ನವದೆಹಲಿ(ಸೆ.20): ವಾಟ್ಸಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ, ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಂತಹ ಸುದ್ದಿಗಳ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‌ಗೆ ಸೂಚನೆ ನೀಡಿದೆ. 

ಒಂದು ವೇಳೆ ವಾಟ್ಸಪ್ ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚುವಲ್ಲಿ ವಿಫಲವಾದರೆ ದೇಶದಲ್ಲಿ ವಾಟ್ಸಪ್ ನಿಷೇಧಕ್ಕೆ ಒಳಗಾಗಬಹುದು ಎಂದೂ ಗಂಭೀರ ಎಚ್ಚರಿಕೆ ನೀಡಿದೆ.

ಆದರೆ ಕೇಂದ್ರದ ಬೇಡಿಕೆಗೆ ವಾಟ್ಸಪ್ ಸಮ್ಮತಿ ಸೂಚಿಸಿಲ್ಲ, ಬದಲಾಗಿ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ ಎಂದು ತಿರುಗೇಟು ನೀಡಿದೆ. ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಅದನ್ನು ಮೀರಲಾಗದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ವಾಟ್ಸಪ್ ಬಳಸಿ ಕಳುಹಿಸಲಾಗುವ ಎಲ್ಲ ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್‌ಗೆ ಒಳಪಟ್ಟಿವೆ. ಇದರಿಂದ ಸಂದೇಶ ಸೋರಿಕೆಯಾಗುವುದಿಲ್ಲ. ಹೀಗಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಾಟ್ಸಪ್ ಹೇಳಿದೆ. 

ಆದರೆ ದೇಶದಲ್ಲಿ ಕೆಲವೊಂದು ಪ್ರಕರಣಗಳಲ್ಲಿ ವಾಟ್ಸಪ್ ಮೂಲಕ ಹರಡಲಾದ ಸಂದೇಶವೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿದೆ. ಹೀಗಾಗಿ ಅದನ್ನು ಪತ್ತೆಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ.