ವರ್ಷದಲ್ಲಿ ಕೈ ಸೇರಿದ ಬಜೆಟ್‌ಗೆ ತಕ್ಕ Top 5 ಗ್ಯಾಜೆಟ್‌ಗಳು
2018 ಗ್ಯಾಜೆಟ್‌ಗಳ ಸುವರ್ಣ ಯುಗವೆಂದೇ ಹೇಳಬಹುದು. ಈ ವರ್ಷದಲ್ಲಿ ನಮ್ಮ ಮನ, ಮನೆ ಸೇರಿರುವ ಗ್ಯಾಜೆಟ್‌ಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಅವುಗಳ ವಿಶೇಷ, ಅವುಗಳ್ಯಾವು? ಇಲ್ಲಿದೆ ವಿವರ:
ಬದುಕು ಆಧುನಿಕಗೊಳ್ಳುತ್ತಾ ಸಾಗಿದಂತೆ ದಿನಕ್ಕೊಂದು ಹೊಸ ಹೊಸ ಗ್ಯಾಜೆಟ್‌ಗಳು ಬಂದು ಬದುಕನ್ನು ಸರಳ ಮಾಡುತ್ತಿವೆ. ಮನರಂಜನೆ ಎಂಬುದು ಕಣ್ಣ ಮುಂದೆ ಹಾಸಿಕೊಂಡು ನಿಂತಿದೆ. ಬೇಕು ಎಂದದ್ದು ತತ್‌ಕ್ಷಣದಲ್ಲಿಯೇ ಬೆರಳ ತುದಿಯಲ್ಲಿ ದಕ್ಕುವಂತಾಗಿದೆ. ಈಗ ವರ್ಷದ ಕೊನೆಗೆ ಬಂದು ತಲುಪಿದ್ದೇವೆ. ಹಿಂದಿರುಗಿ ನೋಡಿದರೆ ಸಾಕಷ್ಟುಹೊಸ ಹೊಸ ಗ್ಯಾಜೆಟ್‌ಗಳು ನಮ್ಮ ನಿತ್ಯ ಬಳಕೆಯಲ್ಲಿ ಒಂದಾಗಿವೆ. ಜಾಗತಿಕ ಮಟ್ಟದಲ್ಲಿ ನೋಡಿದರೆ ಇವುಗಳ ಸಂಖ್ಯೆ ಅತ್ಯಧಿಕ. ಭಾರತೀಯರಾದ ನಾವು ಯಾವೆಲ್ಲಾ ಗ್ಯಾಜೆಟ್‌ಗಳನ್ನು ಒಪ್ಪಿಕೊಂಡಿರುವ, ಅಪ್ಪಿಕೊಂಡಿರುವ ಟಾಪ್ ಫೈವ್ ಗ್ಯಾಜೆಟ್‌ಗಳಿವು.
ಯಾರ ಹಂಗೂ ಇಲ್ಲದೇ ಬದುಕು ಮಾಡುತ್ತೇನೆ ಎಂದು ಧೈರ್ಯವಾಗಿ ಹೇಳುವ ಕಾಲದಲ್ಲಿ ನಾವೀಗ ಇಲ್ಲ. ಯಾಕೆಂದರೆ ನಮ್ಮ ನಿತ್ಯದ ಜೀವನದಲ್ಲಿ ಗ್ಯಾಜೆಟ್‌ಗಳು ಎನ್ನುವ ಸಹಾಯಕರು ದಿನಕ್ಕೊಬ್ಬರಂತೆ ಬಂದು ಸೇರುತ್ತಿದ್ದಾರೆ. ಕೈಯಲ್ಲಿ ಇರುವ ಮೊಬೈಲ್‌ನಿಂದ ಹಿಡಿದು, ಟಿವಿ, ಕ್ಯಾಮರಾ, ಡ್ರೋನ್‌ಗಳು, ಸ್ಮಾರ್ಟ್ ವಾಚ್‌ಗಳು, ಐಪ್ಯಾಡ್‌ಗಳೆಲ್ಲವೂ ಇಂದು ಬದುಕಿನ ಭಾಗ. ಹಾಗೆ ನೋಡಿದರೆ 2018 ಈ ಗ್ಯಾಜೆಟ್‌ಗಳ ಸುವರ್ಣ ಯುಗವೆಂದೇ ಹೇಳಬಹುದು. ಮುಂದಕ್ಕೂ ಸ್ವರ್ಣ ದಾರಿ ಇದೆ. ಅದಕ್ಕೂ ಮೊದಲು ನಡೆದು ಬಂದ ದಾರಿಯಲ್ಲಿ ನಮ್ಮ ಮನ, ಮನೆ ಸೇರಿರುವ ಗೆಜೆಟ್‌ಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಅವುಗಳ ವಿಶೇಷ, ಅವುಗಳ್ಯಾವು ಎನ್ನುವ ವಿವರ ಕೆಳಗಿದೆ.
ಇದನ್ನೂ ಓದಿ: ಇನ್ಮುಂದೆ ಗೂಗಲ್‌ನಲ್ಲಿ ‘ಇದನ್ನು’ ಹುಡುಕಿದರೆ ಕಥೆ ಅಷ್ಟೇ...
ಸ್ಮಾರ್ಟ್ ವಾಚ್ ಸೀರಿಸ್:
ಕಾಲ ಬಂದರೆ ಜೇಬಲ್ಲೋ, ಎಲ್ಲೋ ದೂರದಲ್ಲಿ ಇರುವ ಮೊಬೈಲ್ ಹುಡುಕಿಕೊಂಡು ಹೋಗಿ ಯಾರು ಎಂದು ನೋಡುವ ಅವಶ್ಯಕತೆ ಇಲ್ಲ, ಕೈಲೊಂದು ಸ್ಮಾರ್ಟ್ ವಾಚ್ ಇದ್ದರೆ. ಬ್ಲೂಟೂತ್ ಮೂಲಕ ಸ್ಮಾರ್ಟ್ ಫೋನ್ ಜೊತೆ ಕನೆಕ್ಟ್ ಮಾಡಿಕೊಂಡರೆ ಈ ಸ್ಮಾರ್ಟ್ ವಾಚ್ ನಮ್ಮ ಕೆಲಸಗಳನ್ನು ಮತ್ತಷ್ಟು ಸ್ಮಾರ್ಟ್ ಮಾಡುತ್ತದೆ. ಅಷ್ಟೇ ಅಲ್ಲ, ನಾವು ನಡೆಯುವ ಹೆಜ್ಜೆಗಳು, ದೇಹಕ್ಕೆ ಬೇಕಾದ ವ್ಯಾಯಾಮ, ಎಷ್ಟುಕ್ಯಾಲರಿ ಬರ್ನ್ ಆಗಿದೆ ಎನ್ನುವ ಲೆಕ್ಕವೆಲ್ಲವನ್ನೂ ನೀಡುವ ಕೆಲಸ ಮಾಡುತ್ತವೆ ಈ ಸ್ಮಾರ್ಟ್ ವಾಚ್‌ಗಳು. ಹಾಗಾಗಿ ಈ ವರ್ಷ ಹೆಚ್ಚು ಮಾರಾಟವಾದ ಗ್ಯಾಜೆಟ್‌ಗಳ ಪಟ್ಟಿಯಲ್ಲಿ ಆ್ಯಪಲ್, ಫಾಸ್ಟ್‌ಟ್ರ್ಯಾಕ್, ಎಂಐ ಮೊದಲಾದ ಸ್ಮಾರ್ಟ್ ವಾಚ್‌ಗಳು ಸೇರಿವೆ.
ಡ್ರೋನ್:
ಸಣ್ಣ ಬಜೆಟ್‌ನ ಸಿನಿಮಾದಿಂದ ಹಿಡಿದು, ದೊಡ್ಡ ಬಜೆಟ್‌ನ ಸಿನಿಮಾಗಳವರೆಗೂ ಇಂದು ಡ್ರೋನ್‌ಗಳ ಬಳಕೆ ಹೆಚ್ಚಾಗಿದೆ. ಇದಿಷ್ಟೇ ಅಲ್ಲದೇ ಮದುವೆ, ಶುಭ ಸಮಾರಂಭಗಳ ಚಿತ್ರೀಕಣರಕ್ಕೂ ಡ್ರೋನ್ ಎಂಬ ಆಕಾಶ ಕಣ್ಣು ಬೇಕೇ ಬೇಕು. ಅದಕ್ಕಾಗಿಯೇ ಎಲ್ಲಾ ಸ್ಟುಡಿಯೋಗಳು, ವೈಯಕ್ತಿಕವಾಗಿಯೂ ಡ್ರೋನ್‌ಗಳು ಹೆಚ್ಚು ಓಡಾಡಿವೆ. ಪ್ರಸಿದ್ಧ ಡ್ರೋನ್ ಉತ್ಪಾದಕ ಸಂಸ್ಥೆ ಡಿಜೆಐ ಮ್ಯಾವಿಕ್ ಝೂಮ್ ಎನ್ನುವ ಸಿಂಪಲ್ ಆದ ಡ್ರೋನ್ ಬಿಟ್ಟಿದೆ ಇದು ಗಂಟೆಗೆ 45 ಕಿಮೀ ವೇಗದಲ್ಲಿ ಚಲಿಸುವುದರ ಜೊತೆಗೆ 31 ನಿಮಿಷಗಳ ಬ್ಯಾಟರಿ ಬ್ಯಾಕ್‌ಅಪ್ ಸಿಗುವುದು ವಿಶೇಷ.
ಇದನ್ನೂ ಓದಿ: OnePlusನ ಮೊದಲ 5G ಸ್ಮಾರ್ಟ್‌ಫೋನ್ ಫೋಟೋ ಲೀಕ್! ಹೀಗಿದೆ 'OnePlus 7'
ಸ್ಪೀಕರ್‌ಗಳು:
ಮನೆಗೆಲ್ಲಾ ಅತ್ಯಂತ ಸುಧಾರಿತ ಟಿವಿಗಳು ಕಾಲಿಟ್ಟಬಳಿಕ ಅದಕ್ಕೆ ತಕ್ಕಂತಹ ಸೌಂಡ್ ಫೀಲ್ ಸಿಕ್ಕದಿದ್ದರೆ ಹೇಗೆ ಹೇಳಿ? ಅದಕ್ಕಾಗಿಯೇ ಸಾಕಷ್ಟುಕಂಪನಿಗಳು ಕಡಿಮೆ ಗಾತ್ರದಲ್ಲಿಯೇ 5ಡಿ ಸೌಂಡ್ ಫೀಲ್ ನೀಡುವ ಸ್ಪೀಕರ್‌ಗಳನ್ನು ಮಾರುಕಟ್ಟೆಗೆ ಬಿಟ್ಟು ಸಾಕಷ್ಟುವರ್ಷಗಳೇ ಕಳೆದಿವೆ. ಈ ರೀತಿಯ ಸ್ಪೀಕರ್‌ಗಳು ಈ ವರ್ಷದಲ್ಲಿ ಹೆಚ್ಚು ಸೇಲ್ ಕಂಡ ಗ್ಯಾಜೆಟ್‌ಗಳಲ್ಲಿ ಒಂದು. ಪಿಲಿಫ್ಸ್, ಸೋನಿ, ಜೆಎಲ್‌ಬಿ ಮೊದಲಾದ ಕಂಪನಿಗಳ ಸೌಂಡ್ ಬಾಕ್ಸ್, ಸ್ಪೀಕರ್‌ಗಳು ಸಾಕಷ್ಟುವ್ಯವಹಾರ ಮಾಡಿಕೊಂಡಿವೆ.
ಅಮೆಜಾನ್ ಫೈರ್ ಸ್ಟಿಕ್:
ಡಿಶ್, ಕೇಬಲ್, ಸೆಟ್‌ಅಪ್ ಬಾಕ್ಸ್‌ಗಳ ಕಾಲ ಮುಗಿದಿದೆ. ಈಗ ಕಡಿಮೆ ದರದಲ್ಲಿ ಸಿನಿಮಾ, ಇಷ್ಟದ ಕಾರ್ಯಕ್ರಮಗಳನ್ನು ನೋಡುವುದು ಸಾಧ್ಯವಾಗಿದೆ. ಇದಕ್ಕೆ ಕಾರಣ ಅಮೆಜಾನ್ ಸೇರಿದಂತೆ ಕೆಲವಾರು ಆನ್‌ಲೈನ್ ತಾಣಗಳು. ಅಮೆಜಾನ್ ಫೈರ್ ಸ್ಟಿಕ್‌ಅನ್ನು ಒಮ್ಮೆ ಇನ್ವೆಸ್ಟ್ ಮಾಡಿ ಕೊಂಡುಕೊಂಡರೆ ಯಾವುದೇ ಶುಲ್ಕವಿಲ್ಲದೇ ಕೆಲವು ಚಾನೆಲ್‌ಗಳನ್ನು ನೋಡಬಹುದು. ನೆಟ್‌ಫ್ಲಿಕ್ಸ್ ಸೇರಿದಂತೆ ಕೆಲವು ಆನ್‌ಲೈನ್ ಚಾನೆಲ್‌ಗಳಲ್ಲಿ ರಿಜಿಸ್ಟರ್ ಮಾಡಿಕೊಂಡರೆ ಅವುಗಳನ್ನೂ ಅಗ್ಗದ ದರದಲ್ಲಿ ನೋಡಬಹುದು. ಇದೇ ಕಾರಣಕ್ಕೆ ಇಂದು ಅತಿ ಹೆಚ್ಚಾಗಿ ಅಮೆಜಾನ್ ಫೈರ್ ಸ್ಟಿಕ್‌ಗಳು ಸೇಲಾಗಿವೆ.
ಟ್ಯಾಬ್‌ಗಳು:
ಮೊಬೈಲ್‌ಗಳು ಎಲ್ಲಾ ಕಾಲಕ್ಕೂ ಅತಿ ಹೆಚ್ಚು ಮಾರಾಟ ಕಾಣುವ ಗ್ಯಾಜೆಟ್‌ಗಳು. ಅದಾದ ಮೇಲೆ ಟ್ಯಾಬ್‌ಗಳೂ ಕೂಡ ಜನರ ಮನ ಗೆದ್ದಿವೆ. ವಿವಿಧ ಉದ್ದೇಶಗಳಿಗೆ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಲ್ಲಿ ಆಗುವ ಕೆಲಸಗಳನ್ನು ಸುಲಭದಲ್ಲಿ ಮಾಡಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಇವುಗಳ ಬಳಕೆ ಹೆಚ್ಚುತ್ತಿದೆ. ಈ ವರ್ಷ 4Gಗೆ ಸಪೋರ್ಟ್ ಮಾಡುವ ಟ್ಯಾಬ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಕಂಡು ದಾಖಲೆ ಬರೆದಿವೆ. ಅದರಲ್ಲಿಯೂ ಆ್ಯಪಲ್ ಕಂಪನಿಯ ಐಪ್ಯಾಡ್‌ಗಳಿಗೆ ಹೆಚ್ಚಿನ ಡಿಮ್ಯಾಂಡ್. ಉಳಿದಂತೆ ಸ್ಯಾಮ್‌ಸಂಗ್, ಲೆನೊವೋಗಳಿಗೂ ಬೇಡಿಕೆ ಹೆಚ್ಚುತ್ತಲೇ ಇದೆ.
ಇವು ಟಾಪ್ ಫೈವ್ ಗ್ಯಾಜೆಟ್‌ಗಳ ವಿಚಾರ. ಇದರ ಹೊರತಾಗಿಯೂ ಕ್ಯಾಮರಾ, ಲ್ಯಾಪ್‌ಟಾಪ್‌ಗಳು, ಸ್ಮಾಟ್ ಪೆನ್, ಟ್ರಿಮ್ಮರ್, ಹೇರ್ ಡ್ರೈಯ್ಯರ್ ಮೊದಲಾದವುಗಳಿಗೂ ಮಾರುಕಟ್ಟೆಹೆಚ್ಚಾಗುತ್ತಲೇ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಗ್ಯಾಜೆಟ್‌ಗಳಿಗೆ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆ ವಿದೇಶಿ ಕಂಪನಿಗಳನ್ನು ಆಸೆಗಣ್ಣಿನಿಂದ ಇತ್ತ ಬರುವಂತೆ ಮಾಡುತ್ತಿವೆ. ಇದರ ಪರಿಣಾಮವಾಗಿ ಸ್ಪರ್ಧೆ ಹೆಚ್ಚಿ ದರವೂ ಕಡಿಮೆಯಾಗುತ್ತಿರುವುದು ಹೆಚ್ಚು ಗ್ಯಾಜೆಟ್‌ಗಳ ಬಳಕೆಗೆ ಮತ್ತೊಂದು ಕಾರಣ.