ಪ್ರಸಿದ್ಧ ಸಾಹಿತಿಗಳ ಕತೆಗಳನ್ನು ಉಚಿತವಾಗಿ ಆ್ಯಪ್ ನಲ್ಲಿ ‘ಆಲಿಸಿರಿ’!

ನೆಚ್ಚಿನ ಪುಸ್ತಕ ಓದಬೇಕು ಆದ್ರೆ ಟೈಮ್ ಇಲ್ಲ. ಭಾಷೆ ಗೊತ್ತು, ಅಕ್ಷರ ಓದಲು ಬರೋಲ್ಲ. ಆದರೂ ಪುಸ್ತಕ ಓದುವ ಆಸೆ ಇದೆ. ಇಂಥಾ ಸಾಹಿತ್ಯ ಪ್ರೇಮಿಗಳಿಗಾಗಿಯೇ ಆಡಿಯೋ ಪುಸ್ತಕದ ಸಂಗ್ರಹವನ್ನು ಉಚಿತವಾಗಿ ನೀಡುತ್ತಿದ್ದಾರೆ ದಾವಣಗೆರೆ ಮೂಲದ ವಿದೇಶಿ ನಿವಾಸಿ ಶ್ರೀಹರ್ಷ ಸಾಲಿಮಠ್. ಕನ್ನಡ ಆಡಿಯೋ ಪುಸ್ತಕಗಳ ಸಂಗ್ರಹ ಸಿಗುವ ತಾಣ ‘ಆಲಿಸಿರಿ’ ಎನ್ನುವ ಆ್ಯಪ್.

 

Great Kannada authors stories could be heard in alisiri app

ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸಿಡ್ನಿಯಲ್ಲಿ ನೆಲೆಸಿರುವ ಶ್ರೀಹರ್ಷ ಸಾಲಿಮಠ್ ಮೂಲತಃ ದಾವಣಗೆರೆಯವರು. ವಲಸೆ ಹೋದ ಅದೆಷ್ಟೋ ಕನ್ನಡಿಗರಿಗೆ ಕನ್ನಡದ ಪುಸ್ತಕಗಳ ಲಭ್ಯತೆ ಕಷ್ಟ. ಆನ್‌ಲೈನ್‌ನಲ್ಲಿ ಪಿಡಿಎಫ್ ಸಿಗುವುದೂ ಸಹ ಕಷ್ಟ. ಹಾಗಾಗಿ ಕನ್ನಡ ಪುಸ್ತಕ ಓದುಗರಿಗಾಗಿ ಆಧುನಿಕ ತಂತ್ರಜ್ಞಾನವನ್ನೇ ಬಳಸಿ, ಆಡಿಯೋ ಪುಸ್ತಕದಂಗಡಿ ತೆರೆಯುವ ಆಲೋಚನೆ ಮೂಡಿತು. ಹರ್ಷ ಅವರು ವಿದೇಶಕ್ಕೆ ಹೋಗುವ ಮುನ್ನ, ಬೆಂಗಳೂರಿನಲ್ಲೊಮ್ಮೆ ಕನ್ನಡ ಪುಸ್ತಕವೊಂದಕ್ಕೆ ವಾಯ್ಸ್ ಓವರ್ (ಪುಸ್ತಕ ಓದುವುದು/ ರೆಕಾರ್ಡಿಂಗ್)ಗೆ ಬಂದಿದ್ದರು. ಅಲ್ಲಿ ಅವರಿಗೆ ಆಕಾಶವಾಣಿಯಲ್ಲಿ ವಾಯ್ಸ್ ಓವರ್ ಕೊಡುತ್ತಿದ್ದ ಉಮಾ ಮೂರ್ತಿ ಅವರ ಪರಿಚಯವಾಯಿತು. ಈ ಸಂದರ್ಭದಲ್ಲಿ ಆಡಿಯೋ ಪುಸ್ತಕದ ಆ್ಯಪ್ ತರೆಯುವ ಬಗ್ಗೆ ಹೇಳಿದಾಗ ಉಮಾ ಅವರೂ ಬೆಂಬಲ ಸೂಚಿಸಿದರು. ಅದರಂತೆ 2019ರಲ್ಲಿ  ಆರಂಭವಾದ ಈ ಪ್ರಯತ್ನ ೨೦೧೯ ಜೂನ್ ೨೦ರಂದು ಆಡಿಯೋ ಪುಸ್ತಕ ಸಂಗ್ರಹ ‘ಆಲಿಸಿರಿ’ ಆ್ಯಪ್ ಬಿಡುಗಡೆಯಾಯಿತು.

ಎರಡು ಸಾವಿರ ವರ್ಷಗಳ ಹಿಂದೆ ಮುದ್ರಣಕ್ಕೂ ಮೊದಲು ಜನರ ನಡುವೆ ಮಾತುಕತೆಯೇ ಮಾಧ್ಯಮವಾಗಿತ್ತು. ಹೀಗೆ ಚೈನ್ ಲಿಂಕ್‌ನಂತೆ ಒಬ್ಬರಿಂದ ಇನ್ನೊಬ್ಬರಿಗೆ ತಲುಪುತ್ತಿತ್ತು. ನಂತರ ಬಂದಿದ್ದೇ ಮುದ್ರಣ. ಮುದ್ರಿಸಿದ್ದು ಎಲ್ಲರಿಗೂ ಸಿಗುವುದಿಲ್ಲ. ಅನಕ್ಷರಸ್ಥರೂ ಕೇಳಿಸಿಕೊಂಡು ಸಾಹಿತ್ಯವನ್ನು ಅರಿಯಬಹುದು. ನಮ್ಮ ಪರಂಪರೆಗೆ ಆಧುನಿಕ ತಂತ್ರಜ್ಞಾನದ ಟಚ್‌ಕೊಟ್ಟು ಪುಸ್ತಕವನ್ನು ಆಡಿಯೋ ಆಗಿ ರೆಕಾರ್ಡ್ ಮಾಡಿ ಆ್ಯಪ್ ಮೂಲಕ ಸಾಹಿತ್ಯ ಪ್ರಿಯರಿಗೆ ತಲುಪಿಸುತ್ತಿದ್ದೇವೆ.-  ಹರ್ಷ

ಆ್ಯಪ್ ಐಡಿಯಾ ಮೂಡಿದ್ದು ಹೀಗೆ!

ಆ್ಯಪ್ ಹುಟ್ಟಿಕೊಳ್ಳಲು ಪ್ರಮುಖವಾಗಿ ಎರಡು ಕಾರಣ. ಮೊದಲನೆಯದು ವಿದೇಶದಲ್ಲಿನ ಕನ್ನಡದ ಮಕ್ಕಳಿಗೆ ಕನ್ನಡ ಮಾತನಾಡಲು, ಅರ್ಥ ಆಗುತ್ತಿದ್ದರೂ, ಅವರಿಗೆ ಓದಲು ಹಾಗೂ ಬರೆಯಲಿಕ್ಕೆ ಬರುತ್ತಿರಲಿಲ್ಲ. ಎರಡನೆಯದು ಕನ್ನಡ ಸಾಹಿತ್ಯದ ಬಗೆಗಿನ ಡಾಕ್ಯುಮೆಂಟೇಷನ್. ಕನ್ನಡದ ಅನೇಕ ಸಾಹಿತಿಗಳ ಪುಸ್ತಕವಿದೇಶದಲ್ಲಿ ಸೇರಿ ಅನೇಕ ಪುಸ್ತಕದಂಗಡಿಗಳಲ್ಲಿ ಸಿಗುವುದು ಕಷ್ಟವಾಗುತ್ತಿತ್ತು. ಈ ಎಲ್ಲಾ ಕಾರಣಕ್ಕೆ ಕನ್ನಡ ಪುಸ್ತಕಗಳನ್ನು ಆಡಿಯೋ ರೂಪದಲ್ಲಿ ನೀಡಿ ಸಾರ್ವಕಾಲಿಕ ದಾಖಲೆಯಾಗಿ ಉಳಿಯುವಂತೆ ಮಾಡಲು ಹರ್ಷ ಆಡಿಯೋ ಆ್ಯಪ್ ತರಲು ಯೋಜನೆ ರೂಪಿಸಿದರು.

ಜನರಿಗೆ ಹೇಗೆ ಈ ಆಡಿಯೋ ಪುಸ್ತಕ ನೆರವಾಗುತ್ತೆ

ಕೆಲಸದೊತ್ತಡದ ನಡುವೆ ನಗರ ಪ್ರದೇಶದ ಪುಸ್ತಕ ಪ್ರಿಯರಿಗೆ ಓದಲು ಬಿಡುವು ಸಿಗುವುದೇ ವಿರಳ. ಗ್ರಾಮೀಣ ಪ್ರದೇಶದಲ್ಲಿಯೂ ಪುಸ್ತಕ ಸಿಗುವುದು ಕಡಿಮೆ. ಇಂಗ್ಲಿಷ್ ಕಲಿಕೆ ಕಡ್ಡಾಯ ಆಗಿರುವ ಇಂದಿನ ದಿನಗಳಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನವನ್ನೇ ಉಪಯೋಗಿಸಿಕೊಂಡು ಮಕ್ಕಳಿಗೆ ಈಗಿನಿಂದಲೇ ಕನ್ನಡದ ಅಭಿರುಚಿ ಬೆಳೆಸಬೇಕಿದೆ. ಆಡಿಯೋ ರೂಪದಲ್ಲಿ ಕೃತಿಗಳನ್ನು ರೆಕಾರ್ಡ್ ಮಾಡಿ ನೀಡಬಹುದು. ಒಂದು ಡಾಕ್ಯುಮೆಂಟರಿಯಾಗಿ ಉಳಿಯುವ ಕಾರಣ ಮುಂದಿನ ಪೀಳಿಗೆಗೂ ಕೊಡುಗೆ ನೀಡಿದಂತಾಗುತ್ತದೆ. ಮನೆಯ ಕೆಲಸ ಮಾಡುತ್ತಲೋ, ಆಫೀಸ್‌ಗೆ ಹೋಗುವಾಗ, ವೃದ್ಧರಿಗಿರಲಿ ದೃಷ್ಟಿಹೀನರಿಗಿರಲಿ ಕೇಳಿಸಿಕೊಂಡಾದರೂ ಪುಸ್ತಕ ಓದಬಹುದು ಎನ್ನುತ್ತಾರೆ ಹರ್ಷ.

ಪುಸ್ತಕಗಳ ಆಯ್ಕೆ ಅನುಪಮಾ ನಿರಂಜನ, ಕೆ.ಎನ್.ಗಣೇಶಯ್ಯ, ಶ್ರೀನಿವಾಸ್ ವೈದ್ಯ,ಕುಂ.ವೀರಭದ್ರಪ್ಪ, ಬೋಳುವಾರು ಮೊಹಮ್ಮದ್ ಕುಂಞಿ, ವಸುಂಧರಾ ಭೂಪತಿ ಹೀಗೆ ಅನೇಕರ ಪುಸ್ತಕ ಆಯ್ಕೆ ಮಾಡಿ ಅವರಿಂದ ಕಾಪಿ ರೈಟ್ಸ್ ಹಕ್ಕು ಪಡೆದು ವಾಯ್ಸ್ ಓವರ್ ಮಾಡಲಾಗುತ್ತದೆ. ಅಂದ್ರೆ ಪುಸ್ತಕ ಓದಿದ್ದನ್ನು ರೆಕಾರ್ಡ್ ಮಾಡುವುದು. ಅಡುಗೆ, ಕಾದಂಬರಿ, ಪುರಾಣ, ಮಕ್ಕಳ ಕಥೆಗಳು, ವಿಮರ್ಶಾತ್ಮಕ ಬರಹಗಳು, ಕವನ ಸಂಕಲನ, ಸಣ್ಣ ಕತೆಗಳ ಸಂಗ್ರಹ, ಹೀಗೆ ಎಲ್ಲಾ ಪುಸ್ತಕಗಳಿವೆ. ವಾಯ್ಸ್ ಓವರ್ ಕೊಡುವವರು ಸಾಮಾನ್ಯವಾಗಿ ಹೊಸಬರೇ ಆಗಿದ್ದು ಅವರನ್ನೊಮ್ಮೆ ತಯಾರು ಮಾಡಲಾಗುತ್ತದೆ. ಪುಸ್ತಕ ಓದುತ್ತೀವಿ ಎಂದು ಮುಂದೆ ಬರುವವರಿಗೆ ಅವಕಾಶ ಇದೆ ಎನ್ನುತ್ತಾರೆ ಉಮಾ. ಪುಸ್ತಕ ಓದಲು ಇಷ್ಟವಿದ್ದರೆ 9964044030 ಸಂಪರ್ಕಿಸಿ.

ಎಲ್ಲಾ ಭಾಷೆಯ ಪುಸ್ತಕ ತರುವ ಉದ್ದೇಶ

ಎಲ್ಲಾ ಪುಸ್ತಕವೂ ಅಂಗಡಿಯಲ್ಲಿ ಸಿಗುವುದಿಲ್ಲ. ನೆಟ್‌ನಲ್ಲಿ ಕೆಲ ಪುಸ್ತಕಗಳ ಪಿಡಿಎಫ್ ಸಿಗಬಹುದಷ್ಟೆ. ತಂತ್ರಜ್ಞಾನ ಬಳಸಿ ಅದರಲ್ಲೂ ಎಂಪಿ೩ ರೂಪದಲ್ಲಿ ಕೇಳಿಸಿಕೊಳ್ಳಬಹುದು. ಆ್ಯಪ್ ಬಿಟ್ಟರೆ ಟೆಕ್ನಿಕಲಿ ಇನ್ನೊಂದು ಸ್ಟೆಪ್ ಬೇರೊಂದಿಲ್ಲ. ಒಂದು ಪುಸ್ತಕದ ಬಗ್ಗೆ ಎಲ್ಲರಿಗೂ ತಿಳಿಸಬೇಕು ಎಂದರೆ ಒಂದು ಆ್ಯಕ್ಟ್ ಮಾಡಬೇಕು ಅದಕ್ಕೆಂದೇ ಈಗ ನಾಟಕ, ಸಿನಿಮಾಗಳು ಬಂದಿವೆ. ಅದು ಜನರಿಗೀಗಾಗಲೇ ಚಿರಪರಿಚಿತ. ಆದರೆ ಯಾರೆಲ್ಲೇ ಇರಲಿ ಎಲ್ಲರಿಗೂ ತಲುಪಬೇಕು ಎಂದರೆ ಆಡಿಯೋ ರೂಪದಲ್ಲಿ ಓದುಗರಿಗೆ ನೀಡಬಹುದು. ಕನ್ನಡದ ಮಾದರಿಯಲ್ಲೇ ಬೇರೆ ಭಾಷೆಯ ಪುಸ್ತಕವನ್ನು ಆಡಿಯೋವನ್ನು ನೀಡುವ ಉದ್ದೇಶ ಇದೆ ಎನ್ನುತ್ತಾರೆ ಉಮಾ ಮೂರ್ತಿ.

 

 

Latest Videos
Follow Us:
Download App:
  • android
  • ios