4ನೇ ಬಾರಿಗೆ ಚಂದ್ರಯಾನ ನೌಕೆ ಕಕ್ಷೆ ಎತ್ತರಿಸಿದ ಇಸ್ರೋ: 6ರಂದು ಮತ್ತೆ ಸಾಹಸ!
4ನೇ ಬಾರಿಗೆ ಚಂದ್ರಯಾನ ನೌಕೆ ಕಕ್ಷೆ ಎತ್ತರಿಸಿದ ಇಸ್ರೋ| 6ರಂದು ಮತ್ತೆ ಸಾಹಸ
ಬೆಂಗಳೂರು[ಆ.03]: ಇದುವರೆಗೂ ಯಾವುದೇ ರಾಷ್ಟ್ರಗಳು ತೆರಳದೇ ಇರುವ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಅನ್ನು ಇಳಿಸುವ ಭಾರತದ ಮಹತ್ವಾಕಾಂಕ್ಷೆಯ ಗುರಿ ತಲುಪುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಚಂದ್ರಯಾನ ನೌಕೆಯ ಕಕ್ಷೆ ಎತ್ತರಿಸುವ ನಾಲ್ಕನೇ ಕಸರತ್ತನ್ನು ಶುಕ್ರವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ನೌಕೆಯಲ್ಲಿರುವ ಇಂಧನವನ್ನು 646 ಸೆಕೆಂಡ್ ದಹಿಸಿ ಕಕ್ಷೆ ಎತ್ತರಿಸಲಾಗಿದೆ. ಇದೇ ರೀತಿಯ ಮತ್ತೊಂದು ಸಾಹದ ಆ.6ರಂದು ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಜು.22ರಂದು ಉಡಾವಣೆಯಾದ ಚಂದ್ರಯಾನ- 2, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಸೆ.7ರಂದು ಚಂದ್ರನ ಮೇಲೆ ಇಳಿಯಲಿದೆ,.
‘ಈ ಹಿಂದೆಯೇ ನಿರ್ಧರಿಸಲಾದಂತೆ ಆಂತರಿಕ ಒತ್ತಡವನ್ನು ಬಳಸಿಕೊಂಡು ಬೆಂಕಿ ಹೊತ್ತಿಸುವ ಮೂಲಕ 636 ಸೆಕೆಂಡ್‌ಗಳಲ್ಲಿ 4ನೇ ಹಂತದ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಎತ್ತರಿಸಲಾಗಿದೆ’ ಎಂದು ಇಸ್ರೋ ಹೇಳಿದೆ. ಮುಂದಿನ ಹಂತದ ಕಕ್ಷೆಗೆ ಉಪಗ್ರಹವನ್ನು ಎತ್ತರಿಸುವ ಪ್ರಕ್ರಿಯೆಯು ಆ.6ಕ್ಕೆ ನಿಗದಿಯಾಗಿದೆ. ಕಳೆದ ತಿಂಗಳು ಶ್ರೀಹರಿಕೋಟಾದ ಬಾಹ್ಯಾಕಾಶ ಉಡಾವಣೆ ಕೇಂದ್ರದಿಂದ ಉಡ್ಡಯನಗೊಂಡಿರುವ ಚಂದ್ರಯಾನ-2 ಉಪಗ್ರಹವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದೆ ಇಸ್ರೋ.