ಬೆಂಗಳೂರು (ಜು.06): ಖಾಸಗಿ ಕಂಪನಿಗಳಿಗೆ ಸೆಡ್ಡುಹೊಡೆಯಲು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ  BSNL ಹೊಸ ಪ್ರಯೋಗಕ್ಕೆ ಮುಂದಾಗಿದೆ. ತನ್ನ ವ್ಯಾಪಾರವನ್ನು ಬಲಪಡಿಸುವ ನಿಟ್ಟಿನಲ್ಲಿ Voice over Wi-Fi ಸೇವೆಯನ್ನು ಒದಗಿಸುವ ಕೆಲಸಕ್ಕೆ ಕೈ ಹಾಕಿದೆ. 

VoWiFi (Voice over Wi-Fi) ವ್ಯವಸ್ಥೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ, ಬಳಕೆದಾರರು ವೈ-ಫೈ ಇಂಟರ್ನೆಟ್ ಬಳಸಿ ಕರೆಗಳನ್ನು ಮಾಡಬಹುದಾಗಿದೆ.ಡೇಟಾ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಮೊಬೈಲ್ ಬಳಕೆದಾರರು ಇಂಟರ್ನೆಟ್ ಕಾಲ್‌ಗಳನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | ಟ್ರಿಣ್ ಟ್ರಿಣ್ ಟ್ರೀನ್ ಟ್ರೀನ್.. ಟ್ರೀಈನ್...... BSNL ಅಂತ್ಯ ಸನ್ನಿಹಿತ?

VoWiFi ತಂತ್ರಜ್ಞಾನದ ಆಧಾರದಲ್ಲಿ ಕೆಲಸ ಮಾಡೋ ಸ್ಕೈಪ್, ವಾಟ್ಸಪ್‌ನಂತಹ ಕಂಪನಿಗಳಿಗೆ ಪೈಪೋಟಿ ನೀಡಲು ಭಾರ್ತಿ ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋ ಈಗಾಗಲೇ ಈ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದ್ದು, ಶೀಘ್ರದಲ್ಲೇ ಚಾಲನೆ ನೀಡಲಿವೆ.

ಮೊಬೈಲ್ ಸಿಗ್ನಲ್ ಇಲ್ಲದೆಯೂ ಕರೆ ಮಾಡುವ ಸೌಲಭ್ಯ ಒದಗಿಸುವ Over-The-Top (OTT) ಕಂಪನಿಗಳಾಗಿರುವ ವಾಟ್ಸಪ್, ಹೈಕ್, ಸ್ಕೈಪ್, ಫೇಸ್ಬುಕ್, ಗೂಗಲ್‌ನಂತಹ ಕಂಪನಿಗಳು ಹೆಚ್ಚಾಗುತ್ತಿದ್ದು, ಮೊಬೈಲ್ ಕಂಪನಿಗಳ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿದೆ. ಅವುಗಳ ಬಗ್ಗೆ ಭಾರತೀಯ ಟೆಲಿಕಾಂ ಕಂಪನಿಗಳು ದೂರು ಸಲ್ಲಿಸುತ್ತಲೇ ಬಂದಿವೆ. ಆ ಸೇವೆಗಳನ್ನು ‘ಪರವಾನಿಗೆ’ ವ್ಯಾಪ್ತಿಗೆ ತರಬೇಕೆಂದು ಅವು ಆಗ್ರಹಿಸಿವೆ.

ಇದನ್ನೂ ಓದಿ | BSNLನಿಂದ ಬಿಗ್ ಆಫರ್; ಇಂಟರ್ನೆಟ್ ಬಳಕೆದಾರರಿಗೆ ಹೊಸ, ಉಚಿತ ಸೇವೆ!

ಮೊಬೈಲ್ ನೆಟ್ವರ್ಕ್ ದುರ್ಬಲವಿರುವ ಅಥವಾ ಅಲಭ್ಯವಿರುವ ಕಡೆಗಳಲ್ಲಿ ಈ ಸೇವೆಯನ್ನು ಆರಂಭಿಸಲು BSNL ನಿರ್ಧರಿಸಿದೆ. ಮುಂದಿನ ಹಂತಗಳಲ್ಲಿ ದೇಶದ ಎಲ್ಲಾ ಕಡೆ ಇದನ್ನು ವಿಸ್ತರಿಸುವ ಯೋಜನೆ BSNL  ಹಾಕಿದೆ.