ಚಂದ್ರಯಾನ2: ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮ್ಯಾನೋವರ್ ಯಶಸ್ವಿ!
ದಿನದಿಂದ ದಿನಕ್ಕೆ ಚಂದ್ರನಿಗೆ ಹತ್ತಿರವಾಗುತ್ತಿರುವ ಚಂದ್ರಯಾನ-2 ನೌಕೆ| ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮ್ಯಾನೋವರ್ ಪ್ರಕ್ರಿಯೆ ಯಶಸ್ವಿ| 4 ಸೆಕೆಂಡ್ ಗಳ ಕಾಲ ಮೂನ್ ಲ್ಯಾಂಡರ್'ನ ಎಂಜಿನ್ ಚಾಲನೆ| ನಾಳೆ(ಸೆ.04)ಎರಡನೇ ಹಂತದ ಕಾರ್ಯಾಚರಣೆಗೆ ಮುಂದಾಗಲಿರುವ ಇಸ್ರೋ|
ನವದೆಹಲಿ(ಸೆ.03): ಚಂದ್ರಯಾನ-2 ನೌಕೆ ದಿನದಿಂದ ದಿನಕ್ಕೆ ಚಂದ್ರನಿಗೆ ಹತ್ತಿರವಾಗುತ್ತಿದ್ದು, ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮ್ಯಾನೋವರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ನಿನ್ನೆಯಷ್ಟೇ ಚಂದ್ರಯಾನ 2 ಆರ್ಬಿಟರ್'ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು, ಇದೀಗ ಚಂದ್ರನ ಮೇಲ್ಮೈನತ್ತ ಮೂನ್ ಲ್ಯಾಂಡರ್ ಅನ್ನು ತಳ್ಳುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಮೂನ್ ಲ್ಯಾಂಡರ್'ನ ಎಂಜಿನ್ ಅನ್ನು ಸುಮಾರು 4 ಸೆಕೆಂಡ್ ಗಳ ಕಾಲ ಚಾಲನೆ ಮಾಡುವ ಮೂಲಕ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮ್ಯಾನೋವರ್ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ನಾಳೆ(ಸೆ.04) ಎರಡನೇ ಹಂತದ ಕಾರ್ಯಾಚರಣೆ ನಡೆಯಲಿದ್ದು, 39X110ಕಿ,ಮೀ ವ್ಯಾಪ್ತಿಯೊಳಗೆ ಮೂನ್ ಲ್ಯಾಂಡರ್ ಅನ್ನು ಚಂದ್ರನ ಹತ್ತಿರಕ್ಕೆ ತಳ್ಳಲಾಗುವುದು ಎಂದು ಇಸ್ರೋ ಸ್ಪಷ್ಟಪಡಿಸಿದೆ.