ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಲಾದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಒಪ್ಪೊ ಇಂಡಿಯಾ, ಈ ಆರೋಪಗಳು ವಿಭಿನ್ನ ದೃಷ್ಟಿಕೋನ ಹೊಂದಿದೆ ಕಾನೂನು ಪರಿಹಾರಗಳು ಸೇರಿದಂತೆ ಸೂಕ್ತ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ತಿಳಿಸಿದೆ. 

ನವದೆಹಲಿ (ಜುಲೈ 13): ಬರೋಬ್ಬರಿ 4389 ಕೋಟಿ ರೂಪಾಯಿ ಆಮದು ಸುಂಕ ವಂಚನೆ ಆರೋಪದ ಕುರಿತಾಗಿ ಚೀನಾ ಮೂಲದ ಮೊಬೈಲ್‌ ಫೋನ್‌ ತಯಾರಿಕಾ ಕಂಪನಿ ಒಪ್ಪೊದ ಭಾರತೀಯ ಘಟಕಕ್ಕೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಬುಧವಾರ ತಿಳಿಸಿದೆ. ಕೆಲವು ಆಮದುಗಳು ಮತ್ತು ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೆ ರಾಯಧನ ಮತ್ತು ಪರವಾನಗಿ ಶುಲ್ಕಗಳ ರವಾನೆಗಳ ವಿವರಣೆಯಲ್ಲಿ ಉದ್ದೇಶಪೂರ್ವಕ ತಪ್ಪು ಹೇಳಿಕೆಯನ್ನು ಕಂಪನಿ ಸೂಚಿಸಿದೆ. ಕಂಪನಿಯ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುವ ವೇಳೆ ಇದು ಪತ್ತೆಯಾಗಿದೆ. ಹಾಗಾಗಿ ಜುಲೈ 8 ರಂದು ಚೀನಾ ಮೂಲದ ಒಪ್ಪೊ ಇಂಡಿಯಾ ಕಂಪನಿಯ ಮೇಲೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಗುವಾಂಗ್‌ಡಾಂಗ್ ಒಪ್ಪೊ ಮೊಬೈಲ್ ಟೆಲಿಕಮ್ಯುನಿಕೇಶನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಒಪ್ಪೊ ಮೊಬೈಲ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ತನಿಖೆಯ ಸಮಯದಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯ ಸುಮಾರು ₹ 4,389 ಕೋಟಿ ಕಸ್ಟಮ್ಸ್ ಸುಂಕ ವಂಚನೆಯನ್ನು ಪತ್ತೆ ಮಾಡಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನೋಟಿಸ್‌ಗೆ ಉತ್ತರ ನೀಡ್ತೇವೆ: ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಒಪ್ಪೊ (Oppo India) ಇಂಡಿಯಾ, ಶೋಕಾಸ್‌ ನೋಟಿಸ್‌ನಲ್ಲಿ (SCN) ಉಲ್ಲೇಖಿಸಲಾದ ಆರೋಪಗಳ ಬಗ್ಗೆ ಇವುಗಳು ವಿಭಿನ್ನ ದೃಷ್ಟಿಕೋನ ಹೊಂದಿದೆ ಕಾನೂನು ಪರಿಹಾರಗಳು ಸೇರಿದಂತೆ ಸೂಕ್ತ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ತಿಳಿಸಿದೆ. ಶೋಕಾಸ್‌ ನೋಟಿಸ್‌ನಲ್ಲಿ ಉಲ್ಲೇಖಿಸಲಾದ ಆರೋಪಗಳ ಬಗ್ಗೆ ನಾವು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದೇವೆ. ಇದು ಉದ್ಯಮ-ವ್ಯಾಪಿ ಸಮಸ್ಯೆಯಾಗಿದ್ದು, ಅನೇಕ ಕಾರ್ಪೊರೇಟ್‌ಗಳು ಈ ಕುರಿತಾಗಿ ಕೆಲಸ ಮಾಡುತ್ತಿವೆ. ಒಪ್ಪೊ ಇಂಡಿಯಾ, ಡಿಆರ್‌ಐಯಿಂದ (Directorate of Revenue Intelligence ) ಸ್ವೀಕರಿಸಿದ ಎಸ್‌ಸಿಎನ್ಅನ್ನು ಪರಿಶೀಲಿಸುತ್ತಿದೆ ಮತ್ತು ನಾವು ನೋಟಿಸ್‌ಗೆ ಉತ್ತರ ನೀಡಲಿದ್ದೇವೆ. ಕಡೆಗೆ, ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳೊಂದಿಗೆ ಮತ್ತಷ್ಟು ಕೆಲಸ ಮಾಡಲಾಗುವುದು ಎಂದು ಹೇಳಿದೆ.

"ಒಪ್ಪೊ ಇಂಡಿಯಾ ಒಂದು ಜವಾಬ್ದಾರಿಯುತ ಕಾರ್ಪೊರೇಟ್ ಮತ್ತು ವಿವೇಕಯುತ ಕಾರ್ಪೊರೇಟ್ ಆಡಳಿತದ ಚೌಕಟ್ಟನ್ನು ನಂಬುತ್ತದೆ. ಒಪ್ಪೊ ಇಂಡಿಯಾ ಕಾನೂನಿನ ಅಡಿಯಲ್ಲಿ ಒದಗಿಸಲಾದ ಯಾವುದೇ ಪರಿಹಾರಗಳನ್ನು ಒಳಗೊಂಡಂತೆ ಈ ನಿಟ್ಟಿನಲ್ಲಿ ಅಗತ್ಯವಿರುವಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಒಪ್ಪೊ ಇಮೇಲ್ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಹಲವು ವಿಧದ ಬ್ರ್ಯಾಂಡ್‌ಗಳು: ಒಪ್ಪೊ ಇಂಡಿಯಾ ಭಾರತದಾದ್ಯಂತ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಅದರ ಬಿಡಿಭಾಗಗಳ ಉತ್ಪಾದನೆ, ಜೋಡಣೆ, ಸಗಟು ವ್ಯಾಪಾರ, ವಿತರಣೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಇದು ಒಪ್ಪೊ, ಒನ್‌ ಪ್ಲಸ್‌ (One Plus) ಮತ್ತು ರಿಯಲ್‌ಮೀ (Realme) ಸೇರಿದಂತೆ ವಿವಿಧ ಬ್ರಾಂಡ್‌ಗಳ ಮೊಬೈಲ್ ಫೋನ್‌ಗಳಲ್ಲಿ ವ್ಯವಹರಿಸುತ್ತದೆ.

ಅನರ್ಹ ಸುಂಕ ವಿನಾಯಿತಿ ಪಡೆದ್ದ ಒಪ್ಪೊ: ತನಿಖೆಯ ಸಮಯದಲ್ಲಿ, ಒಪ್ಪೊ ಇಂಡಿಯಾದ ಕಚೇರಿ ಆವರಣದಲ್ಲಿ ಮತ್ತು ಅದರ ಪ್ರಮುಖ ನಿರ್ವಹಣಾ ಉದ್ಯೋಗಿಗಳ ನಿವಾಸಗಳಲ್ಲಿ ಡಿಆರ್‌ಐಯಿಂದ (DRI) ಶೋಧಗಳನ್ನು ನಡೆಸಲಾಯಿತು, ಇದು ತಯಾರಿಕೆಯಲ್ಲಿ ಬಳಕೆಗಾಗಿ ಆಮದು ಮಾಡಿಕೊಳ್ಳಲಾದ ಕೆಲವು ವಸ್ತುಗಳ ವಿವರಣೆಯಲ್ಲಿ ಉದ್ದೇಶಪೂರ್ವಕ ತಪ್ಪು ಹೇಳಿಕೆಯನ್ನು ನೀಡಿದೆ. ಈ ತಪ್ಪು ಘೋಷಣೆಯಿಂದಾಗಿ ಒಪ್ಪೊ ಇಂಡಿಯಾ ಕಂಪನಿಯು ಅಂದಾಜು 2981 ಕೋಟಿ ರೂಪಾಯಿಗಳ ಅನರ್ಹ ಸುಂಕ ವಿನಾಯಿತಿಯ ಪ್ರಯೋಜನಗಳನ್ನು (ineligible duty exemption benefits ) ಪಡೆದುಕೊಂಡಿದೆ. ಕಂಪನಿಯ ಹಿರಿಯ ನಿರ್ವಹಣಾ ಉದ್ಯೋಗಿಗಳು ಮತ್ತು ದೇಶೀಯ ಪೂರೈಕೆದಾರನ್ನು ಈ ಬಗ್ಗೆ ಡಿಆರ್‌ಐ ಪ್ರಶ್ನೆ ಮಾಡಿದೆ. ಆಮದು ಮಾಡಿಕೊಳ್ಳುವ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಮುಂದೆ ತಪ್ಪು ವಿವರಣೆಯನ್ನು ಸಲ್ಲಿಸಿರುವುದನ್ನು ಇವರು ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಸ್ವಾಮ್ಯದ ತಂತ್ರಜ್ಞಾನ/ಬ್ರಾಂಡ್/ಐಪಿಆರ್ ಲೈಸೆನ್ಸ್ ಇತ್ಯಾದಿಗಳ ಬಳಕೆಗೆ ಬದಲಾಗಿ ಚೀನಾ ಮೂಲದ ಕಂಪನಿಗಳು ಸೇರಿದಂತೆ ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೆ 'ರಾಯಧನ' ಮತ್ತು 'ಪರವಾನಗಿ ಶುಲ್ಕ' ಪಾವತಿಗಾಗಿ ಒಪ್ಪೊ ಇಂಡಿಯಾ ನಿಬಂಧನೆಗಳನ್ನು ರವಾನಿಸಿದೆ/ಮಾಡಿದೆ ಎಂದು ತನಿಖೆಯು ಬಹಿರಂಗಪಡಿಸಿದೆ.