ಚಳ್ಳಕೆರೆ ವೀರೇಶ್‌

ಚಂದ್ರನ ಮೇಲ್ಮೈಯನ್ನೇ ಹೋಲುವ ರಚನೆ, ಸುಮಾರು 7 ರಿಂದ 9 ಮೀಟರ್‌ಗಳಷ್ಟುವಿಸ್ತೀರ್ಣದ ಸುಮಾರು 9 ಕಂದಕಗಳು, ಅವುಗಳ ತುಂಬ ವಿಚಿತ್ರ ಕಲ್ಲುಗಳ ಪುಡಿ..

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿಯಲ್ಲಿ ಇತ್ತೀಚೆಗೆ ಸೃಷ್ಟಿಯಾದ ಚಂದ್ರನ ಕೃತಕ ಮೇಲ್ಮೈ ವಿನ್ಯಾಸವಿದು. ಚಂದ್ರಯಾನಕ್ಕೆ ರಿಹರ್ಸಲ್‌ನಂತೆ ಇಸ್ರೋ ಇದನ್ನು ಬಳಸಿಕೊಂಡಿದೆ. ಇಲ್ಲಿ ಅನೇಕ ಪ್ರಯೋಗಗಳನ್ನೂ ನಡೆಸಿದೆ.

ಚಂದ್ರನ ಮೇಲ್ಮೈ ಹೋಲುವಂಥಾ ಸುಮಾರು 3 ಆಳ, 7 ರಿಂದ 9 ಮೀಟರ್‌ಗಳಷ್ಟುವಿಸ್ತೀರ್ಣದ ಸುಮಾರು 9 ಕಂದಕಗಳನ್ನು ಕೃತಕವಾಗಿ ನಿರ್ಮಿಸಲಾಗಿದೆ. 2008ರ ಚಂದ್ರಯಾನದ ವೇಳೆ ಆರ್ಬಿಟರ್‌ ನೌಕೆ ಕಳುಹಿಸಿದ್ದ ಛಾಯಾಚಿತ್ರಗಳನ್ನು ಆಧರಿಸಿ ಈ ಕಂದಕ ನಿರ್ಮಿಸಲಾಗಿದೆ ಎನ್ನಲಾಗಿದೆ. ತಮಿಳುನಾಡಿನ ಸೇಲಂ ಬಳಿಯ ಸೀತಂಪೂಡಿ, ಕುನ್ನಾದಿಂದ ತರಲಾಗಿದ್ದ ಕಲ್ಲುಗಳನ್ನು ಪುಡಿ ಮಾಡಿ ಇದರಲ್ಲಿ ಸುರಿಯಲಾಗಿದೆ. ಚಂದ್ರನ ಮೇಲೆ ಸುತ್ತಿ ಮಾಹಿತಿ ಸಂಗ್ರಹಿಸುವ ಪ್ರಜ್ಞಾನ್‌ ರೋವರ್‌ ಯಾನಕ್ಕೂ ಮೊದಲು ಇಲ್ಲಿ ತಾಲೀಮು ನಡೆಸಿತು ಎನ್ನಲಾಗಿದೆ. ಜೊತೆಗೆ ಇತರ ವೈಜ್ಞಾನಿಕ ಉಪಕರಣಗಳ ತಾಲೀಮಿಗೂ ದೊಡ್ಡ ಉಳ್ಳಾರ್ತಿಯ ಇಸ್ರೋ ಸಂಸ್ಥೆ ಸಾಕ್ಷಿಯಾಗಿದೆ.

ಚಂದ್ರಯಾನ-2 ಕಂಡಂತೆ ವಸುಧೆ: ತಾಯಿಯ ಮಡಿಲಂತೆ ಕಾಣದೆ?

ಉಲ್ಕಾಪಾತದಿಂದ ಚಂದ್ರದ ಮೇಲ್ಮೈಯಲ್ಲಿ ಅನೇಕ ಕುಳಿಗಳಾಗಿವೆ. ಇಲ್ಲಿರುವ ಕೆಲವು ಕಂದಕಗಳ ಮೇಲೆ ಈ ಕುಳಿಗಳನ್ನು ಕೃತಕವಾಗಿ ನಿರ್ಮಿಸಲಾಗಿದೆ. ಸುಮಾರು ಮೂರು ವರ್ಷಗಳಿಂದ ತರಬೇತಿಯ ನಂತರ ಬಾಹ್ಯಕಾಶದ ತಾಲೀಮು ನಡೆಸಲು ಸಿದ್ದತೆ ನಡೆಸಲಾಗಿದೆ. ಇದರಿಂದ ಚಂದ್ರನ ಮೇಲ್ಮೈಯಲ್ಲಿನ ವಾತಾವಾವರಣ, ಅಲ್ಲಿನ ಸ್ಥಿತಿಯ ಬಗ್ಗೆ ರೋವರ್‌ ಅರ್ಥೈಸಿಕೊಳ್ಳುವಂತಾಗುತ್ತದೆ ಎನ್ನುವ ಉದ್ದೇಶ ಇದರ ಹಿಂದಿರಬಹುದು ಎಂದು ಅಂದಾಜಿಸಲಾಗಿದೆ.

ಚಳ್ಳಕೆರೆ ವೈಮಾನಿಕ ಪ್ರಯೋಗಶಾಲೆ

ಈ ಎಲ್ಲ ಪ್ರಯೋಗಗಳಿಗೆ ಚಳ್ಳಕೆರೆಯನ್ನು ಆರಿಸಲು ಕಾರಣ ಈ ಪ್ರದೇಶದ ವಿಶಿಷ್ಟಭೌಗೋಳಿಕ ವಿನ್ಯಾಸ. ಯಾವುದೋ ಒಂದು ಆ್ಯಂಗಲ್‌ನಲ್ಲಿ ಈ ಪ್ರದೇಶ ಚಂದ್ರನ ಮೇಲ್ಮೈಯನ್ನು ಹೋಲುತ್ತದಂತೆ. ಜೊತೆಗೆ ತಮಿಳ್ನಾಡಿನಿಂದ ತರಿಸಲಾದ ಬಂಡೆಗಳನ್ನು, ಕಲ್ಲಿನ ಪುಡಿಗಳನ್ನು ಇಲ್ಲಿ ಹಾಕಿದಾಗ ಚಂದ್ರನ ಮೇಲ್ಮೈ ಹೋಲಿಕೆ ಇನ್ನಷ್ಟುದಟ್ಟವಾಯಿತು ಎನ್ನಲಾಗಿದೆ. ಚಿತ್ರದುರ್ಗದ ಚಿಕ್ಕ ಊರೊಂದು ಈ ಮೂಲಕ ವಿಶ್ವ ನಕಾಶೆಯಲ್ಲಿ ಗುರುತಿಸಿಕೊಂಡಿದ್ದು ವಿಶೇಷ.