ಪುಣೆ[ಜ.11]: 2012ರಲ್ಲಿ ನಡೆಸಲು ಉದ್ದೇಶಿಸಿರುವ ಭಾರತದ ಮೊದಲ ಬಾಹ್ಯಾಕಾಶ ಯಾನ ಕಾರ್ಯಕ್ರಮದಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್‌ ತಿಳಿಸಿದ್ದಾರೆ. ಇದರೊಂದಿಗೆ ಮೊದಲ ಯಾನದಲ್ಲಿ ತೆರಳಲಿರುವ ಮೂವರು ಗಗನಯಾತ್ರಿಗಳ ಪೈಕಿ ಓರ್ವ ಮಹಿಳೆಗೂ ಅವಕಾಶ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.

ಬಾಹ್ಯಾಕಾಶ ಯಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡುವಾಗ ನಮ್ಮ ಭಾರತದ ಹೆಮ್ಮೆಯ ಪುತ್ರ ಅಥವಾ ಪುತ್ರಿಯನ್ನು ಕಳುಹಿಸುತ್ತೇವೆ ಎಂದು ಹೇಳಿದ್ದರು. ಅದೇ ನಿಟ್ಟಿನಲ್ಲಿ ಇಸ್ರೋ ಕೂಡಾ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ನಾವು ಖಂಡಿತಾ ಸಕ್ರಿಯವಾಗಿ ಹೆಜ್ಜೆ ಇಡುತ್ತೇವೆ. ಆದರೆ ಬಾಹ್ಯಾಕಾಶ ಯಾನಿಗಳಾಗಿ ಆಯ್ಕೆಯಾಗಲು ನಾನಾ ಪರೀಕ್ಷೆಗಳನ್ನು ಪಾಸಾಗಬೇಕಾಗುತ್ತದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀತ ವಾಯುಪಡೆ ನೀಡುತ್ತದೆ. ಅದನ್ನು ಆಧರಿಸಿ ನಾವು ಮುಂದಿನ ಪರೀಕ್ಷೆ ನಡೆಸುತ್ತೇವೆ. ಆದರೆ ಇದುವರೆಗೆ ನಾವು ಇಂಥ ಪರೀಕ್ಷೆಗಳನ್ನೂ ಇನ್ನೂ ಆರಂಭಿಸಿಲ್ಲ ಎಂದು ಹೇಳಿದ್ದಾರೆ.

ಇದುವರೆಗೆ ವಿಶ್ವದ ವಿವಿಧ ದೇಶಗಳಿಂದ 60 ಮಹಿಳೆಯರು ಸೇರಿದಂತೆ ಒಟ್ಟು 550 ಜನ ಬಾಹ್ಯಾಕಾಶ ಕೈಗೊಂಡಿದ್ದಾರೆ. ಈ ಪೈಕಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪರವಾಗಿ ತೆರಳಿದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಮತ್ತು ಕಲ್ಪನಾ ಚಾವ್ಲಾ ಕೂಡಾ ಸೇರಿದ್ದಾರೆ. ಇವರ ಪೈಕಿ ಕಲ್ಪನಾ ಚಾವ್ಲಾ, 2003ರಲ್ಲಿ ಕೊಲಂಬಿಯಾ ನೌಕೆ ಬಾಹ್ಯಾಕಾಶದಿಂದ ಭೂಮಿಗೆ ಮರಳುವಾಗ ಸಂಭವಿಸಿದ ಅವಘಡದ ವೇಳೆ ಸಾವನ್ನಪ್ಪಿದ್ದರು.

ಇಸ್ರೋ ತನ್ನ ಮೂವರು ಬಾಹ್ಯಾಕಾಶ ಯಾನಿಗಳನ್ನು ಒಟ್ಟು 7 ದಿನಗಳ ಕಾಲ ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಿದೆ. ಇದಕ್ಕಾಗಿ 10000 ಕೋಟಿ ರು. ವೆಚ್ಚದ ಯೋಜನೆ ಕೂಡಾ ಸಿದ್ಧಪಡಿಸಿದೆ.