿಯಲ್ ಮೆಂಟರ್‌ಶಿಪ್‌ಗೂ ಅವಕಾಶ ಕಲ್ಪಿಸಲಾಗುತ್ತಿದೆ.
 

Follow Us:
Download App:
  • android
  • ios