ಚೀನಾದಿಂದ 3 ಕೃತಕ ಚಂದ್ರ: ಇನ್ಮುಂದೆ ರಾತ್ರಿಯೂ ಸೂರ್ಯನ ಬೆಳಕು!
ಖಗೋಳ ಜಗತ್ತನ್ನು ತಲ್ಲಣಗೊಳಿಸಲಿದ್ದಾರೆ ಚೀನಾ ವಿಜ್ಞಾನಿಗಳು! ಬಾಹ್ಯಾಕಾಶದಲ್ಲಿ 3 ಕೃತಕ ಚಂದ್ರಗಳ ಸೃಷ್ಟಿಗೆ ಮುಂದಾದ ಚೀನಾ! ಖಗೋಳ ಕನ್ನಡಿಗಳ ಮೂಲಕ ಸೂರ್ಯನ ಬೆಳಕು ಪ್ರತಿಫಲನ! ಇನ್ಮುಂದೆ ರಾತ್ರಿ ವೇಳೆಯಲ್ಲೂ ಸಿಗಲಿದೆ ಸೂರ್ಯನ ಬೆಳಕು
ಬಿಜಿಂಗ್(ಅ.19): ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತನ್ನೇ ಬೆರಗುಗೊಳಿಸಿರುವ ಚೀನಾ, ಇದೀಗ ಬಾಹ್ಯಾಕಾಶದಲ್ಲೂ ತನ್ನ ಛಾಪು ಮೂಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. 2020ರಲ್ಲಿ ಮೂರು ಕೃತಕ ಚಂದ್ರಗಳನ್ನು ಭೂಮಿಯ ಸುತ್ತ ನಿಯೋಜಿಸಲು ಚೀನಾ ಸಿದ್ಧತೆ ನಡೆಸಿದೆ.
ಹೌದು, ಭುಮಿಯ ಸುತ್ತ ಮೂರು ಕೃತಕ ಉಪಗ್ರಹಗಳನ್ನು ಸೃಷ್ಟಿಸಲು ಸಿದ್ಧತೆ ನಡೆಸಿರುವ ಚೀನಾ, 2020ರಲ್ಲಿ ಈ ಮೂರೂ ಚಂದ್ರಗಳು ಭೂಮಿಯ ಗುರುತ್ವಬಲದ ಒಳಗೆ ಭೂಮಿಯನ್ನು ಸುತ್ತಲಿವೆ ಎಂದು ತಿಳಿಸಿದೆ.
ಇಷ್ಟೇ ಅಲ್ಲದೇ ಈ ಚಂದ್ರನಲ್ಲಿ ವಿಸ್ತಾರವಾದ ಖಗೋಳ ಕನ್ನಡಿ(Space Mirrors)ಯನ್ನು ಅಳವಡಿಸಿ, ಅವು ಸೂರ್ಯನ ಬೆಳಕನ್ನು ಪ್ರತಿಫಲಿಸುವಂತೆ ಮಾಡುವುದು ಚೀನಾ ಖಗೋಳ ತಜ್ಞರ ಯೋಜನೆಯಾಗಿದೆ.
ಈಗಾಗಲೇ ಈ ಕೃತಕ ಚಂದ್ರಗಳ ಉಡಾವಣೆ, ಸಮಯ, ಅವು ಭೂಮಿಯನ್ನು ಸುತ್ತುವ ನಿರ್ದಿಷ್ಟ ಅಕ್ಷಾಂಶಗಳ ಕುರಿತು ಅಂತಿಮ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದೂ ಅಲ್ಲಿನ ಪತ್ರಿಕೆ ವರದಿ ಮಾಡಿದೆ.
360 ಡಿಗ್ರಿ ತಿರುಗಬಲ್ಲ ಈ ವಿಶಾಲವಾದ ಖಗೋಳ ಕನ್ನಡಿ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಕೆಲಸ ನಿರ್ವಹಿಸಲಿವೆ. ಈ ಮೂಲಕ ರಾತ್ರಿ ಸಮಯದಲ್ಲೂ ಸೂರ್ಯನ ಬೆಳಕು ಪಡೆಯುವಲ್ಲಿ ವಿಜ್ಞಾನ ಜಗತ್ತು ಯಶಸ್ವಿಯಾಗಲಿದೆ ಎಂಬ ಭರವಸೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
ಸುಮಾರು 3,600 ಚ.ಕಿ.ಮೀ ದಿಂದ 6,400 ಚ.ಕಿ.ಮೀ ವ್ಯಾಪ್ತಿಯಲ್ಲಿ ಈ ಬೆಳಕು ಹರಡಲಿದ್ದು, ರಾತ್ರಿ ವೇಳೆಯಲ್ಲೂ ಪ್ರಖರ ಬೆಳಕನ್ನು ಪಡೆಯಬಹುದಾಗಿದೆ.
ಆದರೆ ಹಗಲು ಮತ್ತು ರಾತ್ರಿಯಿಂದಾಗಿ ಪ್ರಕೃತಿಯ ಸಮತೋಲನ ಸಾಧಿಸಲಾಗಿದ್ದು, ಒಂದು ವೇಳೆ ಈ ಸಮತೋಲನವನ್ನು ತಪ್ಪಿಸಿದರೆ ಜೀವ ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೂ ಇಲ್ಲದ್ದಿಲ್ಲ ಎಂಬುದು ಪ್ರಕೃತಿ ಪ್ರೀಯರ ಅಭಿಪ್ರಾಯವಾಗಿದೆ.
ಆದರೆ ಇದಕ್ಕೂ ಪರಿಹಾರ ಕಂಡುಹಿಡಿದಿರುವ ಖಗೋಳ ವಿಜ್ಞಾನಿಗಳು ಕೃತಕ ಚಂದ್ರಗಳಿಂದ ಪ್ರತಿಫಲನವಾಗುವ ಸೂರ್ಯನ ಬೆಳಕಿನ ಪ್ರಕಾಶವನ್ನು ಖಗೋಳ ಕನ್ನಡಿಗಳ ಮೂಲಕವೇ ನಿಯಂತ್ರಿಸುವ ತಂತ್ರಜ್ಞಾನವನ್ನು ಈ ಯೋಜನೆ ಒಳಗೊಂಡಿದೆ ಎಂದು ತಿಳಿಸಿದ್ದಾರೆ.