ವಾಷಿಂಗ್ಟನ್‌[ಜು.14]: ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಮಾಡಿರುವ ಹಾಗೂ ದತ್ತಾಂಶ ಸಂರಕ್ಷಣೆಯಲ್ಲಿ ವಿಫಲವಾಗಿರುವ ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಅಮೆರಿಕ ಬರೋಬ್ಬರಿ 34 ಸಾವಿರ ಕೋಟಿ ರು. ದಂಡ ವಿಧಿಸಲು ಮುಂದಾಗಿದೆ.

2018ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಫೇಸ್‌ಬುಕ್‌ ಬಳಕೆದಾರರ ಖಾಸಗಿ ಮಾಹಿತಿಯನ್ನು ಲಂಡನ್‌ ಮೂಲದ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆ ಅಕ್ರಮವಾಗಿ ಗಳಿಸಿಕೊಂಡ ಪ್ರಕರಣ ಸಂಬಂಧ ಈ ದಂಡ ಹೇರಲಾಗುತ್ತಿದೆ. ಅಮೆರಿಕದ ಕೇಂದ್ರೀಯ ವ್ಯಾಪಾರ ಆಯೋಗ (ಎಫ್‌ಟಿಸಿ) 3-2 ಮತಗಳ ಮೂಲಕ ಫೇಸ್‌ಬುಕ್‌ಗೆ 5 ಬಿಲಿಯನ್‌ ಡಾಲರ್‌ (34 ಸಾವಿರ ಕೋಟಿ ರು.) ದಂಡ ವಿಧಿಸಲು ನಿರ್ಧಾರ ಕೈಗೊಂಡಿದೆ. ಅಮೆರಿಕದ ಕಾನೂನು ಇಲಾಖೆ ಒಪ್ಪಿಗೆ ಸಿಕ್ಕ ಬಳಿಕ ಇದು ಅಂತಿಮವಾಗಲಿದೆ. ಕಂಪನಿಯೊಂದಕ್ಕೆ ಎಫ್‌ಟಿಸಿ ಇಷ್ಟೊಂದು ದಂಡ ವಿಧಿಸಿದ್ದು ಇದೇ ಮೊದಲು.

ಕಳೆದ ವರ್ಷ 22 ಬಿಲಿಯನ್‌ ಡಾಲರ್‌ (1.5 ಲಕ್ಷ ಕೋಟಿ ರು.) ಲಾಭ ಗಳಿಸಿರುವ ಕಂಪನಿಗೆ ಕೇವಲ 5 ಬಿಲಿಯನ್‌ ಡಾಲರ್‌ ದಂಡ ವಿಧಿಸಿದ್ದಕ್ಕೆ ಟೀಕೆ ಹಾಗೂ ವ್ಯಂಗ್ಯಗಳು ಕೇಳಿಬಂದಿವೆ. ಬಳಕೆದಾರರ ಖಾಸಗಿತನ ಉಲ್ಲಂಘನೆ ಮಾಡಿದ ಸಂಬಂಧ ತನ್ನ ಮೇಲೆ ದಂಡ ಪ್ರಯೋಗವಾಗಬಹುದು ಎಂದು ಮೊದಲೇ ಊಹಿಸಿದ್ದ ಫೇಸ್‌ಬುಕ್‌ 3 ಬಿಲಿಯನ್‌ ಡಾಲರ್‌ (20 ಸಾವಿರ ಕೋಟಿ ರು.) ಮೀಸಲಿಟ್ಟಿದೆ. ಹೀಗಾಗಿ ಅಮೆರಿಕ ವಿಧಿಸಿರುವ ದಂಡ ಆ ಕಂಪನಿಯ ಮೇಲೆ ಏನೂ ಪರಿಣಾಮ ಬೀರದು ಎಂದು ಹೇಳಲಾಗುತ್ತಿದೆ.