Asianet Suvarna News Asianet Suvarna News

ಗೂಗಲ್‌ನಿಂದ ಹೊಸ ಫೀಚರ್: ಇಂಟರ್ನೆಟ್ ಇಲ್ಲದಿದ್ದಾಗಲೂ ಬ್ರೌಸ್ ಮಾಡಿ!!

  • ಮೊಬೈಲ್‌ನಲ್ಲಿ ಗೂಗಲ್ ಕ್ರೋಮ್ ಬಳಸುವವರಿಗೆ ಹೊಸ ಸೌಲಭ್ಯ
  • ಇಂಟರ್ನೆಟ್ ಇಲ್ಲದಿದ್ದರೂ ತಮಗೆ ಬೇಕಾದುದನ್ನು ನೋಡಬಹುದು, ಓದಬಹುದು!
Google Chrome on Android now lets you surf web without internet

ಬೆಂಗಳೂರು: ಇಂಟರ್ನೆಟ್ ಇಂದು ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲೂ ವಿದ್ಯಾರ್ಥಿಗಳು, ಯುವಜನರು ಮತ್ತು ವೃತ್ತಿಪರರಿಗೆ ಇಂಟರ್ನೆಟ್ ಇಲ್ಲದಿದ್ದರೆ, ಉಸಿರಾಟಕ್ಕೆ ತೊಂದರೆಯಾದ ಅನುಭವ! ಅಂತಹುದರಲ್ಲಿ,  ನೀವು ಪ್ರಯಾಣ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ, ಸಮರ್ಪಕ ಇಂಟರ್ನೆಟ್ ಸಂಪರ್ಕವಿಲ್ಲದಾಗ ಮೊಬೈಲ್‌ನಲ್ಲಿ ಏನಾದರೂ ನೋಡುವ, ಓದುವ ಮನಸ್ಸಾಯ್ತು ಅಥವಾ ಅನಿವಾರ್ಯತೆ ಎದುರಾಯ್ತು? ಮುಂದೇನು? 

ಡೋಂಟ್ ವರಿ, ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಸರ್ಫಿಂಗ್ ಮಾಡಬಹುದಾದ ಫೀಚರನ್ನು ಗೂಗಲ್ ಅಭಿವೃದ್ಧಿಪಡಿಸಿದೆ. ಆ್ಯಂಡ್ರಾಯಿಡ್ ಫೋನ್‌ನಲ್ಲಿ ಗೂಗಲ್ ಕ್ರೋಮ್ ಬಳಸುವವರಿಗೆ ಈ ಫೀಚರ್ ಲಭ್ಯವಾಗಲಿದೆಯೆಂದು ವರದಿಯಾಗಿದೆ.

ಭಾರತ, ನೈಜಿರಿಯಾ, ಇಂಡೋನೇಶಿಯಾ ಮತ್ತು ಬ್ರೆಜಿಲ್ ಸೇರಿದಂತೆ ಸುಮಾರು 100 ದೇಶಗಳಲ್ಲಿ ಆ್ಯಂಡ್ರಾಯಿಡ್ ಫೋನ್ ಬಳಕೆದಾರರಿಗೆ, ಸಮರ್ಪಕ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸರ್ಫಿಂಗ್ ಮಾಡಲು ಈ ಗೂಗಲ್ ಕ್ರೋಮ್ ಫೀಚರ್ ಮೂಲಕ ಸಾಧ್ಯವಿದೆ. 

ಬಳಕೆದಾರರು ಇಂಟರ್ನೆಟ್/ ವೈಫೈ ಸಂಪರ್ಕದಲ್ಲಿದ್ದಾಗ, ‘ಡೇಟಾ ಸೇವರ್’ಎಂಬ ಈ ಹೊಸ ಕ್ರೋಮ್ ಫೀಚರ್ ತನ್ನಿಂತಾನೇ ಆ ಪ್ರದೇಶದಲ್ಲಿ ಜನಪ್ರಿಯವಾಗಿರುವ ಕಂಟೆಟ್‌ಗಳನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳುತ್ತದೆ. ಬಳಿಕ ಬಳಕೆದಾರರು, ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೂ, ಅವುಗಳ ಪೈಕಿ ತಮಗೆ ಬೇಕಾದುದನ್ನು ಬ್ರೌಸ್ ಮಾಡಬಹುದು.

ಗೂಗಲ್‌ಗೆ ಲಾಗಿನ್ ಆಗಿ ಇಂಟರ್ನೆಟ್ ಬ್ರೌಸ್ ಮಾಡುವವರ ಬ್ರೌಸಿಂಗ್ ಹವ್ಯಾಸಗಳ ಆಧಾರದಲ್ಲಿ ಕಂಟೆಟ್‌ಗಳನ್ನು ಈ ಫೀಚರ್ ಡೌನ್‌ಲೋಡ್ ಮಾಡಿಟ್ಟುಕೊಳ್ಳುತ್ತದೆ.  ಆ ಮೂಲಕ, ಇಂಟರ್ನೆಟ್ ಇಲ್ಲದಿದ್ದರೂ ತಮಗೆ ಬೇಕಾದುದನ್ನು ನೋಡಬಹುದು, ಓದಬಹುದು. ಈ ಫೀಚರ್ ಇತ್ತೀಚಿಗಿನ ಕ್ರೋಮ್ ಬ್ರೌಸರ್‌ನಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ.

ಬಳಕೆದಾರರು ಇರುವ ಸ್ಥಳ ಹಾಗೂ ಹವ್ಯಾಸದ ಆಧಾರದಲ್ಲಿ ಈ ಹೊಸ ಫೀಚರ್ ಕಾರ್ಯನಿರ್ವಹಿಸುವುದರಿಂದ, ಲಭ್ಯವಾಗುವ ಕಂಟೆಂಟ್ ಬಳಕೆದಾರರಿಗೆ ಆ ಸಮಯಕ್ಕೆ ಅಗತ್ಯವಾಗಿರುವಂತಹದ್ದು ಎಂದು ಹೇಳಲಾಗದು.  ಆದರೆ, ಪ್ರಯಾಣದಂತಹ ಸಂದರ್ಭದಲ್ಲಿ ಏನಾದರೂ ಓದಬೇಕು ಎಂದು ಬಯಸುವವರಿಗೆ ಈ ಫೀಚರ್ ಬಹಳ ಉಪಯುಕ್ತಕಾರಿಯಾಗಿದೆ.

ಇಂಟರ್ನೆಟ್ ಸೌಲಭ್ಯ ಸಮರ್ಪಕವಾಗಿರದ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ, ಇಂಟರ್ನೆಟ್ ಲಭ್ಯತೆಯನ್ನು ಹೆಚ್ಚಿಸುವತ್ತ ಗೂಗಲ್ ಕೆಲಸ ಮಾಡುತ್ತಿದೆ.  ಹೊಸ ‘ಡೇಟಾ ಸೇವರ್’ ಫೀಚರ್ ಅಂತಹ ಪ್ರಯತ್ನಗಳಲ್ಲೊಂದು.  ಈ ಫೀಚರ್‌ನಿಂದ ಬಳಕೆದಾರ ಶೇ.70 ರಷ್ಟು ಡೇಟಾವನ್ನು ಉಳಿಸುತ್ತದೆ ಎಂದು ಹೇಳಲಾಗಿದೆ. 

ಡೇಟಾ ಸೇವರ್ ಮೋಡ್ ಸಕ್ರಿಯವಾಗಿದ್ದಾಗ, ಸಂಬಂಧಪಟ್ಟ ಕಂಟೆಂಟ್‌ಗಳನ್ನು ಕ್ರೋಮ್ ಬ್ರೌಸರ್ ಡೌನ್‌ಲೋಡ್ ಮಾಡಿಕೊಳ್ಳುತ್ತದೆ. ಗೂಗಲ್ ಸರ್ವರ್ ಮೂಲಕ ಕಂಟೆಟ್ ಬಳಕೆದಾರರ ಉಪಕರಣಕ್ಕೆ ಡೌನ್‌ಲೋಡ್ ಆಗುವುದರಿಂದ, ಅಲ್ಲಿ ಅದು ಕಂಪ್ರೆಸ್ ಆಗುತ್ತದೆ.  ಆ ಮೂಲಕ ಬಳಕೆದಾರರ ಡೇಟಾ ಉಳಿತಾಯವಾಗುತ್ತದೆ. 

ಈಗಾಗಲೇ ಗೂಗಲ್‌ನ ಜನಪ್ರಿಯ ವಿಡಿಯೋ ತಾಣವಾಗಿರುವ ಯೂಟ್ಯೂಬ್‌ನಲ್ಲಿ ಆಫ್‌ಲೈನ್ ವೀಕ್ಷಣೆಯ ಆಯ್ಕೆ ಬಳಕೆದಾರರಿಗೆ ಇದೆ. ಆದರೆ ಇಲ್ಲಿ ಬಳಕೆದಾರರು ಖುದ್ದಾಗಿ ನಿರ್ದಿಷ್ಟ ವಿಡಿಯೋವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.   

Follow Us:
Download App:
  • android
  • ios