ಟಿಕ್‌ಟಾಕ್, ಹೆಲೋ ಆ್ಯಪ್‌ಗೆ ಮತ್ತೆ ನಿಷೇಧ ಭೀತಿ!
ಟಿಕ್‌ಟಾಕ್‌ಗೆ ಮತ್ತೆ ನಿಷೇಧ ತೂಗುಕತ್ತಿ| ಟಿಕ್‌ಟಾಕ್, ಹೆಲೋಗೆ ಕೇಂದ್ರದಿಂದ ನೋಟಿಸ್| 21 ಪ್ರಶ್ನೆಗಳನ್ನೂ ಕೇಳಿದ ಐಟಿ ಸಚಿವಾಲಯ| ಸೂಕ್ತ ಉತ್ತರ ಬಾರದಿದ್ದರೆ ನಿಷೇಧ
ನವದೆಹಲಿ[ಜು.19]: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಟಿಕ್‌ಟಾಕ್ ಹಾಗೂ ಹೆಲೋ ಆ್ಯಪ್‌ಗಳನ್ನು ದೇಶದ್ರೋಹಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಎರಡೂ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ 21 ಪ್ರಶ್ನೆಗಳಿಗೆ ಉತ್ತರಗಳನ್ನೂ ಬಯಸಿದೆ. ಒಂದು ವೇಳೆ ಸೂಕ್ತ ಉತ್ತರ ಬಾರದೇ ಇದ್ದಲ್ಲಿ ನಿಷೇಧ ಹೇರುವ ಎಚ್ಚರಿಕೆಯನ್ನೂ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್‌ನಲ್ಲಿ ಟಿಕ್‌ಟಾಕ್ ಆ್ಯಪ್ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಬಳಿಕ ನಿಷೇಧ ಹಿಂಪಡೆದಿತ್ತು. ಇದೀಗ ಮತ್ತೆ ನಿಷೇಧದ ಸುಳಿಯಲ್ಲಿ ಆ ಆ್ಯಪ್ ಸಿಲುಕಿದೆ.
ಟಿಕ್‌ಟಾಕ್ ಹಾಗೂ ಹೆಲೋ ಆ್ಯಪ್‌ಗಳನ್ನು ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅಂಗಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್ ಇತ್ತೀಚೆಗೆ ದೂರು ನೀಡಿತ್ತು. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ಜಾರಿ ಮಾಡಿದೆ. ಜತೆಗೆ ದತ್ತಾಂಶ ವರ್ಗಾವಣೆ, ಸುಳ್ಳು ಸುದ್ದಿ, ಮತ್ತಿತರೆ ವಿಚಾರಗಳ ಸಂಬಂಧ 21 ಪ್ರಶ್ನೆಗಳನ್ನೂ ಕೇಳಿದೆ.
ಇದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಎರಡೂ ಸಂಸ್ಥೆಗಳು, ತಾಂತ್ರಿಕ ಮೂಲಸೌಕರ್ಯ ಅಭಿವೃದ್ಧಿಗಾಗಿ ಮುಂದಿನ 3 ವರ್ಷಗಳಲ್ಲಿ 6700 ಕೋಟಿ ರು. ಹೂಡಿಕೆ ಮಾಡುವ ಯೋಜನೆ ಹೊಂದಿರುವುದಾಗಿ ಹೇಳಿಕೊಂಡಿವೆ.