ಭಾರತವು ವಿಶ್ವದ ಅತೀ ದೊಡ್ಡ ಚಹರೆ ಗುರುತು (ಫೇಶಿಯಲ್ ರಿಕಗ್ನಿಷನ್ ) ವ್ಯವಸ್ಥೆಯನ್ನು ಸ್ಥಾಪಿಸಲು ಹೊರಟಿದೆ.  ಆ ಮೂಲಕ ದೇಶದಲ್ಲಿ ಸರ್ವಿಲಿಯನ್ಸ್ ಕಂಪನಿಗಳಿಗೆ ದೊಡ್ಡ ಅವಕಾಶ ತೆರೆದು ಕೊಳ್ಳಲಿದೆ. ಇನ್ನೊಂದು ಕಡೆ ಪ್ರೈವೆಸಿ ಹಕ್ಕು ಹೋರಾಟಗಾರರ ಕೆಂಗಣ್ಣಿಗೆ ಈ ಯೋಜನೆ ಗುರಿಯಾಗುವುದರಲ್ಲಿ ಸಂಶಯವಿಲ್ಲ. ಚೀನಾದಲ್ಲಿ ಈಗಾಗಲೇ ಇಂತಹ ವ್ಯವಸ್ಥೆ ಜಾರಿಯಲ್ಲಿದೆ.

ದೇಶಾದ್ಯಂತ ಸರ್ವೇಕ್ಷಣಾ ಕ್ಯಾಮೆರಾಗಳ ಮೂಲಕ ದಾಖಲಾದ ಎಲ್ಲಾ ಮಾಹಿತಿಯನ್ನು ಒಂದೆಡೆ ಸಂಗ್ರಹಿಸುವ ವ್ಯವಸ್ಥೆಗೆ ಕೇಂದ್ರ ಸರ್ಕಾರವು ಮುಂದಿನ ತಿಂಗಳು ಬಿಡ್ ಕರೆಯಲಿದೆ. ಈ ವ್ಯವಸ್ಥೆಯಲ್ಲಿ ಪಾಸ್ ಪೋರ್ಟ್, ಫಿಂಗರ್ ಪ್ರಿಂಟ್ ನಂತಹ ಎಲ್ಲಾ ಮಾಹಿತಿಗಳು ಒಂದಕ್ಕೊಂದು ಲಿಂಕ್ ಆಗುವುದರಿಂದ, ಪೊಲೀಸರಿಗೆ ಕ್ರಿಮಿನಲ್ ಗಳನ್ನು, ನಾಪತ್ತೆಯಾದ ವ್ಯಕ್ತಿಗಳನ್ನು ಮತ್ತು ಮೃತದೇಹಗಳ ಗುರುತು ಹಿಡಿಯಲು ಸುಲಭವಾಗಲಿದೆ.

ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪೊಲೀಸ್ ಪಡೆಗೆ ಈ ಮೂಲಕ ಬಲ ತುಂಬಲಿದೆ ಎಂಬುವುದು ಸರ್ಕಾರದ ಲೆಕ್ಕಾಚಾರ. ಭಾರತದಲ್ಲಿ ಸರಾಸರಿ 724 ನಾಗರಿಕರಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇದ್ದಾನೆ. ಜಾಗತಿಕ ಸರಾಸರಿಗೆ ಹೋಲಿಸಿದರೆ ಇದು ಬಹಳ ಕಡಿಮೆ.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್‌ ಪತನಗೊಂಡಿದ್ದು ಹೇಗೆ? ಬಯಲಾಯ್ತು ಕಾರಣ

ಖಾಸಗಿ ಸರ್ವೇಕ್ಷಣಾ ಕಂಪನಿಗಳಿಗೂ ಈ ಹೊಸ ವ್ಯವಸ್ಥೆ ದೊಡ್ಡ ವರವಾಗಿ ಪರಿಣಮಿಸಲಿದೆ. ಒಂದು ಅಂದಾಜಿನ ಪ್ರಕಾರ ಫೇಶಿಯಲ್ ರಿಕಗ್ನಿಷನ್ ಉದ್ಯಮವು 2024ರ ಹೊತ್ತಿಗೆ 4.3 ಬಿಲಿಯನ್ ಡಾಲರ್ ವರೆಗೆ ತಲುಪಲಿದೆ.

ಡೇಟಾ ಸುರಕ್ಷತೆ ಮತ್ತು ಖಾಸಗಿತನ ಕಾಪಾಡಲು ಸಮರ್ಪಕವಾದ  ಕಾನೂನುಗಳಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.