ಬೆಂಗಳೂರು: ಫ್ರೀ ಇಂಟರ್ನೆಟ್ ಎಂಬ ಹೊಸ ಕಾನ್ಸೆಪ್ಟ್'ವೊಂದಿಗೆ ಸುದ್ದಿಯಲ್ಲಿದ್ದ ಫೇಸ್ಬುಕ್ ಈಗ ಹೊಸದೊಂದು ಐಡಿಯಾದೊಂದಿಗೆ ಅಖಾಡಕ್ಕೆ ಇಳಿದಿದೆ. ಫೇಸ್ಬುಕ್'ನ ವೈ-ಫೈ ಸೇವೆ ಭಾರತದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಕೆಲ ವರದಿಗಳ ಪ್ರಕಾರ, ಫೇಸ್ಬುಕ್ ಸಂಸ್ಥೆಯು ಭಾರತದ ಹಲವಾರು ಗ್ರಾಮೀಣ ಸ್ಥಳಗಳಲ್ಲಿ ಈ ವೈ-ಫೈ ಸೇವೆಯನ್ನು ಪರೀಕ್ಷಿಸುತ್ತಿದೆ. ಇದು ವರ್ಕೌಟ್ ಆದರೆ, ಶೀಘ್ರದಲ್ಲೇ ದೇಶಾದ್ಯಂತ ವೈ-ಫೈ ಕ್ರಾಂತಿ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.

ಏನಿದು ಎಕ್ಸ್'ಪ್ರೆಸ್ ವೈ-ಫೈ?
ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಸಂಸ್ಥೆಗಳೊಂದಿಗೆ ಫೇಸ್ಬುಕ್ ಒಪ್ಪಂದ ಮಾಡಿಕೊಂಡು ಎಕ್ಸ್'ಪ್ರೆಸ್ ವೈ-ಫೈ ನೀಡಲಿದೆ. ಜನರಿಗೆ ಇದು ಉಚಿತವಾಗಿ ಸಿಗುವುದಿಲ್ಲವಾದರೂ ಈಗಿರುವುದಕ್ಕಿಂತ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆ ಪಡೆಯಲು ಸಾಧ್ಯವಿದೆ. ಗ್ರಾಮೀಣ ಭಾಗಗಳ ಮೇಲೆ ಹೆಚ್ಚು ಫೋಕಸ್ ಮಾಡುವ ಉದ್ದೇಶವಿದೆಯಾದ್ದರಿಂದ, ಎಕ್ಸ್'ಪ್ರೆಸ್ ವೈ-ಫೈನಿಂದ ಇಂಟರ್ನೆಟ್ ರೀಚ್ ಹೆಚ್ಚಾಗಲಿದೆ. ಇದೇ ವೇಳೆ, ಫೇಸ್ಬುಕ್'ನ ಪ್ರಾಯೋಗಿಕ ಲೇಸರ್ ಡ್ರೋನ್ ಇಂಟರ್ನೆಟ್ ತಂತ್ರಜ್ಞಾನಕ್ಕೂ ಎಕ್ಸ್'ಪ್ರೆಸ್ ವೈ-ಫೈ ಇಂಟರ್ನೆಟ್'ಗೂ ಸಂಬಂಧವಿಲ್ಲವೆಂಬ ಸ್ಪಷ್ಟನೆಯೂ ಕೇಳಿಬಂದಿದೆ. ಈ ಬಗ್ಗೆ ಹೆಚ್ಚಿನ ವಿವರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.