ನವದೆಹಲಿ :  ಲೋಕಸಭೆ ಚುನಾವಣೆ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಅಸಂಖ್ಯಾತ ಸಂದೇಶಗಳಲ್ಲಿ ನಿಜ ಯಾವುದು, ಸುಳ್ಳು ಯಾವುದು ಎಂಬುದನ್ನು ಬಳಕೆದಾರರಿಗೆ ತಿಳಿಸುವ ಸಲುವಾಗಿ ಫೇಸ್‌ಬುಕ್‌ ಒಡೆತನದ ಕಂಪನಿ ‘ಚೆಕ್‌ಪಾಯಿಂಟ್‌ ಟಿಪ್‌ಲೈನ್‌’ ಎಂಬ ವ್ಯವಸ್ಥೆಯೊಂದನ್ನು ಆರಂಭಿಸಿದೆ.

ವಾಟ್ಸ್‌ಆ್ಯಪ್‌ಗೆ ಶಂಕಾಸ್ಪದ ಸಂದೇಶ ಬಂದಿದ್ದರೆ, ಅದರಲ್ಲಿರುವುದು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ತಿಳಿಯಲು ಬಳಕೆದಾರರಿಗೆ ಈ ವ್ಯವಸ್ಥೆಯಡಿ ಅವಕಾಶ ಲಭಿಸುತ್ತದೆ. ಅದಕ್ಕೆ ಬಳಕೆದಾರರು ಮಾಡಬೇಕಿರುವುದು ಇಷ್ಟೆ. ತಮಗೆ ಬಂದ ಸಂದೇಶವನ್ನು ಚೆಕ್‌ಪಾಯಿಂಟ್‌ ಟಿಪ್‌ಲೈನ್‌ನ ವಾಟ್ಸ್‌ಆ್ಯಪ್‌ ಸಂಖ್ಯೆಗೆ (9643000888) ಕಳುಹಿಸಬೇಕು. ಭಾರತೀಯ ಮೂಲದ ಮಾಧ್ಯಮ ಕೌಶಲ್ಯ ಸ್ಟಾರ್ಟಪ್‌ ಕಂಪನಿಯಾಗಿರುವ ‘ಪ್ರೋಟೋ’ ಈ ಸಂದೇಶಗಳನ್ನು ಪರಿಶೀಲಿಸುತ್ತದೆ. ಆ ಸಂದೇಶದಲ್ಲಿ ನಿಜಾಂಶವಿದೆಯೇ, ಅದು ಸುಳ್ಳೇ, ದಾರಿ ತಪ್ಪಿಸುವಂತಹದ್ದಾಗಿದೆಯೇ, ವಿವಾದದಿಂದ ಕೂಡಿದೆಯೇ ಎಂಬುದನ್ನು ಪ್ರೋಟೋ ಕಂಪನಿ ಪ್ರತಿಕ್ರಿಯೆ ರೂಪದಲ್ಲಿ ತಿಳಿಸುತ್ತದೆ.

ಇಂಗ್ಲಿಷ್‌, ಹಿಂದಿ, ತೆಲುಗು, ಬಂಗಾಳಿ, ಮಲಯಾಳಂ ಭಾಷೆಯಲ್ಲಿರುವ ಚಿತ್ರ, ವಿಡಿಯೋ ಲಿಂಕ್‌ ಅಥವಾ ಅಕ್ಷರಗಳನ್ನು ಈ ಸಂಖ್ಯೆಗೆ ಕಳುಹಿಸಬಹುದಾಗಿದೆ. ಮಂಗಳವಾರದಿಂದಲೇ ಈ ಸೌಲಭ್ಯ ಲಭ್ಯವಿದೆ.

ದೇಶದಲ್ಲಿ 20 ಕೋಟಿ ಮಂದಿ ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾರೆ. ಈ ಜನಪ್ರಿಯ ಮಾಧ್ಯಮದಡಿ ಶೇರ್‌ ಆದ ಸಂದೇಶಗಳು ಹಲವು ರೀತಿಯ ದೊಂಬಿಗೆ ಕಾರಣವಾಗಿದ್ದವು. ಹೀಗಾಗಿ ಸರ್ಕಾರದ ಆಕ್ರೋಶಕ್ಕೆ ವಾಟ್ಸ್‌ಆ್ಯಪ್‌ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ಬಾರಿಗೆ ಗರಿಷ್ಠ 5 ಮಂದಿಗಷ್ಟೇ ಸಂದೇಶ ಫಾರ್ವರ್ಡ್‌ ಮಾಡಲು ಅವಕಾಶ ಕಳುಹಿಸಿತ್ತು. ಸುಳ್ಳು ಮಾಹಿತಿ ತಡೆಗೆ ಸಾಕಷ್ಟುಜಾಹೀರಾತುಗಳನ್ನೂ ನೀಡಿತ್ತು.

ವಾಟ್ಸ್‌ಆ್ಯಪ್‌ ಬಳಕೆದಾರರು ತಮಗೆ ಬಂದ ಅನುಮಾನಾಸ್ಪದ ಸಂದೇಶವನ್ನು ಚೆಕ್‌ಪಾಯಿಂಟ್‌ ಟಿಪ್‌ಲೈನ್‌ನ ವಾಟ್ಸ್‌ಆ್ಯಪ್‌ ಸಂಖ್ಯೆ (91-9643-000-888)ಗೆ ಕಳುಹಿಸಬೇಕು. ಈ ಸಂದೇಶಗಳನ್ನು ‘ಪ್ರೋಟೋ’ ಎಂಬ ಸ್ಟಾರ್ಟಪ್‌ ಕಂಪನಿ ಪರಿಶೀಲಿಸುತ್ತದೆ. ಆ ಸಂದೇಶದಲ್ಲಿ ನಿಜಾಂಶವಿದೆಯೇ, ಅದು ಸುಳ್ಳೇ, ದಾರಿ ತಪ್ಪಿಸುವಂತಹದ್ದಾಗಿದೆಯೇ, ವಿವಾದದಿಂದ ಕೂಡಿದೆಯೇ ಎಂಬುದನ್ನು ಕಂಪನಿ ಮರಳಿ ಪ್ರತಿಕ್ರಿಯೆ ರೂಪದಲ್ಲಿ ತಿಳಿಸುತ್ತದೆ.

5 ಭಾಷೆಗೆ ಸೌಲಭ್ಯ, ಕನ್ನಡಕ್ಕೆ ಇನ್ನೂ ಇಲ್ಲ

ಇಂಗ್ಲಿಷ್‌, ಹಿಂದಿ, ತೆಲುಗು, ಬಂಗಾಳಿ, ಮಲಯಾಳಂ ಭಾಷೆಯಲ್ಲಿರುವ ಚಿತ್ರ, ವಿಡಿಯೋ ಲಿಂಕ್‌ ಅಥವಾ ಅಕ್ಷರಗಳನ್ನು ಈ ಸಂಖ್ಯೆಗೆ ಕಳುಹಿಸಬಹುದಾಗಿದೆ. ಆದರೆ, ಕನ್ನಡಕ್ಕೆ ಇನ್ನೂ ಈ ಸೌಲಭ್ಯ ನೀಡಲಾಗಿಲ್ಲ.