ಲ್ಯಾಂಡರ್ ಸಂಪರ್ಕ ತಪ್ಪಿದ್ದು 2.1 ಕಿ. ಮೀ. ನಲ್ಲಿ ಅಲ್ಲ!, ಆಗಿದ್ದೇನು?
ಲ್ಯಾಂಡರ್ ಸಂಪರ್ಕ ತಪ್ಪಿದ್ದು 2.1 ಕಿ. ಮೀನಲ್ಲಿ ಅಲ್ಲ: ಆಗಿದ್ದೇನು?| ಅಚ್ಚರಿ ಮೂಡಿಸಿದೆ ಇಸ್ರೋ ಹೇಳಿಕೆ
ಬೆಂಗಳೂರು[ಸೆ.12]: ಇಡೀ ದೇಶವನ್ನೇ ನಿರಾಸೆಯಲ್ಲಿ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ ಉಂಟಾಗಿದ್ದು 2.1 ಕಿಲೋಮೀಟರ್ ಅಂತರದಲ್ಲಿ ಅಲ್ಲ ಬದಲಿಗೆ ಚಂದ್ರನ ಮೇಲ್ಮೈನಿಂದ ಕೇವಲ 400 ಮೀಟರ್ ಅಂತರದಲ್ಲಿ ಎಂದು ಖಚಿತಪಟ್ಟಿದೆ.
ಸೆ.8ರ ಮುಂಜಾನೆ 1.50ರ ವೇಳೆ ವಿಕ್ರಂ ಲ್ಯಾಂಡರ್ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತ್ತು. 2.18ರ ವೇಳೆಗೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು, ‘ವಿಕ್ರಂ ಲ್ಯಾಂಡರ್‌ನ ಇಳಿವ ಪ್ರಕ್ರಿಯೆಯು ಯೋಜಿತ ರೀತಿಯಲ್ಲೇ ಸಾಗಿದ್ದು ಮತ್ತು 2.1 ಕಿ.ಮೀ ದೂರ ಬಾಕಿ ಇರುವವರೆಗೂ ಸಾಮಾನ್ಯ ಸ್ಥಿತಿಯಲ್ಲೇ ಇತ್ತು. ಬಳಿಕ ಅದು ಭೂಸಂಪರ್ಕ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡಿತ್ತು ಎಂದು ಹೇಳಿದ್ದರು. ಹೀಗಾಗಿ ಎಲ್ಲರೂ, 2.1 ಕಿ.ಮೀ ದೂರ ಕ್ರಮಿಸಲು ಬಾಕಿ ಇರುವಾಗಲೇ ಲ್ಯಾಂಡರ್ ಸಂಪರ್ಕ ಕಡಿದುಕೊಂಡಿತ್ತು ಎಂದು ಭಾವಿಸಿದ್ದರು.
ಆದರೆ ಲ್ಯಾಂಡರ್‌ನ ಚಲನೆಯ ಮಾಹಿತಿ ನೀಡುತ್ತಿದ್ದ ಇಸ್ರೋದ ಗ್ರಾಫ್ ಈ ಕುರಿತು ಸ್ಪಷ್ಟಮಾಹಿತಿ ನೀಡಿದೆ. ಗ್ರಾಫ್‌ನಲ್ಲಿ ಕೆಂಪು ಗೆರೆಯು ಲ್ಯಾಂಡರ್‌ನ ಪಥ ಸೂಚಿಸುತ್ತಿದ್ದರೆ, ಹಸಿರು ಬಣ್ಣವು ಅದರ ಸಂಪರ್ಕದ ಕುರಿತ ಮಾಹಿತಿ ನೀಡುತ್ತಿತ್ತು. ಅದರ ಆಧಾರದಲ್ಲಿ ಹೇಳುವುದಾದರೆ ಲ್ಯಾಂಡರ್ ಇನ್ನು 2.1 ಕಿ.ಮೀ ದೂರ ಕ್ರಮಿಸಲು ಬಾಕಿ ಇರುವಾಗಲೇ ತನ್ನ ಪಥ ಬದಲಿಸಿದ್ದು, ಕೆಂಪು ಗೆರೆಯ ಪಥ ಬದಲಾವಣೆಯ ಮೂಲಕ ಖಚಿತಪಟ್ಟಿತ್ತು.
ಆದರೆ ಹಸಿರು ಗೆರೆಯು ಲ್ಯಾಂಡರ್ ಚಂದ್ರನ ಮೇಲ್ಮೈಗಿಂತ ಕೇವಲ 400 ಮೀ. ಎತ್ತರದವರೆಗೂ ಸಾಗಿ ಬಳಿಕ ತನ್ನ ಚಲನೆ ನಿಲ್ಲಿಸಿತ್ತು. ಈ ಮೂಲಕ ಲ್ಯಾಂಡರ್ ಬಹಳ ದೂರದಿಂದಲೇ ಸಂಪರ್ಕ ಕಡಿದುಕೊಂಡಿಲ್ಲ. ಕೇವಲ 400 ಮೀ ದೂರದಿಂದ ಮಾತ್ರ ಸಂಪರ್ಕ ಕಡಿದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ.