ಸ್ಯಾನ್‌ಓಸೆ[ಮೇ.03]: ಫೇಸ್‌ಬುಕ್‌ನಲ್ಲಿ ಯಾರನ್ನೋ ನೋಡುತ್ತೀರಿ. ಇಷ್ಟಪಡುತ್ತೀರಿ. ಇದನ್ನು ಅವರಿಗೆ ತಿಳಿಸುವುದು ಹೇಗೆ ಎಂಬ ಗೊಂದಲದಲ್ಲಿದ್ದೀರಾ? ನಿಮಗಾಗಿ ಫೇಸ್‌ಬುಕ್‌ ರಹಸ್ಯ ಆಯ್ಕೆಯೊಂದನ್ನು ನೀಡುತ್ತಿದೆ. ಅದುವೇ- ‘ಸೀಕ್ರೆಟ್‌ ಕ್ರಶ್‌’!

ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ, ವಾಸ್ತವಾಂಶಗಳನ್ನು ತಿರುಚುತ್ತಿದೆ ಎಂಬ ಆರೋಪಗಳಿಗೆ ಗುರಿಯಾಗಿರುವ, 230 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇದೀಗ ಹೊಸ ಬದಲಾವಣೆಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಹೊಸ ಅಂಶಗಳನ್ನು ಮಂಗಳವಾರ (ಏ.30) ಪ್ರಕಟಿಸಲಾಗಿದೆ. ಮೊದಲು ಮೊಬೈಲ್‌ ಆ್ಯಪ್‌ನಲ್ಲಿ ಬದಲಾವಣೆಗಳು ಕಾಣುತ್ತವೆ. ನಂತರ ವೆಬ್‌ಸೈಟ್‌ಗೂ ವಿಸ್ತರಣೆಯಾಗುತ್ತವೆ. ನೀವು ಬಳಸುತ್ತಿರುವ ಆ್ಯಪ್‌ ಬದಲಾವಣೆಯಾಗಿದೆಯೇ ಎಂಬುದನ್ನು ಗುರುತು ಹಿಡಿಯಲು ಸುಲಭ ವಿಧಾನ ಎಂದರೆ, ಈ ಹಿಂದಿನಂತೆ ಫೇಸ್‌ಬುಕ್‌ನಲ್ಲಿ ನೀಲಿ ಬಣ್ಣ ಕಾಣುವುದಿಲ್ಲ.

ಡೇಟಿಂಗ್‌, ಸ್ನೇಹಿತರನ್ನು ಮಾಡಿಕೊಳ್ಳುವುದು ಹಾಗೂ ಸ್ಥಳೀಯವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಅವಕಾಶ ಕಲ್ಪಿಸುವ ಮೂಲಕ ನಿಜ ಜೀವನದಲ್ಲಿ ಜನರನ್ನು ಬೆಸೆಯುವಂತಹ ಕೆಲಸಗಳಿಗೆ ಮತ್ತಷ್ಟುಒತ್ತು ನೀಡಲು ಫೇಸ್‌ಬುಕ್‌ ನಿರ್ಧರಿಸಿದೆ. ಉದಾಹರಣೆಗೆ, ನೀವು ಶ್ವಾನಪ್ರೇಮಿಯಾಗಿದ್ದರೆ, ವಿವಿಧ ಕಮ್ಯುನಿಟಿಗಳಲ್ಲಿರುವ ಶ್ವಾನಪ್ರೇಮಿಗಳನ್ನು ಫೇಸ್‌ಬುಕ್‌ ನಿಮಗೆ ಪರಿಚಯಿಸುತ್ತದೆ. ರಾಜಕೀಯವಾಗಿ ವಿರೋಧಿ ನಿಲುವು ಹೊಂದಿರುವ ವ್ಯಕ್ತಿಗಳು ಪರಸ್ಪರ ಒಗ್ಗೂಡದಂತೆ ಮಾಡಲು ‘ಫಿಲ್ಟರ್‌ ಬಬಲ್ಸ್‌’ ಬಳಸುತ್ತಿದ್ದ ಫೇಸ್‌ಬುಕ್‌, ಇಂತಹ ಕಾರ್ಯಗಳಿಗೆ ಅದನ್ನು ಕೈಬಿಡುತ್ತದೆ.

‘ಮೀಟ್‌ ನ್ಯೂ ಫ್ರೆಂಡ್ಸ್‌’ ಆಯ್ಕೆಯನ್ನು ಒದಗಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಸೀಕ್ರೆಟ್‌ ಕ್ರಶ್‌’ ಎಂಬ ಆಯ್ಕೆ ಭಾರಿ ಸದ್ದು ಮಾಡುತ್ತಿದೆ. ಫೇಸ್‌ಬುಕ್‌ನಲ್ಲಿ ನೋಡಿದ ಯಾವುದೋ ವ್ಯಕ್ತಿ ನಿಮಗೆ ಇಷ್ಟವಾಯಿತು ಎಂದರೆ, ಅವರಿಗೆ ಈ ಆಯ್ಕೆ ಬಳಸಿ ಸಿಗ್ನಲ್‌ ಕಳುಹಿಸಬಹುದು. ಆ ಕಡೆಯಿಂದಲೂ ಸಂದೇಶ ಬಂದರೆ ಅವರ ‘ಪ್ರೈವೇಟ್‌ ಕ್ರಶ್‌ ಲಿಸ್ಟ್‌’ನಲ್ಲಿ ಗೋಚರವಾಗುತ್ತದೆ. ಹೊಸ ಬದಲಾವಣೆಗಳು ಮಂಗಳವಾರದಿಂದ ಅಮೆರಿಕದಲ್ಲಿ ಆ್ಯಪ್‌ನಲ್ಲಿ ಲಭ್ಯವಾಗಿವೆ.