Selfies NFT: ತನ್ನ 1000 ಸೆಲ್ಫಿ ಮಾರಾಟ ಮಾಡಿ ಕೋಟ್ಯಧಿಪತಿಯಾದ ಇಂಡೋನೇಷಿಯನ್ ವಿದ್ಯಾರ್ಥಿ!
*ಸೆಲ್ಫಿಗಳ ಎನ್‌ಎಫ್‌ಟಿ ಮಾಡಿದ ಇಂಡೋನೇಷಿಯನ್ ವಿದ್ಯಾರ್ಥಿ
*ಮಾರಾಟದ ಮೂಲಕ ಸುಮಾರು ₹7.7 ಕೋಟಿ ಸಂಪಾದನೆ
*ಐದು ವರ್ಷಗಳ ಅವಧಿಯಲ್ಲಿ ತೆಗೆದ ಸುಮಾರು 1,000 ಸೆಲ್ಫಿ
Tech Desk: ಇತ್ತೀಚೆಗೆ ಡಿಜಿಟಲ್ ಸಿಗ್ನೇಚರ್ ಹಾಗೂ ಎನ್‌ಎಫ್‌ಟಿಗಳ (Non Fungible Token) ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಕಳೆದ ಒಂದು ವರ್ಷದಲ್ಲಿ, ಕ್ರಿಪ್ಟೋ ಸ್ಪೇಸ್ ಟ್ರೆಂಡಿಂಗ್‌ನಲ್ಲಿದೆ. ಇದೇ ಎನ್‌ಎಫ್‌ಟಿ ಮಾರ್ಗ ಅನುಸರಿಸಿ 22 ವರ್ಷದ ಇಂಡೋನೇಷಿಯಾದ ಕಾಲೇಜು ವಿದ್ಯಾರ್ಥಿ ಸುಲ್ತಾನ್ ಗುಸ್ತಾಫ್ ಅಲ್ ಘೋಜಾಲಿ (Sultan Gustaf Al Ghozali) ₹7 ಕೋಟಿಗೂ ಹೆಚ್ಚು ಹಣ (ಒಂದು ಮಿಲಿಯನ್ ಡಾಲರ್) ಗಳಿಸಿದ್ದಾನೆ. ಇಂಡೋನೇಷ್ಯಾದ (Indonesia) ಸೆಮರಾಂಗ್‌ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯು ಐದು ವರ್ಷಗಳ ಅವಧಿಯಲ್ಲಿ ತೆಗೆದ ಸುಮಾರು 1,000 ಸೆಲ್ಫಿಗಳನ್ನು ಎನ್‌ಎಫ್‌ಟಿಗಳಾಗಿ ಪರಿವರ್ತಿಸಿ ಅವುಗಳನ್ನು ಓಪನ್‌ಸೀ (OpenSea) ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾನೆ.
ಎನ್‌ಎಫ್‌ಟಿ ಡಿಜಿಟಲ್ ವಸ್ತುಗಳ ಮಾಲೀಕತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಡಿಜಿಟಲ್ 'ಸ್ವತ್ತು'ಗಳಿಗೆ ಮಾಲೀಕತ್ವದ ರಚನೆ, ಸಂಗ್ರಹಣೆ ಮತ್ತು ವರ್ಗಾವಣೆಗೆ ಇದು ವೇದಿಕೆಯನ್ನು ಒದಗಿಸುತ್ತದೆ. ತನ್ನ ಕಾಲೇಜ್ ದಿನಗಳ ನೆನಪಿನಲ್ಲಿಟ್ಟುಕೊಳ್ಳಲು ಘೋಝಾಲಿ 18 ಮತ್ತು 22 ವಯಸ್ಸಿನ ನಡುವೆ ಪ್ರತಿದಿನ ತನ್ನ ಕಂಪ್ಯೂಟರ್‌ನ ಮುಂದೆ ಕುಳಿತು ಅಥವಾ ನಿಂತುಕೊಂಡು ಯಾವುದೇ ಮುಖಭಾವವಿಲ್ಲದ (expressionless) ಸೆಲ್ಫಿಗಳನ್ನು ತೆಗೆದುಕೊಂಡಿದ್ದಾನೆ. ನಂತರ ಈ ಚಿತ್ರಗಳನ್ನು ಎನ್‌ಎಫ್‌ಟಿಗಳಾಗಿ ಪರಿವರ್ತಿಸಿ ಅವುಗಳನ್ನು ಪ್ರತಿಯೊಂದರ ಬೆಲೆ $3 (ಸುಮಾರು ರೂ. 222) ನಂತೆ ಮಾರಾಟಕ್ಕೆ ಓಪನ್‌ಸೀಯಲ್ಲಿ ಇರಿಸಿದ್ದಾನೆ.
ಇದನ್ನೂ ಓದಿ: World’s First SMS: ವಿಶ್ವದ ಮೊದಲ ಎಸ್‌ಎಮ್‌ಎಸ್ 'Merry Christmas' ₹91 ಲಕ್ಷಕ್ಕೆ ಮಾರಾಟ!
ಸುಮಾರು ರೂ. 7.73 ಕೋಟಿ ಸಂಪಾದನೆ: ಘೋಝಾಲಿಯ ಎನ್‌ಎಫ್‌ಟಿ ಸಂಗ್ರಹಣೆಯ ಮೂಲಕ ETH 317 ಅಥವಾ $1,041,325 (ಸುಮಾರು ರೂ. 7.73 ಕೋಟಿ) ಒಟ್ಟು ವ್ಯಾಪಾರ ಮಾಡಿದ್ದಾನೆ. ಇದು ರಾತ್ರೋರಾತ್ರಿ ಘೋಝಾಲಿಯನ್ನು ಮಿಲಿಯನೇರ್ ಮಾಡಿತು ಎಂದು ಲೈಫ್‌ಸ್ಟೈಲ್ ಏಷ್ಯಾದ ವರದಿ ತಿಳಿಸಿದೆ. ಟ್ವೀಟ್‌ನಲ್ಲಿ, ಘೋಜಾಲಿ ತನ್ನ ಚಿತ್ರಗಳನ್ನು ದುರುಪಯೋಗ ಮಾಡದಂತೆ ಜನರನ್ನು ಒತ್ತಾಯಿಸಿದ್ದಾನೆ, ಇಲ್ಲದಿದ್ದರೆ "ಪೋಷಕರು ನಿರಾಶೆಗೊಳ್ಳುತ್ತಾರೆ" ಎಂಬುದಾಗಿ ಘೋಜಾಲಿ ತಿಳಿಸಿದ್ದಾನೆ.
"ನೀವು ಫ್ಲಿಪ್ಪಿಂಗ್ (flipping) ಅಥವಾ ಯಾವುದನ್ನಾದರೂ ಮಾಡಬಹುದು ಆದರೆ ದಯವಿಟ್ಟು ನನ್ನ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ, ನನ್ನ ಪೋಷಕರು ನನ್ನಲ್ಲಿ ತುಂಬಾ ನಿರಾಶೆಗೊಳ್ಳುತ್ತಾರೆ. ನಾನು ನಿಮ್ಮನ್ನು ನಂಬುತ್ತೇನೆ ಆದ್ದರಿಂದ ದಯವಿಟ್ಟು ನನ್ನ ಫೋಟೋಗಳನ್ನು ನೋಡಿಕೊಳ್ಳಿ, ”ಎಂದು ಘೋಜಾಲಿ ತಿಳಿಸಿದ್ದಾನೆ.ಅತಿ ಹೆಚ್ಚು ಎಂದರೆ ಘೋಜಾಲಿಯ ಕೆಲವು ಸೆಲ್ಫಿ ಎನ್‌ಎಫ್‌ಟಿಗಳು ETH 0.9 ಕ್ಕೆ ಮಾರಾಟವಾಗಿವೆ. ಅಂದರೆ ಸುಮಾರು $3,000 (ಸುಮಾರು ರೂ. 2.22 ಲಕ್ಷ). ಯುವಕ ತನ್ನ ಸೆಲ್ಫಿಗಳ ವೀಡಿಯೊ ಕೊಲಾಜ್ ಅನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇಲ್ಲಿ ನೀವು ವಿಡಿಯೋ ನೋಡಬಹದು.
ಇದನ್ನೂ ಓದಿ: NFT - Digital Signatures ಎಂದರೇನು? ಇವು ಹೇಗೆ ಕೆಲಸ ಮಾಡುತ್ತವೆ?
ಎನ್‌ಎಫ್‌ಟಿಗಳು ಇತರ ವಿಷಯಗಳ ಜೊತೆಗೆ ಸ್ಕೆಚ್‌ಗಳು, ಪೇಂಟಿಂಗ್‌ಗಳು ಮತ್ತು ವಿಡಿಯೋ ಗೇಮ್‌ಗಳನ್ನು ಒಳಗೊಂಡಂತೆ ನಿಜ ಜೀವನದಲ್ಲಿ ಅಸ್ತಿತ್ವದಲ್ಲಿರಬಹುದಾದ ಅಥವಾ ಇಲ್ಲದಿರುವ ವಸ್ತುಗಳ ರಚನೆ, ಸಂಗ್ರಹ, ಮಾರಾಟಕ್ಕೆ ಬಳಸಬಹದು. 2021 ರ ಮೂರನೇ ತ್ರೈಮಾಸಿಕದಲ್ಲಿ,ಎನ್‌ಎಫ್‌ಟಿಮಾರಾಟದ ಪ್ರಮಾಣವು $ 10.7 ಶತಕೋಟಿ (ಸುಮಾರು ರೂ. 79,820 ಕೋಟಿ) ಗೆ ಏರಿಕೆ ಕಂಡಿದೆ. ಇದು ಹಿಂದಿನ ತ್ರೈಮಾಸಿಕಕ್ಕಿಂತ ಎಂಟು ಪಟ್ಟು ಹೆಚ್ಚಾಗಿದೆ ಎಂದು ಮಾರುಕಟ್ಟೆ ಟ್ರ್ಯಾಕರ್ DappRadar ತಿಳಿಸಿದೆ. ಎನ್‌ಎಫ್‌ಟಿಗಳಲ್ಲಿ ಹೆಚ್ಚುತ್ತಿರುವ ಮಾರಾಟಗಳು ಮತ್ತು ಭಾರೀ ಬೆಲೆಗಳು ಅನೇಕರನ್ನು ದಿಗ್ಭ್ರಮೆಗೊಳಿಸಿವೆ.